ಮಂಗಳೂರು : ತುಳುಕೂಟ ಕುಡ್ಲ ಸಂಸ್ಥೆ ಆಯೋಜಿಸಿದ ‘ತುಳುವೆರೆ ಬಿಸು ಪರ್ಬ ಸಂಭ್ರಮೊ’ ಕಾರ್ಯಕ್ರಮವು ದಿನಾಂಕ 14-04-2024ರಂದು ಮಂಗಳೂರಿನ ಶ್ರೀಕ್ಷೇತ್ರ ಮಂಗಳಾದೇವಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕ.ಸಾ.ಪ. ದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ತೌಳವರ ಆಚರಣೆಗಳು, ಆಚಾರ- ವಿಚಾರಗಳು, ಪ್ರಾಚೀನವಾದುದು. ಹಬ್ಬಹರಿದಿನ, ಸಂಸ್ಕೃತಿ ಸಂಸ್ಕಾರಗಳು ನಿತ್ಯವೋ ಎಂಬಂತೆ ನಡೆಯುತ್ತಿದೆ. ದಿನ – ವಾರ – ನಕ್ಷತ್ರ ಎಲ್ಲವೂ ತುಳುವರ ಪಾಲಿಗೆ ಶುಭವಾಗಿಯೇ ಇರುತ್ತದೆ. ಅಂತೆಯೇ ಈ ವಿಷು ಹಬ್ಬ ಕೂಡಾ. ಹಬ್ಬಗಳಿಗೆ ಆದಿಯಾಗಿ ಸೌರಮಾನ ಯುಗಾದಿಯನ್ನು ವಿಷುಕಣಿ ಉತ್ಸವವಾಗಿ ಆಚರಿಸುತ್ತೇವೆ. ಇಂದು ನಡೆವ ಶುಭಸಂಗತಿಗಳು ವರ್ಷಪೂರ್ತಿ ನಡೆಯುತ್ತವೆ ಎಂಬ ನಂಬಿಕೆ. ತುಳುಕೂಟ ಈ ಬಿಸು ಪರ್ಬವನ್ನು ಆಚರಿಸಿ ಜನರನ್ನು ಜಾಗ್ರತಗೊಳಿಸುವ ಕಾರ್ಯವನ್ನು ನಡೆಸುತ್ತಾ ಬರುತ್ತಿದೆ. ಕ್ರೋಧಿ ನಾಮ ಸಂವತ್ಸರ ಎಲ್ಲರಿಗೂ ಒಳಿತನ್ನೇ ಉಂಟುಮಾಡಲಿ.” ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮರೋಳಿ ಬಿ. ದಾಮೋದರ ನಿಸರ್ಗ ಮಾತನಾಡಿ “ಕೃಷಿ ಹಾಗೂ ಸಂಸ್ಕೃತಿ ನಮ್ಮ ತುಳುವರ ಜೀವನ ಪದ್ಧತಿಯನ್ನು ವಿವರಿಸುತ್ತದೆ. ಇಂದು ಪ್ರಕೃತಿಯಿಂದ ನಾವು ಬೆಳೆದು ಸಂಗ್ರಹಿಸಿದ ಹೊಸ ಹಣ್ಣು, ಫಲ ಹಾಗೂ ತರಕಾರಿಗಳನ್ನು ಮನೆಗೆ ಸಂಭ್ರಮದಿಂದ ತಂದು ಕಣಿ ಇಟ್ಟು ಮುಂಜಾನೆ ಬೇಗ ಎದ್ದು ಕಣಿ ದರ್ಶಿಸಿ ಹೊಸತು ಉಡುಗೆ ತೊಟ್ಟು ಸಂಭ್ರಮಿಸಿ ಸಿಹಿ ಹಂಚಿ ತಿನ್ನುವ ಕಾಲ. ತುಳುಕೂಟ ಲಾಗಾಯ್ತಿನಿಂದ ಈ ಹಬ್ಬಗಳ ಮೂಲಕ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ಇದಕ್ಕೆ ದೇಶ ವಿದೇಶಗಳಲ್ಲಿರುವ ತುಳುವರ ಪ್ರೋತ್ಸಾಹ ಇರಲಿ.” ಎಂದು ಸಮಸ್ತ ತುಳುವರಿಗೆ ಕರೆಯಿತ್ತರು.
ಕಾರ್ಯಕ್ರಮಮದಲ್ಲಿ ಉಪನ್ಯಾಸಕಿಯಾಗಿ ಆಗಮಿಸಿದ ನಮ್ಮ ಕುಡ್ಲ ತುಳು ವಾರ್ತಾವಾಹಿನಿಯ ವಾರ್ತಾ ವಾಚಕಿ ಡಾ. ಪ್ರಿಯಾ ಹರೀಶ್ ಮಾತನಾಡಿ “ಬಿಸು ಪರ್ಬದ ಮಹತ್ವ, ಆಚರಣೆ, ಮುಂದಿನ ಪೀಳಿಗೆ ಅನುಸರಿಸಲು ಉತ್ತಮ ಮಾರ್ಗದರ್ಶನ ಈ ಕಾರ್ಯಕ್ರಮಗಳಿಂದ ಸಾಧ್ಯ. ಇದು ತಲೆತಲಾಂತರದಿಂದ ಬಂದಿದ್ದು ಹಾಗೆಯೇ ಪ್ರಮುಖ ವಾಹಿನಿಗೆ ಹರಿದು ಹೋಗಬೇಕು.” ಎಂದು ಕೇಳಿದರು.
ದೇವಳದ ಮೊಕ್ತೇಸರರಾದ ಶ್ರೀ ಹರೀಶ್ ಐತಾಳ್ ದೀಪ ಪ್ರಜ್ವಲಿಸಿ ‘ಬಿಸುಪರ್ಬ’’ವನ್ನು ಉದ್ಘಾಟಿಸಿ ಶುಭಕೋರಿದರು. ಬೈಕಂಪಾಡಿಯ ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ಶ್ರೀ ಸುಧಾಕರ ಕುಲಾಲ್ ಹಾಗೂ ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ ಮುಖ್ಯ ಅತಿಥಿಗಳಾಗಿ ಶುಭಕೋರಿದರು. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದ ‘ರತ್ನವರ್ಮ ಹೆಗ್ಗಡೆ ಪ್ರಶಸ್ತಿ’ 24ನ್ನು ಉಪಾಧ್ಯಕ್ಷ ಪೆಲತ್ತಡಿ ಪದ್ಮನಾಭ ಕೋಟ್ಯಾನ್ ಪ್ರದಾನಿಸಿದರು. ನ್ಯಾಯವಾದಿ ಶಶಿರಾಜ್ ರಾವ್ ಕಾವೂರು, ನವೀನ ಪಡ್ರೆ, ಆನಂದ ಕುಂದರ್ ಎಲ್ಲೂರು ಇವರಿಗೆ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ವಿಜೇತರ ಪರಿಚಯವನ್ನು ಚಂದ್ರಶೇಖರ ಸುವರ್ಣ, ಭಾಸ್ಕರ ಕುಲಾಲ್ ಬರ್ಕೆ ಹಾಗೂ ಹೇಮಾ ಡಿ. ನಿಸರ್ಗ ನಿರ್ವಹಿಸಿದರು. ಶ್ರೀರಮೇಶ್ ಕುಲಾಲ್ ಬಾಯಾರು, ವಿಶ್ವನಾಥ ಪೂಜಾರಿ ಸೋಣಳಿಕೆ, ಶ್ರೀ ಪಿ. ಎ. ಪೂಜಾರಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜೆ. ವಿ.ಶೆಟ್ಟಿ. ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ನಿರೂಪಿಸಿ, ಶ್ರೀ ನಾರಾಯಣ ಬಿ. ಡಿ. ಯವರು ಧನ್ಯವಾದವಿತ್ತರು. ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ವಿದ್ವಾನ್ ಸುರೇಶ್ ಅತ್ತಾವರ್ ನಿರ್ದೇಶನದ ಚಕ್ರಪಾಣಿ ನೃತ್ಯ ತಂಡದವರಿಂದ ‘ಬಿಸು ನೃತ್ಯ ವೈಭವೊ’ ಎಂಬ ತುಳು ಸಂಸ್ಕೃತಿಯನ್ನು ಸಾರುವ ನೃತ್ಯವೈಭವ ನಡೆಯಿತು. ಕಲಾವಿದ ತೋನ್ಸೆ ಪುಷ್ಕಳ ಕುಮಾರ್ ಕಲಾವಿದರನ್ನು ಪರಿಚಯಿಸಿದರು.