ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಂಗಳೂರಿನ ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಸಮಿತಿ ಸಹಯೋಗದಲ್ಲಿ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 13 ಫೆಬ್ರವರಿ 2026ರಂದು ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.

ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಬಿ.ಎ. ವಿವೇಕ ರೈ ಮಾತನಾಡಿ “ಸಾಹಿತಿ, ಕವಿ, ಬೌದ್ಧಿಕರು ಪರಸ್ಪರ ಪ್ರೀತಿಸುವ, ಗೌರವಿಸುವ ಪರಂಪರೆಯನ್ನು ನಾವು ಕಳೆದುಕೊಳ್ಳುತ್ತಿದ್ದು, ಕವಿಗೆ ಕವಿ ಮುನಿವ ಬದಲು ಮಣಿದ ಸಂಸ್ಕೃತಿ ನಮಗೆ ಮುಖ್ಯ. ಮೌಲ್ಯಗಳು, ಕೌಟುಂಬಿಕ ಸಂಬಂಧಗಳು ಉಳಿಯಬೇಕು, ಬೆಳೆಯಬೇಕು. ಆನಂದ, ಚಿಂತನೆಯ ಮಾರ್ಗೋಪಾಯ ಕಾವ್ಯ, ಸಾಹಿತ್ಯದಲ್ಲಿದೆ. ಕಾವ್ಯಕ್ಕೆ ಸಾವಿಲ್ಲ ಪ್ರೀತಿ ಸಂಸ್ಕೃತಿಯಿಂದ ನಾಡು ಕಟ್ಟಲು ಸಾಧ್ಯ. ಆಧುನಿಕತೆಯ ಸೌಕರ್ಯ ಅನುಭವಿಸಿ ಬೇಸತ್ತು ವಿಮುಕ್ತಿ ಹೊಂದಲು ಕಲೆ, ಸಾಹಿತ್ಯದಿಂದ ಮಾತ್ರ ಸಾಧ್ಯ” ಎಂದರು.
ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಸ್ವೀಕರಿಸಿದ ಕವಿ ಸುಬ್ರಾಯ ಚೊಕ್ಕಾಡಿ ಮಾತನಾಡಿ “ಕೆಲಸದ ಒತ್ತಡ, ಏಕಾಂಗಿತನ, ನಿರಾಶೆ. ಅವಮಾನಗಳ ಬಂಧನದ ಬಿಡುಗಡೆ ದಾರಿಯೇ ಬರವಣಿಗೆ. ಕಳೆದು ಕೊಂಡದ್ದನ್ನು ಪಡೆಯುವ ಹಠ, ತಂದೆಯ ಪ್ರಭಾ ವಲಯದಿಂದ ಹೊರತಾಗಿ ನನ್ನ ಐಡೆಂಟಿಟಿಗಾಗಿ ಬರೆದೆ. ಅಡಿಗರ ಪ್ರಭಾವ, ಬರವಣಿಗೆ ಒಪ್ಪದ ಅಪ್ಪನ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಸಾಹಿತ್ಯದ ದಾರಿ ಗಟ್ಟಿ ಮಾಡಿತು” ಎಂದರು.
ಮಾಹೆ ವಿವಿ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ “ಕಲೆ, ಸಾಹಿತ್ಯ, ಯಕ್ಷಗಾನ, ಭಾರತೀಯ ಸಂಸ್ಕೃತಿ ಬಗ್ಗೆ ಯುವ ಜನತೆಗೆ ಆಸಕ್ತಿ ಮೂಡಿಸಬೇಕು” ಎಂದರು. ಹಿರಿಯ ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಎಂ.ಜಿ.ಎಂ. ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ವನಿತಾ ಮಯ್ಯ, ಎಸ್.ಪಿ. ರಾಮಚಂದ್ರ ಮಾತನಾಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ, ನಿವೃತ್ತ ಪ್ರಾಧ್ಯಾಪಕ ಡಾ. ಆರ್. ನರಸಿಂಹಮೂರ್ತಿ ಮಂಗಳೂರು ಪ್ರಾಸ್ತಾವಿಕ ಮಾತನಾಡಿದರು. ಆರ್.ಆರ್.ಸಿ. ಸಹ ಸಂಶೋಧಕ ಡಾ. ಅರುಣ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
