ಉಡುಪಿ : ಉಡುಪಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ಮತ್ತು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಉಡುಪಿ ಇವರ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 07-05-2024ರಂದು ಉಡುಪಿಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಿತು.
ಸಮಾರಂಭವನ್ನು ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಉದ್ಘಾಟಿಸಿದರು. ಡಾ. ಕೋಟ ಶಿವರಾಮ ಕಾರಂತ ದತ್ತಿ ಉಪನ್ಯಾಸದಲ್ಲಿ ‘ಕಾರಂತರ ಸಾಹಿತ್ಯ ಚಿಂತನೆ’ ಈ ವಿಷಯದ ಕುರಿತು ಮಾತನಾಡಿದ ಸಾಹಿತಿ ಡಾ. ನಿಕೇತನ, “ಕಾರಂತರ ಕೃತಿಗಳು ಓದುಗರನ್ನು ಸಹೃದಯಿಗಳನ್ನಾಗಿ ಮಾಡುತ್ತದೆ. ವೈಚಾರಿಕ ದೃಷ್ಟಿಕೋನ ಬೆಳೆಸುತ್ತದೆ. ಪದವೀಧರರು ವಿದ್ಯಾವಂತರೆನಿಸಿಕೊಳ್ಳುವುದಿಲ್ಲ. ವಿದ್ಯೆಯ ಜೊತೆಗೆ ವಿವೇಕ ಮೂಡಲು ಸಾಹಿತ್ಯ ಓದಬೇಕು. ಬದುಕನ್ನು ಸಂಭ್ರಮಿಸಬೇಕಾದರೆ ವರ್ತಮಾನದಲ್ಲಿ ಜೀವಿಸಬೇಕು. ಇದರಿಂದ ವ್ಯಕ್ತಿ ಶಕ್ತಿಯಾಗಲು ಸಾಧ್ಯ. ಸಣ್ಣ ವಿಷಯಗಳಿಗೆ ಆತ್ಮಹತ್ಯೆಗೆ ಮುಂದಾಗುವ ಎಳೆಯ ಮನಸ್ಸುಗಳು ಕಾರಂತರ ಕೃತಿಗಳನ್ನು ಓದಬೇಕು. ಆಗ ಅಂಥ ಆಲೋಚನೆಗಳೇ ಹುಟ್ಟುಕೊಳ್ಳುವುದಿಲ್ಲ, ಬದುಕಿನ ಅನನ್ಯತೆ ಅರಿವಾಗುತ್ತದೆ” ಎಂದು ಹೇಳಿದರು.
‘ಜೀವನಕ್ಕಾಗಿ ಆಯುರ್ವೇದ’ ಈ ವಿಷಯವಾಗಿ ಜಿಲ್ಲಾ ಆಯುಷ್ ಆಸ್ಪತ್ರೆಯ ತಜ್ಞ ವೈದ್ಯೆಯಾದ ಡಾ. ಸ್ವಾತಿ ಶೇಟ್ ಮಾತನಾಡುತ್ತಾ “ಉತ್ತಮ ಆರೋಗ್ಯಕರ ಜೀವನಕ್ಕೆ ಆಯುರ್ವೇದ ಪದ್ಧತಿ ಅತಿ ಅಗತ್ಯ .ದಿನನಿತ್ಯ ಜೀವನದಲ್ಲಿ ಪೌಷ್ಟಿಕವಾದ ಆಹಾರವನ್ನು ಹಿತಮಿತದಲ್ಲಿ ಸೇವಿಸುವುದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು” ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಆಶಾ ಕುಮಾರಿ ವಹಿಸಿದ್ದರು. ಉಡುಪಿ ತಾಲೂಕು ಕ.ಸಾ.ಪ. ಅಧ್ಯಕ್ಷ ರವಿರಾಜ್ ಎಚ್.ಪಿ. ಆಶಯ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ್ ಶೆಣೈ, ಕ.ಸಾ.ಪ. ಬೈಂದೂರು ತಾಲೂಕು ಅಧ್ಯಕ್ಷ ಡಾ. ರಘು ನಾಯ್ಕ, ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿ, ಜಿಲ್ಲಾ ಘಟಕದ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ ವಂದಿಸಿ. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.