Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ವನಜಾಕ್ಷಿ ಪಿ. ಚೆಂಬ್ರಕಾನ ಅವರ ‘ಮೌನಭಾವ’ : ಅಂತರಂಗದ ಭಾವತರಂಗ
    Article

    ಪುಸ್ತಕ ವಿಮರ್ಶೆ | ವನಜಾಕ್ಷಿ ಪಿ. ಚೆಂಬ್ರಕಾನ ಅವರ ‘ಮೌನಭಾವ’ : ಅಂತರಂಗದ ಭಾವತರಂಗ

    May 15, 2024No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಾನವೀಯ ಸಂಬಂಧಗಳು ಶಿಥಿಲವೂ ಅಪರಿಚಿತವೂ ಆಗುತ್ತಿರುವ ಈ ಹೊತ್ತಿನಲ್ಲಿ ಪ್ರೀತಿಯ ದನಿಗಳು ಅನಿವಾರ್ಯವೂ ಅಪೇಕ್ಷಣೀಯವೂ ಆಗಿವೆ. ಸರಕು ಸಂಸ್ಕೃತಿಯ ಭೌತಿಕ ಸಂಪನ್ನತೆ, ಬೌದ್ಧಿಕ ಹೆಚ್ಚುಗಾರಿಕೆ, ಶುಷ್ಕ ತತ್ವೋಪದೇಶಗಳು ಬದುಕನ್ನು ಆರ್ದ್ರಗೊಳಿಸಲಾರವು. ಪ್ರೀತಿ ಎಂಬ ಎರಡಕ್ಷರಗಳೇ ಬದುಕಿನ ತಾರಕ ಮಂತ್ರ ಎನಿಸಬಲ್ಲವು. ಪ್ರೀತಿಯ ತುಡಿತವನ್ನು ಹೊಂದಿದ ಸಾಹಿತ್ಯ ಸದಾ ಜೀವಂತವಾಗಿರುತ್ತದೆ.

    ಬದುಕಿನ ಮುಖ್ಯ ಆಸರೆಯಾದ ಪ್ರೀತಿಗೆ ಆದ್ಯತೆಯನ್ನು ನೀಡುವ ವನಜಾಕ್ಷಿ ಪಿ. ಚೆಂಬ್ರಕಾನ ಅವರ ‘ಮೌನಭಾವ’ ಸಂಕಲನದ ಕವಿತೆಗಳಲ್ಲಿ ಪ್ರೀತಿಯ ವೈವಿಧ್ಯಪೂರ್ಣ ಮುಖಗಳಿವೆ. ಒಲವಿನ ಎಳೆಗಳಿಂದ ಸಂಬಂಧವನ್ನು ಬೆಸೆಯಲಾಗಿದೆ. ಪ್ರೀತಿಗಾಗಿ ಮಿಡುಕುತ್ತಾ ನಲ್ಲನಿಗಾಗಿ ಕಾತರಪಡುವ, ನೆನಪಿನ ದೋಣಿಯಲ್ಲಿ ಸಾಗುವ, ಕನಸಿನ ಮುಗಿಲಲ್ಲಿ ತೇಲುವ, ಹತಾಶೆಯಿಂದ ಚಡಪಡಿಸುವ, ನಿರೀಕ್ಷೆಯಲ್ಲಿ ಬೇಯುವ ನಲ್ಲೆಯ ಚಿತ್ರಗಳು ಎದುರಾಗುತ್ತವೆ. ಯಾವುದೇ ಹಳಹಳಿಕೆ ತಕರಾರುಗಳಿಲ್ಲದೆ ನಲ್ಲನನ್ನು ಕನವರಿಸುವ ಕವಿಯತ್ರಿಯು ಪ್ರೀತಿ, ಚೆಲುವು, ಮೌನ ಮತ್ತು ವಿರಹದ ಭಾವಗಳನ್ನು ಹೆಣೆದಿದ್ದಾರೆ. ಕಣ್ಣಿನಿಂದ ಮರೆಯಾದರೂ ಹೃದಯದಲ್ಲಿ ಉಳಿದುಕೊಂಡಿರುವ ವ್ಯಕ್ತಿಯನ್ನು ನೆನೆಯುತ್ತಾ ಒಲವಿನ ಮುಖಗಳನ್ನು ಹುಡುಕಾಡಿದ್ದಾರೆ. ತಾರುಣ್ಯದ ಸವಿಗನಸು, ಗಂಡುಹೆಣ್ಣಿನ ಪ್ರೇಮ-ವಿರಹಗಳಿಗೆ ಸಂಬಂಧಿಸಿದ ರಚನೆಗಳಲ್ಲಿ ಸಹಜವಾಗಿಯೇ ಕಂಡುಬರುವ ಆಪ್ತವಾದ ಆತ್ಮನಿವೇದನೆ, ಏಕಾಂತದ ಪ್ರೇಮೋದ್ಗಾರಗಳು ಅಗಲಿಕೆಯ ಕಾವಿನಿಂದ ದೀಪ್ತವಾಗಿವೆ. ಎಳೆಯ ಮಕ್ಕಳ ಮುಗುಳುನಗೆಯಲ್ಲಿರುವ ಅಪೂರ್ವ ಆಕರ್ಷಣೆಯಂತೆ ಬದುಕಿನ ಸಂಕೀರ್ಣ ಅನುಭವ ಪ್ರಪಂಚದ ಹೊಸ್ತಿಲಿಗೆ ಕಾಲಿಡುವ ಯುವಕವಿಗಳ ಆರಂಭಿಕ ರಚನೆಗಳಲ್ಲಿ ಕಂಡು ಬರುವ ಮುಗ್ಧತೆ ಮತ್ತು ಸ್ನಿಗ್ಧತೆಯ ಚೆಲುವನ್ನು ಕಾಣುತ್ತೇವೆ.

    ಪ್ರೀತಿ ಪ್ರೇಮಗಳಿಗೆ ಮಾತ್ರ ಮೀಸಲಾಗಿರದ ಇಲ್ಲಿನ ಕವನಗಳು ಹೆಣ್ಣಿನ ಸಮಸ್ಯೆ ಮತ್ತು ಸಾಮಾಜಿಕ ವಿಚಾರಗಳನ್ನೊಳಗೊಂಡು ಕವಿಯತ್ರಿಯ ಜಾಗೃತ ಪ್ರಜ್ಞೆಗೆ ಸಾಕ್ಷಿಯಾಗುತ್ತವೆ. ‘ದರ್ಜಿ’, ‘ಹೂ ಮಾರುವ ಹುಡುಗ’, ‘ಕವಲೊಡೆದ ಹಾದಿ’ ಮುಂತಾದ ರಚನೆಗಳು ಸರಳ ಅಭಿವ್ಯಕ್ತಿಗೆ ನಿದರ್ಶನವಾಗಿದ್ದು ಅವರ ಚಿಂತನೆಯ ದಿಕ್ಕನ್ನು ಸೂಚಿಸುತ್ತವೆ. ‘ಸ್ವಗತ’, ‘ಮೌನಭಾವ’, ‘ಮತ್ತೆಂದೂ ಕಂಡಿಲ್ಲ’, ‘ದುಮ್ಮಾನ’ ಮೊದಲಾದವುಗಳ ವಸ್ತುಗಳು ವೈಯಕ್ತಿಕ ಸಂಕಟವನ್ನು ಪ್ರತಿನಿಧಿಸುತ್ತಾ ಸಾಮಾಜಿಕತೆಯ ಕಡೆಗೆ ಮುಖ ಮಾಡುತ್ತವೆ.

    ಹೆಣ್ಣು ಮತ್ತು ಗಂಡು ಒಂದೇ ನಾಣ್ಯದ ಎರಡು ಮುಖಗಳು. ಅವರಲ್ಲಿ ಯಾರೂ ಶ್ರೇಷ್ಠರಲ್ಲ ಕನಿಷ್ಠರಲ್ಲ. ಪರಸ್ಪರ ಗೌರವಭಾವನೆಯಿಂದ ಮಾತ್ರ ಬದುಕಿನ ಸುಖ ಹೆಚ್ಚುತ್ತದೆ. ಆದರೆ ಹೆಣ್ಣಿನ ಮನಸ್ಸನ್ನು ಪ್ರೀತಿಯಿಂದ ಅನುನಯದಿಂದ ಗೆದ್ದು ಆತ್ಮವಿಶ್ವಾಸವನ್ನು ಹುಟ್ಟಿಸುವ ಬದಲು ಕೀಳಾಗಿ ಕಾಣುವ ಮನೋಭಾವದಿಂದಾಗಿ ಆಕೆ ಶೋಷಣೆಗೆ ಒಳಗಾಗುವಂತಾಗಿದೆ. ಆಧುನಿಕ ಯುಗದಲ್ಲೂ ವ್ಯಾಪಿಸುತ್ತಿರುವ ಈ ಮೌಢ್ಯಮೂಲದ ಮುಂದುವರಿಕೆಯು ಮಾನವನ ವೈಚಾರಿಕ ಪ್ರಜ್ಞೆಗೆ ಸವಾಲೆನಿಸಿದೆ. ಹೆಣ್ಣು ಮಗುವನ್ನು ನಿರಾಕರಿಸುವ, ನಿರ್ಲಕ್ಷಿಸುವ ತರತಮ ಧೋರಣೆಯು ಸಮಾಜದಲ್ಲಿ ಹಲವು ಬಿಕ್ಕಟ್ಟುಗಳಿಗೆ ಕಾರಣವಾಗಿವೆ. ಹೆಣ್ಣನ್ನು ಕೇವಲ ದೇಹವಾಗಿ ಪರಿಭಾವಿಸದೆ ಅವಳ ಮನೋವ್ಯಕ್ತಿತ್ವವನ್ನು ಗೌರವಿಸುವ ಧೋರಣೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ಬದುಕಿನ ಎಲ್ಲಾ ರಂಗಗಳಲ್ಲೂ ಭೇದಭಾವಕ್ಕೆ ಅವಕಾಶವಿಲ್ಲದಂತೆ ಸ್ತ್ರೀ ಪುರುಷರ ಸಮಾನ ಸಹಭಾಗಿತ್ವದೊಂದಿಗೆ ಸ್ವಸ್ಥ ಸಮಾಜದ ನಿರ್ಮಾಣ ಮಾಡಬೇಕಾಗಿರುವ ಸಂದರ್ಭದಲ್ಲಿ ‘ಕೊಲ್ಲದಿರು ನನ್ನ’ ಎಂಬ ಕವಿತೆಯು ಪ್ರಸ್ತುತವೆನಿಸುತ್ತದೆ. ಗರ್ಭವು ತನ್ನ ಪಾಲಿಗೆ ಸುರಕ್ಷಿತ ತಾಣವೆಂದು ಭಾವಿಸಿದ ಮಗುವಿಗೆ ತನ್ನ ಅಸ್ತಿತ್ವವನ್ನೇ ನಿರಾಕರಿಸುವ ವ್ಯವಸ್ಥೆಯ ಧೋರಣೆಗಳು ಆತಂಕವನ್ನುಂಟು ಮಾಡಿವೆ. ಬದುಕುವುದಕ್ಕೆ ಮಾತ್ರವಲ್ಲ ಹುಟ್ಟುವುದಕ್ಕೂ ಹೋರಾಡಬೇಕಾದ ವಿಷಮ ಪರಿಸ್ಥಿತಿಯಲ್ಲಿ ತಾಯಿಗೆ ಮಾತ್ರವೇ ತನ್ನನ್ನು ಉಳಿಸುವ ಶಕ್ತಿಯಿದೆ ಎಂಬ ಭರವಸೆಯೊಂದಿಗೆ ಹೊಟ್ಟೆಯೊಳಗಿನ ಮಗು ತನ್ನನ್ನು ಕಾಪಾಡುವಂತೆ ಮೊರೆಯಿಡುವ ಚಿತ್ರಣ ಇಲ್ಲಿದೆ. ಹೆಣ್ಣುಮಗುವಿನ ಜನನದ ಸಂದರ್ಭದಲ್ಲಿ ಕಂಡುಬರುವ ಕೌಟುಂಬಿಕ ಮತ್ತು ಸಾಮಾಜಿಕ ಭಾವನೆಯನ್ನು ವ್ಯಕ್ತಪಡಿಸುವ ಕವಿತೆಯು ಹೆಣ್ಣಿನ ಅಸಹಾಯಕತೆ, ದುಗುಡ, ದುಮ್ಮಾನಗಳನ್ನು ವ್ಯಕ್ತಪಡಿಸುತ್ತದೆ.

    ಬದುಕಿನಲ್ಲಿ ಮನುಷ್ಯತ್ವಕ್ಕೆ ಮನ್ನಣೆಯನ್ನು ನೀಡಬೇಕಲ್ಲದೆ ವ್ಯಕ್ತಿಯ ಲಿಂಗ, ರೂಪ, ಯೌವನಗಳಿಗಲ್ಲ. ಹುಟ್ಟುವಾಗ ಎಲ್ಲರ ಮನಸ್ಸೂ ನಿಷ್ಕಲ್ಮಶವಾಗಿರುತ್ತದೆ. ಆದರೆ ಲಿಂಗ, ರೂಪಗಳಿಂದಾಗುವ ಅವಮಾನಗಳು ಕ್ರಮೇಣ ಸೇಡಿನ ರೂಪಕ್ಕೆ ಬದಲಾಗುತ್ತವೆ. ವ್ಯಕ್ತಿಯು ಎಷ್ಟೇ ಪ್ರಯತ್ನಿಸಿದರೂ ಅದರಿಂದ ಉಂಟಾದ ತಿರಸ್ಕಾರ ಮತ್ತು ಅವಮಾನಗಳು ಮನಸ್ಸಿನಿಂದ ಮರೆಯಾಗಲಾರವು. ತಾಳ್ಮೆಯು ಮಿತಿ ಮೀರಿದಾಗ ಅದು ಸೇಡಿನ ರೂಪಕ್ಕೆ ಬದಲಾಗುತ್ತದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಮಂಥರೆಯ ಮನಸ್ಸನ್ನು ಶೋಧಿಸುವ ‘ಗೂನುಬೆನ್ನಿನ ಹಿಂದೆ’ ಎಂಬ ಕವಿತೆಯು ಅವಳ ವ್ಯಗ್ರತೆ, ತುಮುಲ ಮತ್ತು ಆಲೋಚನೆಯ ಲಯವನ್ನು ಸೆರೆಹಿಡಿಯುತ್ತದೆ. ಸಮಾಜವು ಕುರೂಪಿಯೆಂದು ಹಳಿದು ಮೂಲೆಗುಂಪಾಗಿಸಿದ್ದರಿಂದ ಹುಟ್ಟಿದ ನೋವು, ಅಸೂಯೆ, ಅಸಹನೆಗಳು ಮನಸ್ಸನ್ನು ಹೇಗೆ ಹಾಳುಗೆಡಹುತ್ತವೆ, ಬಲಿತ ಹಗೆ ಇಳಿವಯಸ್ಸಿನಲ್ಲೂ ಹೇಗೆ ಕಾರ್ಯಪ್ರವೃತ್ತವಾಗಿರುತ್ತದೆ ಎಂಬುದಕ್ಕೆ ರಾಮನಿಗೆ ವನವಾಸವಾಗುವಂತೆ ಮಾಡುವ ಆಕೆಯ ಕುಟಿಲ ತಂತ್ರವೇ ಸಾಕ್ಷಿ. ಕಣ್ಮುಚ್ಚಿದ ಅನುಸರಣೆ, ಪ್ರಸ್ತಕ್ಕೂ ಮುನ್ನ ವಾನಪ್ರಸ್ಥ, ಸಂಸಾರಕ್ಕೂ ಮುನ್ನ ವೈರಾಗ್ಯ ಎಂಬ ಸಾಲುಗಳು ಗಾಂಧಾರಿಯ ಬಾಳಿನ ವಿಪರ್ಯಾಸಗಳನ್ನು ವಿವರಿಸುತ್ತವೆ. ಸಾಲ್ವ-ಭೀಷ್ಮರ ನಡುವೆ ಸಿಲುಕಿಕೊಂಡ ಅಂಬೆಯ ಯಾತನೆಯು ಮುಖ್ಯವಾಗುತ್ತದೆ. ಮಂಡೋದರಿಯ ಬೇಗುದಿಗೆ ದನಿಯಾಗುತ್ತದೆ. ಕುಂತಿಯ ಮಗನಾಗಿ ಹುಟ್ಟಿದರೂ ಸೂತಪುತ್ರನೆಂಬ ಅವಮಾನ, ತಿರಸ್ಕಾರಗಳಿಗೆ ಗುರಿಯಾದ ಕರ್ಣನ ಅನಾಥಪ್ರಜ್ಞೆಗೆ ಕವಿಯತ್ರಿಯ ಕರುಳು ಮಿಡಿಯುತ್ತದೆ. ಹೀಗೆ ಆಧುನಿಕ ಹೆಣ್ಣಿನ ಭಾವನೆ ಅಳಲುಗಳಲ್ಲಿ ಪೌರಾಣಿಕ ಸಂವೇದನೆಗಳು ಸೇರಿಕೊಳ್ಳುತ್ತವೆ.

    ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುತ್ತಾ ಕವಿಯತ್ರಿಯ ಅಂತರಂಗಕ್ಕೆ ಬೆಳಕು ಬೀರುವ ಕವಿತೆಗಳ ಒಳನೋಟ ಹೊರನೋಟಗಳಲ್ಲಿ ಸಂದಿಗ್ಧತೆ ಮತ್ತು ಕ್ಲಿಷ್ಟತೆಗಳಿಲ್ಲ. ಭಾಷೆ ತಿಳಿಯಾಗಿರುವುದರಿಂದ ಗೊಂದಲದ ಸ್ಥಿತಿಯುಂಟಾಗಿಲ್ಲ. ಸಂಯಮವನ್ನು ರೂಢಿಸಿಕೊಂಡ ಕವಿತೆಗಳಲ್ಲಿ ಗಂಭೀರ ಛಾಯೆಯು ಕಂಡುಬರುತ್ತದೆ. ಓದುಗನ ಹತ್ತಿರದ ಅನುಭವಗಳಂತೆ ಕಾಣುವ ರಚನೆಗಳು ಆತ್ಮೀಯ ಸಂವಾದಗಳಂತೆ ಗೋಚರವಾಗುತ್ತವೆ. ಬಿರುಬೇಸಿಗೆಯಲ್ಲೂ ಬಂಡೆಯ ಸಂದಿನಿಂದ ಒಸರುವ ಒರತೆಯಂತೆ ಇವರ ಕಾವ್ಯವು ಜೀವನ ಪ್ರೀತಿ ಮತ್ತು ನಂಬಿಕೆಯನ್ನು ಚಿಗುರಿಸುತ್ತಾ ಬದುಕನ್ನು ಪ್ರೀತಿಸಲು, ಗೌರವಿಸಲು, ಸಮಾಜವನ್ನು ತೆರೆದ ಕಣ್ಣುಗಳಿಂದ ನೋಡಲು ಕಲಿಸುತ್ತದೆ. ಬದುಕನ್ನು ಸಾವಧಾನದಲ್ಲೂ ಸಾಧ್ಯತೆಗಳ ಭಿತ್ತಿಯಲ್ಲೂ ನೋಡುವುದರಿಂದ ಬಾಳುವೆಯನ್ನು ಕುರಿತ ವ್ಯಗ್ರತೆ, ಕಹಿ ಕಡಿಮೆಯಾಗುವಂತೆ ಮಾಡುತ್ತದೆ. ಸನ್ನಿವೇಶ ಮತ್ತು ಘಟನೆಗಳನ್ನು ತಾರ್ಕಿಕವಾಗಿ ನೋಡುವ, ಅದರ ಏರಿಳಿತಗಳನ್ನು ಅವಮಾನ, ಅನ್ಯಾಯ, ದ್ರೋಹ, ಲಾಭ ಮತ್ತು ನಷ್ಟಗಳ ಹಿನ್ನೆಲೆಯಲ್ಲಿ ಗಮನಿಸುವ ಮನಸ್ಥಿತಿಯಿಂದ ದೂರವಾಗಲು ಒತ್ತಾಯಿಸುತ್ತದೆ.

    ಧಾವಿಸಿ ಬರುವ ಅನುಭವಗಳ ಪೈಕಿ ಕವಿಯತ್ರಿ ಆಯ್ದುಕೊಳ್ಳುವುದು ತನ್ನನ್ನು ನೋಯಿಸಿಯೂ ತನ್ನೊಳಗಿಗೆ ಏನನ್ನೋ ಕೊಟ್ಟು ಅದರ ಬಗ್ಗೆ ಧ್ಯಾನಿಸುವಂತೆ ಮಾಡಿದ ಶುದ್ಧ ಲೌಕಿಕ ಅನುಭವಗಳನ್ನು. ಅವುಗಳು ಆ ಕ್ಷಣಕ್ಕೆ ಏನೋ ಕೊಟ್ಟಿರಬಹುದು. ಕಳೆದಿರಬಹುದು. ಈ ಪೈಕಿ ಹೃದಯದಲ್ಲಿ ಗಾಢವಾಗಿ ಅಚ್ಚೊತ್ತಿ ಉಳಿಯುವ ಸಂಗತಿಗಳೇ ಮುಖ್ಯ ಎಂದು ಪರೋಕ್ಷವಾಗಿ ಹೇಳುವ ಕವಿಯತ್ರಿಯು ಅನುಭವಗಳ ನಿಕಷಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಾ ಸತ್ಯವನ್ನು ಆರಿಸಿಕೊಳ್ಳಲು, ನಿರ್ಧರಿಸಲು ಹೊರಡುತ್ತಾರೆ. ಬದುಕನ್ನು ಇನ್ನೂ ಗೂಢವಾಗಿ ಒಪ್ಪಿಕೊಳ್ಳಲು, ಅಪ್ಪಿಕೊಳ್ಳಲು ಇರುವ ಏಕೈಕ ದಾರಿ ಎಂದರೆ ಪ್ರೀತಿಯನ್ನು ಕೊಡುವುದು ಮತ್ತು ಪಡೆಯುವುದು ಎಂಬ ವಿಚಾರವನ್ನು ಅವರ ಕಾವ್ಯ ಸ್ಪಷ್ಟಪಡಿಸುತ್ತದೆ. ರಮ್ಯಶೈಲಿಯಲ್ಲಿ ಮೂಡಿದ ಕವಿತೆಗಳು ಗಾಢವಾಗಿ ತಟ್ಟದಿದ್ದರೂ ಹಲವು ಭಾವ, ವಿಚಾರಗಳ ಸಣ್ಣ ಎಳೆಯನ್ನು ಮಿಂಚಿಸಿ ಮರೆಯಾಗುತ್ತವೆ. ನೇರವಾಗಿ ಹೇಳುವ ಶೈಲಿ ಓದುಗರನ್ನು ಆಕರ್ಷಿಸುತ್ತದೆ. ಪಾತ್ರದ ಒಳದನಿಗಳಿಗೆ ತಕ್ಕ ಭಾಷಾಶರೀರವನ್ನು ನಿರ್ಮಿಸಲು ಯತ್ನಿಸುವ ಕಾವ್ಯವು ಸಾಧನೆಯ ಕಡೆಗೆ ಮೌನವಾಗಿ ಚಲಿಸುತ್ತದೆ.

    ಈ ಸಂಕಲನದಲ್ಲಿ ಒಂದಷ್ಟು ಹನಿಗವನಗಳೂ ಇವೆ. ತಾನು ಕಂಡುಂಡ ಅನುಭವಗಳಿಗೆ ಶಬ್ದಚಿತ್ರಗಳ ರೂಪವನ್ನು ಕೊಟ್ಟ ಕವಿಯತ್ರಿಯು ಕೆಲವೇ ಸಾಲುಗಳಲ್ಲಿ ವಾಸ್ತವ ಚಿತ್ರಗಳ ರೇಖೆಯನ್ನು ರಚಿಸಿದ್ದಾರೆ. ಕಣ್ಣಿಗೆ ಕಾಣಿಸಿ/ಕೈಗೆ ನಿಲುಕದೆ/ಅಣಕವಾಡುವ/ಬಣ್ಣದ ಕನಸು (ಕಾಮನಬಿಲ್ಲು) ಇರುವುದ ಬಿಟ್ಟು/ಮರೀಚಿಕೆಯ ಬೆಂಬತ್ತಿ ಹೋಗುವ/ಮರ್ಕಟ (ಮನಸು) ಮುಗಿಲ ಮರೆಯಿಂದ/ಇಣುಕಿ ನೋಡುವ/ಚಂದಿರನಂದದಿ/ಆಗಾಗ ಕಾಡುವ/ಬಣ್ಣದ ನೆನಪುಗಳು (ಸುಳಿ) ಎಂಬ ಸಾಲುಗಳಲ್ಲಿ ಭಾವದ ಮಿಂಚಿನ ಗೊಂಚಲುಗಳನ್ನು ಕಾಣುತ್ತೇವೆ. ಜಾತಿಕುಲ/ಮತವೊಂದು/ಹೇಳಿದ ಮಹಾತ್ಮರಿಂದು/ಜಾತಿಗೇ ಗುರು (ಗುರು) ಮದುವೆಯೆಂಬ/ಮಾರ್ಕೆಟ್ಟಲ್ಲಿ/ ಲಕ್ಷಲಕ್ಷಗಳಿಗೆ/ಬಿಕರಿಯಾಗುವ ಸರಕು (ವರ) ಎಂದು ಸಮಾಜದ ದುರಂತ ವ್ಯಂಗ್ಯವನ್ನು ವಿವರಿಸುವ ಹನಿಗವನಗಳು ಅವರ ಕಾವ್ಯಜಗತ್ತಿನ ಸೂಕ್ಷ್ಮರೂಪವಾಗಿ ಕಂಡುಬರುತ್ತವೆ. ಬಾಳಿನ ವಿಪರ್ಯಾಸಗಳು ಹುಟ್ಟಿಸುವ ನಿರಾಶೆಯು ಮನಸ್ಸನ್ನು ತಟ್ಟುತ್ತದೆ.

    ಅರ್ಥ ಜಾಳಾಗದೆ, ಮಾತು ಅತಿಯಾಗದೆ ಮನಸ್ಸನ್ನು ಸೆರೆಹಿಡಿಯಬಲ್ಲ ಕವಿತೆಗಳು ಕೇವಲ ಭಾವಗಳನ್ನಲ್ಲದೆ ಬದುಕಿನ ಸಂಘರ್ಷ, ಸಂಕೀರ್ಣತೆಗಳನ್ನು ಅಭಿವ್ಯಕ್ತಿಸುತ್ತಾ ಸಮಾಜದ ತಳಮಳಗಳನ್ನು ಸ್ಪರ್ಶಿಸುತ್ತವೆ. ಸಮಕಾಲೀನ ಪ್ರಜ್ಞೆ, ಸಮಾಜ ವಿಮರ್ಶೆ, ಸಾಮಾಜಿಕ ಸಂದೇಶ, ಆದರ್ಶವಾದಗಳನ್ನು ಹೊಂದಿರುವ ಕವಿತೆಗಳಲ್ಲಿ ಉದಾತ್ತ ಚಿಂತನೆಯ ಹೊಳಹುಗಳಿವೆ. ಇಂದಿನ-ಹಿಂದಿನ ಕಾವ್ಯಪರಂಪರೆಯ ಪರಿಚಯ ಮತ್ತು ಸಂಸ್ಕಾರಗಳಿಂದ ಪಕ್ವಗೊಂಡ ಕಾವ್ಯವು ಸುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುವ ಸೂಕ್ಷ್ಮ ಸಂವೇದನೆಯನ್ನು ಪಡೆದುಕೊಂಡಿದ್ದು ಸಹಜೀವಿಯ ಕಷ್ಟ, ಹೆಣ್ಣಿನ ಮನಸ್ಸು ಮತ್ತು ಅವಳ ಯಾತನೆಗಳಿಗೆ ದನಿಯಾಗುತ್ತದೆ. ಬಾಳ್ವೆಯ ಕಾವು, ನೋವು, ಕಣ್ಣೀರುಗಳನ್ನು ಕಂಡು ಮರುಗುವ ಆರ್ದ್ರ ಹೃದಯದ ದರ್ಶನವಾಗುತ್ತದೆ. ಭಾವಪ್ರಧಾನವಾಗಿರುವ ಕವಿತೆಗಳಲ್ಲಿ ಇತ್ತೀಚೆಗೆ ವಿರಳವಾಗಿರುವ ಲಯ-ಛಂದೋಬದ್ಧತೆಗಳು ಕಂಡುಬರುತ್ತವೆ. ‘ಗೋಡೆ’, ‘ಪಂಜರದೊಳಗೆ’, ‘ನಂಬಿಕೆ’, ‘ಬೇಲಿ’ಗಳಲ್ಲಿ ಸಂವೇದನೆಯು ಇನ್ನಷ್ಟು ಸೂಕ್ಷ್ಮತೆಯತ್ತ ಸಾಗುತ್ತಿರುವುದು ವ್ಯಕ್ತವಾಗುತ್ತದೆ. ಲಯದ ಏಕತಾನತೆಯಿಂದ ಪಾರಾಗಲು ಕವಿಯತ್ರಿಯು ವಿವಿಧ ಲಯವಿನ್ಯಾಸ-ಛಂದೋರೂಪಗಳನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ. ಸ್ವಾನುಭವ, ನಿರಂತರ ಅಧ್ಯಯನ ಮತ್ತು ಸತತ ಪರಿಶ್ರಮಗಳ ಮೂಲಕ ಹೊಚ್ಚಹೊಸ ಪ್ರತಿಮೆ ರೂಪಕಗಳನ್ನು ಕಲ್ಪಿಸಿ ಸ್ವೋಪಜ್ಞತೆಯನ್ನು ಮೆರೆಯಬೇಕಿದೆ.

    ಇಲ್ಲಿ ಲೋಕವಸ್ತು ಕವಿಯತ್ರಿಯ ಭಾವಕೋಶದಲ್ಲಿ ರಸವಸ್ತುವಾಗಿ ಹೊರಹೊಮ್ಮಿದೆ. ಭಾವದ ಕಾವು ಮಡುಗಟ್ಟಿರುವುದರಿಂದ ಹೆಚ್ಚಿನ ಕವಿತೆಗಳು ಪ್ರತಿಭೆಯ ಮೆರುಗಿನಿಂದ ಕಂಗೊಳಿಸುತ್ತವೆ. ಹೆಣ್ಣಿನ ನೋವು ನಿರಾಶೆಗಳನ್ನು ಬಿಂಬಿಸುವಾಗ ಉದ್ವೇಗರಹಿತ ಭಾವತೀವ್ರತೆ ವ್ಯಕ್ತವಾಗುತ್ತದೆ. ಕಾವ್ಯದುದ್ದಕ್ಕೂ ಕಾಣುವ ಒಂಟಿ ಹೆಣ್ಣಿನ ಸಂವೇದನೆಯಲ್ಲಿ ವೇದನೆಯ ಭಾಗವೇ ಹೆಚ್ಚು. ಸಮಾಜದಲ್ಲಿ ಕಂಡುಬರುವ ವಿಷವನ್ನು ನುಂಗಿಕೊಂಡರೂ ಕವಿಯತ್ರಿಯ ಮನಸ್ಸು ಕಲುಷಿತಗೊಂಡಿಲ್ಲ. ಅದು ಇನ್ನೂ ಚೆಲುವಿಗೆ ಮಾರು ಹೋಗುತ್ತದೆ. ಅನ್ಯಾಯವನ್ನು ವಿರೋಧಿಸುತ್ತದೆ. ವೈಚಾರಿಕತೆಗೆ ದಕ್ಕದ ವಿಷಯಗಳಿಗೆ ಬೆರಗುಗೊಳ್ಳುತ್ತದೆ. ಪ್ರೀತಿಯನ್ನು ಬಯಸುತ್ತಾ ಕೋಮಲವಾದ ಹೃದಯವಂತಿಕೆಯಲ್ಲಿ ತೊಯ್ದು ಹೋಗುತ್ತದೆ.

    ಪುಸ್ತಕದ ಹೆಸರು : ಮೌನಭಾವ (ಕವನ ಸಂಕಲನ)
    ಲೇಖಕರು : ವನಜಾಕ್ಷಿ ಪಿ. ಚೆಂಬ್ರಕಾನ
    ಪ್ರಕಾಶಕರು : ಸಮತಾ ಸಾಹಿತ್ಯ ವೇದಿಕೆ, ಬದಿಯಡ್ಕ
    ಪುಟಗಳು : 42
    ಬೆಲೆ ರೂ : 30

    ಡಾ. ಸುಭಾಷ್ ಪಟ್ಟಾಜೆ :


    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.

    ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್‌ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    ಲೇಖಕಿಯ ವಿವರ – ಕಾಸರಗೋಡು ಜಿಲ್ಲೆಯ ಮಂಜೇಶ್ವರದವರಾದ ವನಜಾಕ್ಷಿ ಪಿ. ಚೆಂಬ್ರಕಾನ ಇವರು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕಥೆ, ಕವನ, ಚುಟುಕು ಹಾಗೂ ಲೇಖನಗಳನ್ನು ರಚಿಸಿರುತ್ತಾರೆ. ಕಾರವಲ್, ಉದಯವಾಣಿ ಕನ್ನಡ ಕೈರಳಿ, ಕನ್ನಡ ಧ್ವನಿ ಮುಂತಾದ ಪತ್ರಿಕೆಗಳು/ ಸ್ಮರಣ ಸಂಚಿಕೆಯಲ್ಲಿ ಇವರು ಬರಹಗಳು ಪ್ರಕಟವಾಗಿದ್ದು, ‘ಮೌನ ಭಾವ’ ಕವನ ಸಂಕಲನ ಇವರ ಪ್ರಕಟಿತ ಕೃತಿಯಾಗಿದೆ. ಮಂಗಳೂರು ಆಕಾಶವಾಣಿಯ ತುಳು ಯುವವಾಣಿ ಕಾರ್ಯಕ್ರಮದಲ್ಲಿ ಸ್ವರಚಿತ ಕವನ ವಾಚನ ಹಾಗೂ ಅನೇಕ ಬಹುಭಾಷಾ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ಯಕ್ಷಗಾನ ವೇಷಭೂಷಣ ಮತ್ತು ಬಣ್ಣಗಾರಿಕೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ
    Next Article ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ‘ಕೇನೋಪನಿಷತ್ತು’ ಕುರಿತು ಉಪನ್ಯಾಸ
    roovari

    Add Comment Cancel Reply


    Related Posts

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.