ಬೆಂಗಳೂರು : ರಂಗ ಬದುಕು ಟ್ರಸ್ಟ್ (ರಿ.) ಬೆಂಗಳೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಡಾ. ಬೇಲೂರು ರಘುನಂದನ್ ರಚನೆ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ಮೈಸೂರಿನ ಡಾ. ಹೆಲನ್ ಅಭಿನಯದ ಏಕವ್ಯಕ್ತಿ ಪ್ರಯೋಗ ಮಾನವತಾವಾದಿ ‘ಥೆರೇಸಮ್ಮ’ (ಮದರ್) ನಾಟಕ ಪ್ರದರ್ಶನವು ದಿನಾಂಕ 05-04-2024ರಂದು ಸಂಜೆ ಗಂಟೆ 4.00ಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಡಾ. ಬೇಲೂರು ರಘುನಂದನ್, ನಾಟಕಕಾರ ಮತ್ತು ನಿರ್ದೇಶಕ :
ಸಾಹಿತ್ಯ ಕ್ಷೇತ್ರ ಹಾಗೂ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ರಘುನಂದನ್, ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. ತಾವೇ ರಂಗರೂಪಗೊಳಿಸಿರುವ ‘ಅಕ್ಕಯ್’ ‘ಲೆಟರ್ಸ್ ಟು ಡೆತ್’. ‘ನಗರಪೂಜೆ’, ‘ಅಲೆಮಾರಿ ಭಾರತ’ ‘ಮಾತಾ’ ‘ಅಧಿನಾಯಕಿ’ ‘ಗರ್ಭ’ ಮುಂತಾದ ನಾಟಕಗಳನ್ನು ನಿರ್ದೇಶಿಸಿ ಯಶಸ್ವಿಯಾಗಿದ್ದಾರೆ.
ಹುಟ್ಟಿದ್ದು ಹಾಸನ ಜಿಲ್ಲೆಯ ಬೇಲೂರಿನಲ್ಲಿ ಅಲ್ಲಿಯೇ ಪದವಿ ಶಿಕ್ಷಣ ಪೂರೈಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಷ್ಟ್ರಕವಿ ಕೆ.ವಿ. ಪುಟ್ಟಪ್ಪ ಚಿನ್ನದ ಪದಕ ಸೇರಿದಂತೆ, ಮೂರು ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ. ಮಾಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು : ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಎಂ.ಫಿಲ್ ಪದವಿ ಹಾಗೂ ‘ಕನ್ನಡ ರಂಗಭೂಮಿ ಮತ್ತು ಸಿನೆಮಾ : ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ಎಂಬ ವಿಷಯದಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ.
ಬಾಲ್ಯದಿಂದಲೇ ರಂಗಭೂಮಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರವಾದ ಒಲವಿರುವ ಇವರು ಕಾವ್ಯ ಕಟ್ಟುಪದ, ನಾಟಕ, ಮಕ್ಕಳ ಸಾಹಿತ್ಯ, ಪ್ರವಾಸ ಸಾಹಿತ್ಯ, ಅಂಕಣಬರಹ, ಕಥೆ, ಸಂಪಾದನೆ, ಸಂಶೋಧನೆ ಮತ್ತು ವಿಮರ್ಶೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಭಿನ್ನ ವಸ್ತು, ನಿರೂಪಣೆ, ಕಥನತಂತ್ರ ಮತ್ತು ನಾಟಕೀಯ ಅಂಶಗಳ ಮೂಲಕ ಅತ್ಯಂತ ಸಮರ್ಥ ನಾಟಕಗಳನ್ನು ಕನ್ನಡ ರಂಗಭೂಮಿ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡುತ್ತಿದ್ದಾರೆ. ಸಾಲು ಸಾಲಾಗಿ ಪುಯೋಗಗೊಳ್ಳುತ್ತಿರುವ ಇವರ ನಾಟಕಗಳು ರಂಗಾಸಕ್ತರ ಪ್ರಶಂಸೆಗೆ ಪಾತ್ರವಾಗಿವೆ. ಇವರು ರಚಿಸಿರುವ ಇನ್ನೂರೈವತ್ತಕ್ಕೂ ಹೆಚ್ಚು ರಂಗಗೀತೆಗಳು ಪ್ರೇಕ್ಷಕರ ಮನಮುಟ್ಟಿವೆ. ಇವರ ನಾಟಕಗಳು ಇಂಗ್ಲೀಷ್, ಹಿಂದಿ, ಕೊಂಕಣಿ ಹಾಗೂ ತಮಿಳು ಭಾಷೆಗಳಿಗೆ ಅನುವಾದಗೊಂಡಿದೆ. ಜೊತೆಗೆ ನಟನಾಗಿಯೂ ರಘುನಂದನ್ ಯಶಸ್ವಿಯಾಗಿದ್ದಾರೆ. 2009ರಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಗೆ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡ ಇವರನ್ನು 2017ರಲ್ಲಿ ಕರ್ನಾಟಕ ಸರ್ಕಾರ, ಕರ್ನಾಟಕ ನಾಟಕ ಅಕಾಡೆಮಿಗೆ ಸದಸ್ಯನನ್ನಾಗಿ ನೇಮಿಸಿತ್ತು. ಇವರ ಸಾಹಿತ್ಯಕ, ಸಾಂಸ್ಕೃತಿಕ ಸಾಧನೆಯನ್ನು ಪರಿಗಣಿಸಿ, ಬೇಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ 2019ನೇ ಸಾಲಿನ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿ ಬೇಲೂರಿನ ಜನತೆ ಇವರನ್ನು ಗೌರವಿಸಿದೆ.
ಕುವೆಂಪು ಯುವಕವಿ ಪುರಸ್ಕಾರ, ಬೇಂದ್ರೆ ಗ್ರಂಥ ಬಹುಮಾನ, ಸಾಲುಮರದ ತಿಮ್ಮಕ್ಕ ಹಸಿರು ಪ್ರಶಸ್ತಿ, ತೇಜಸ್ವಿ ಕಟ್ಟಿಮನಿ ಯುವ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ನೇಸರು ಜಾಗತಿಕ ಏಕಾಂಕ ನಾಟಕ ಪ್ರಶಸ್ತಿ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ, ಆರ್ಯಭಟ ಪುರಸ್ಕಾರ, ‘ಆಯಾಮ’ ನಾಟಕಕ್ಕೆ ಶಿವಮೊಗ್ಗದ ರಂಗ ಕಲಾವಿದರ ಒಕ್ಕೂಟದಿಂದ ಬಹುಮಾನ, ಬೆಂಗಳೂರು ಕಿರು ನಾಟಕೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಹಶ್ಮಿ ಥಿಯೇಟರ್ ನಡೆಸಿದ ಎನಾಕ್ಸ್ ರಂಗೋತ್ಸವದಲ್ಲಿ ಅತ್ಯುತ್ತಮ ನಾಟಕಕಾರ ಪ್ರಶಸ್ತಿ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು, ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲ ಖಾನ್ ಪ್ರಶಸ್ತಿ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ ಮಯೂರವರ್ಮ ಪ್ರಶಸ್ತಿಗಳು ಇವರ ಸಾಹಿತ್ಯ ಮತ್ತು ರಂಗ ಕೃಷಿಗೆ ಸಂದಿರುವುದು ಬೇಲೂರರ ಕಾಯಕಕ್ಕೆ ಮೆರಗು ತಂದುಕೊಟ್ಟಿದೆ.
ಡಾ. ಹೆಲನ್ ಮೈಸೂರು, ರಂಗಭೂಮಿ ಕಲಾವಿದರು :
ಹೆಲನ್ ಇವರು ಬಾಲ ಕಲಾವಿದೆಯಾಗಿ 1964ರಲ್ಲಿ ಕೃಷ್ಣಲೀಲೆ ನಾಟಕದಲ್ಲಿ ಬಾಲಕೃಷ್ಣನ ಪಾತ್ರಕ್ಕೆ ರಂಗಪ್ರವೇಶವಾಯಿತು, ಗುಬ್ಬಿ ವೀರಣ್ಣ ಕಂಪನಿಯಲ್ಲಿ ಇವರ ತಾಯಿಯವರಾದ ಶ್ರೀಮತಿ ಥೆರೆಸಮ್ಮ ಡಿಸೋಜರು ಕಂಪನಿಯಲ್ಲಿ ಪ್ರಮುಖಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು.
ರಂಗಭೂಮಿ ಜೊತೆಗೆ ಭರತನಾಟ್ಯವನ್ನು ವಿದುಷಿ ಚೂಡಾಮಣಿಯವರಿಂದ ಕಲಿತಿರುವ ಇವರು ಹುಚ್ಚೇಶ್ವರ ನಾಟ್ಯ ಸಂಘ, ಕಮತಗಿ, ಚಿಂದೋಡಿಲೀಲಾ ನಾಟಕ ಕಂಪನಿ, ಹಾನಗಲ್ ಗುಡಿಗೇರಿ ಕಂಪನಿ, ಮಿನುಗುತಾರೆ ಕಲ್ಪನ, ಬಿ.ವಿ. ರಾಧಾ, ಕಲ್ಯಾಣ್ ಕುಮಾರ್ ಇವರ ನಾಟಕದ ಕಂಪನಿ ಹಾಗೂ ಅನೇಕ ವೃತ್ತಿ ಕಂಪನಿಗಳಲ್ಲಿ ಸೇವೆ ಮಡುತ್ತಾ ಬಂದಿದ್ದಾರೆ.
ಬಾಲಿವುಡ್ ಹಿರಿಯ ನಟರಾದ ಭಗವಾನ್ ಹಾಗೂ ಮೀನಾ ಟಿ. ಇವರೊಂದಿಗೆ ಅನೇಕ ರಸಮಂಜರಿ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡುತ್ತಾ ಆಡಿಯೋ-ವಿಡಿಯೋ ಸಾಮಾಜಿಕ ಜಾಲತಾಣ (ಯೂಟ್ಯೂಬ್)ದಲ್ಲಿ ಸುಮಾರು 3,500 ನಾಟಕದಲ್ಲಿ ಅಭಿನಯಿಸಿ, ನಿರ್ದೇಶನ ಮಾಡಿರುತ್ತಾರೆ. 2014ರಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿಯಿಂದ ಪ್ರಶಸ್ತಿ, ಸಂಪೂರ್ಣ ವಾಲ್ಮೀಕಿ ರಾಮಾಯಣವನ್ನು 03 ಗಂಟೆಗಳ ಕಾಲ ಏಕವ್ಯಕ್ತಿಯಾಗಿ 111 ಪಾತ್ರವನ್ನು ಮಾಡಿ, ವಿಶ್ವದಾಖಲೆಯನ್ನು ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಗಿನ್ನೀಸ್ ವಿಜೇತಳಾಗಿರುತ್ತಾರೆ. ಈ ನಾಟಕಕ್ಕೆ ಡಾಕ್ಟರೇಟ್ ಪದವಿಯನ್ನು ಕೂಡಾ ಪಡೆದಿರುತ್ತಾರೆ.
ನಂತರದಲ್ಲಿ ಇವರದೇ ಆದ ‘ರಂಗಬದುಕು ಟ್ರಸ್ಟ್’ ಎಂಬ ತಂಡವನ್ನು ಕಟ್ಟಿ ಗ್ರಾಮೀಣದ ಬಡ ಯುವಕ/ಯುವತಿಯರಿಗೆ ರಂಗತರಬೇತಿಯನ್ನು, ಮಂಗಳಮುಖಿಯವರನ್ನು ಅವರ ಭಿಕ್ಷಾಟನೆಯನ್ನು ಬಿಡಿಸಿ ಸುಮಾರು 500 ಜನರನ್ನು ರಂಗಭೂಮಿಯ ಕಲಾವಿದರನ್ನಾಗಿ ಮಾಡಿಸಿರುತ್ತಾರೆ. 2019-20ನೇ ಮತ್ತು 2020-21ನೇ ಸಾಲಿನಲ್ಲಿ ಕೊರೋನಾ-19 ಸಾವಿರಾರು ಜನರಿಗೆ ಪ್ರತಿ ಊರು, ಹಳ್ಳಿಗಳಲ್ಲಿ ನಾಟಕದ ಮುಖಾಂತರ ಜಾಗೃತಿಯನ್ನು ಮೂಡಿಸಿ, ಆಹಾರಧಾನ್ಯ (ದಿನಸಿ)ವನ್ನು ವಿತರಿಸಿ. ಭ್ರೂಣಹತ್ಯೆ, ಕರೋನಾ -19 ಜಾಗೃತಿ, ವೃದ್ಧಾಶ್ರಮ, ಬಾಡಿಗೆ ತಾಯಿ (ಗರ್ಭದ ಮಾರಾಟ) ಇದರ ಕುರಿತು ನಾಟಕದಿಂದ ಜಾಗೃತಿಯನ್ನು ಮೂಡಿಸಿರುತ್ತಾರೆ. ದಾವಣಗೆರೆ, ಬೆಂಗಳೂರು ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ರಂಗತರಬೇತಿಯನ್ನು ಹಾಗೂ ಕರ್ನಾಟಕ ಸರ್ಕಾರದ ರಂಗಾಯಣದಲ್ಲಿ ರಂಗ ಸಮಾಜದ ಸದಸ್ಯೆಯಾಗಿ ರಂಗಭೂಮಿಯನ್ನೇ ಈಗಲೂ ತನ್ನ ವೃತ್ತಿಯನ್ನಾಗಿಸಿಕೊಂಡಿರುತ್ತಾರೆ.