ಉಡುಪಿ : ಯಕ್ಷಗಾನ ಲೋಕದ ಶ್ರೇಷ್ಠ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ದಿನಾಂಕ 25-04-2024 ರಂದು ತಮ್ಮ ಬೆಂಗಳೂರಿನ ಪುತ್ರನ ಮನೆಯಲ್ಲಿ ನಿಧನರಾದರು. ಅವರಿಗೆ 67ವರ್ಷ ವಯಸ್ಸಾಗಿತ್ತು.
ಕಾಳಿಂಗ ನಾವುಡರ ಬಳಿಕ ಮಧುರ ಕಂಠದಿಂದ ಹೆಚ್ಚು ಜನಪ್ರಿಯತೆಗಳಿಸಿದ್ದ ಇವರು ಬಡಗುತಿಟ್ಟು ಯಕ್ಷಗಾನ ಅಭಿಮಾನಿಗಳಲ್ಲಿ ‘ಗಾನಕೋಗಿಲೆ’ ಎಂದೇ ಜನಪ್ರಿಯರಾಗಿದ್ದರು. ಸುಮಾರು 46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಇವರು ಪತ್ನಿ, ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ ಕಾರ್ತಿಕ್, ಪುತ್ರಿ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.
05-09-1957 ರಂದು ಗೋಕರ್ಣದಲ್ಲಿ ಜನಿಸಿದ್ದ ಇವರು ಯಕ್ಷಗಾನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರು. ನಾರಾಯಣಪ್ಪ ಉಪ್ಪೂರ ಶಿಷ್ಯರಾಗಿದ್ದ ಇವರು ಹೊಸ ಹಾಗೂ ಹಳೆಯ ಪ್ರಸಂಗಗಳಲ್ಲಿ ಪರಿಣಿತರಾಗಿದ್ದರು. ಶ್ರೀಯುತರು ಕೋಟ ಅಮೃತೇಶ್ವರಿ ಮೇಳ, ಪೆರ್ಡೂರು ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದರು.
ಸುಮಾರು 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಇವರು ಪುರಂದರದಾಸ, ಕನಕದಾಸ, ಬಸವಣ್ಣ, ಚೆನ್ನಮಲ್ಲಿಕಾರ್ಜುನರ ಕೀರ್ತನೆಗಳನ್ನೂ ಹಾಡಿದ್ದಾರೆ. ಇವರ ಅಮೃತ ವರ್ಷಿಣಿ, ಸಿಂಧೂರ ಭಾಗ್ಯ,, ರಕ್ತ ತಿಲಕ, ಶೂದ್ರ ತಪಸ್ವಿನಿ, ಚಾರು ಚಂದ್ರಿಕೆ, ಗಗನ ಗಾಮಿನಿ, ವಸಂತ ಸೇನೆ ಪ್ರಸಂಗಗಳು ಇಂದಿಗೂ ಅಚ್ಚಳಿಯದೇ ಉಳಿದಿವೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಹಾಗೂ ಪುರಸ್ಕಾರಗಳು ಇವರ ಸಾಧನೆಗೆ ಸಂದ ಗೌರವವಾಗಿದೆ.