ಉಡುಪಿ : ಉಡುಪಿ ಮಟಪಾಡಿಯ ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ಶ್ರೀ ಮಟಪಾಡಿ ಪ್ರಭಾಕರ್ ಆಚಾರ್ಯ ದಿನಾಂಕ 19-04-2024ರಂದು ಉಡುಪಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದರು ಅವರಿಗೆ 63ವರ್ಷ ವಯಸ್ಸಾಗಿತ್ತು.
ಯಕ್ಷಗಾನದ ಖ್ಯಾತ ಮದ್ದಳೆವಾದಕ ಶ್ರೀ ಶಂಕರ ಆಚಾರ್ಯ ಮತ್ತು ಶ್ರೀಮತಿ ಕಲ್ಯಾಣಿ ದಂಪತಿಯ ಪ್ರಥಮ ಮಗನಾಗಿ ದಿನಾಂಕ 01-06-1961ರಲ್ಲಿ ಜನಿಸಿದ ಇವರು ತೋನ್ಸೆ ಜಯಂತ ಕುಮಾರ ಇವರ ಶಿಷ್ಯರಾಗಿ ಯಕ್ಷಗಾನದಲ್ಲಿ ಪ್ರಭುತ್ವವನ್ನು ಸಾಧಿಸಿದರು. ಉತ್ತಮ ಭಜನೆ ಗಾಯಕರಾಗಿದ್ದ ಇವರು ಹಲವಾರು ಭಜನೆ ಕಾರ್ಯಕ್ರಮಗಳಲ್ಲಿ ಹಾಗೂ ಶನಿಕಥಾ ಪಾರಾಯಣಗಳಲ್ಲಿ ಭಾಗವಹಿಸಿದ್ದರು. ತಮ್ಮ 14ನೇ ವಯಸ್ಸಿನಿಂದ ಯಕ್ಷಗಾನ ಕ್ಷೇತ್ರದಲ್ಲಿ ದುಡಿದು ಹಾಸ್ಯ ಕಲಾವಿದ ಎಂದೇ ಪ್ರಸಿದ್ಧರಾಗಿದ್ದರೂ ಯಕ್ಷಗಾನದ ಎಲ್ಲಾ ಪ್ರಕಾರಗಳಲ್ಲೂ ಕೈಯಾಡಿಸಿ ಪಳಗಿದವರು. ಉತ್ತಮ ಅರ್ಥದಾರಿಯಾಗಿದ್ದ ಇವರು ಹಲವಾರು ತಾಳಮದ್ದಳೆ ಗಳಲ್ಲಿ ಭಾಗವಹಿಸಿದ್ದರು ಹಾಗೂ ಮಟಪಾಡಿ ನಂದಿಕೇಶ್ವರ ಯಕ್ಷಗಾನ ಸಂಘದ ಅಧ್ಯಕ್ಷರಾಗಿದ್ದರು.
ಶ್ರೀಯುತರು ಪತ್ನಿ ವಸಂತಿ ಆಚಾರ್ಯ, ಮಕ್ಕಳಾದ ಶ್ರೀ ಸುಬ್ರಹ್ಮಣ್ಯ ಆಚಾರ್ಯ, ಶ್ರೀಮತಿ ಸುಕನ್ಯಾ ಆಚಾರ್ಯ, ಕುಮಾರಿ ಸುಮನಾ ಆಚಾರ್ಯ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಇವರ ಅಂತ್ಯ ಸಂಸ್ಕಾರವು ದಿನಾಂಕ 20-04-2024ರಂದು ಅಪರಾಹ್ನ ಘಂಟೆ 2.00ಕ್ಕೆ ಮಟಪಾಡಿಯಲ್ಲಿ ನಡೆಯಲಿದೆ.