ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಮತ್ತು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ದೇಲಂಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಾ. ರಮಾನಂದ ಬನಾರಿ ಹಾಗೂ ಗಣರಾಜ ಕುಂಬ್ಳೆ ರಚಿಸಿರುವ ‘ತಾಳಮದ್ದಳೆ ಒಂದು ಐತಿಹಾಸಿಕ ಅಧ್ಯಯನ’ ಮತ್ತು ಪ್ರೊ. ಪಿ. ಎನ್. ಮೂಡಿತ್ತಾಯರು ಸಂಪಾದಿಸಿದ ‘ಚಿಕಿತ್ಸಕ ದೃಷ್ಟಿಯ ಸಂಸ್ಕೃತಿಯ ಸೂತ್ರಧಾರಿ ಡಾ.ರಮಾನಂದ ಬನಾರಿ’ ಎಂಬ ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 19-05-2024ರ ಭಾನುವಾರದಂದು ಕಾಸರಗೋಡಿನ ಎಡನೀರು ಮಠದ ಭಾರತೀ ಸದನದಲ್ಲಿ ನಡೆಯಿತು.
ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ಕನ್ನಡ ಸಾರಸ್ವತ ಲೋಕಕ್ಕೆ ಮತ್ತು ತಾಳಮದ್ದಳೆ ಕ್ಷೇತ್ರಕ್ಕೆ ಡಾ. ರಮಾನಂದ ಬನಾರಿಯವರು ನೀಡಿದ ಕೊಡುಗೆ ಅಪಾರವಾದುದು. ಅವರ ವ್ಯಕ್ತಿತ್ವ ಸಾಧನೆ ಪುಸ್ತಕರೂಪದಲ್ಲಿ ಹೊರಬರುತ್ತಿರುವುದು ತುಂಬಾ ಸಂತೋಷದ ವಿಚಾರ. ‘ತಾಳಮದ್ದಳೆಯ ಐತಿಹಾಸಿಕ ಅಧ್ಯಯನದ’ ಪುಸ್ತಕವನ್ನು ಹೊರತರುತ್ತಿರುವುದು ತುಂಬಾ ಸ್ತುತ್ಯರ್ಹ.” ಎಂದು ಹೇಳಿದರು.
ಖ್ಯಾತ ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ ಮೈಸೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್, ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತುಮಕೂರು ವಿ. ವಿ. ಯ ಪ್ರಾಧ್ಯಾಪಕ ಡಾ. ಸಿಬಂತಿ ಪದ್ಮನಾಭ ಹಾಗೂ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಹೊಸಂಗಡಿ ಕೃತಿ ಪರಿಚಯ ಮಾಡಿದರು. ಡಾ. ರಮಾನಂದ ಬನಾರಿ, ಗಣರಾಜ ಕುಂಬ್ಳೆ ಮಾತನಾಡಿದರು. ಕೃತಿಯ ಲೇಖಕರಾದ ಡಾ. ವಸಂತಕುಮಾರ್ ಪೆರ್ಲ, ರಾಧಾಕೃಷ್ಣ ಕೆ. ಉಳಿಯತಡ್ಕ, ಡಾ. ಪ್ರಮೀಳಾ ಮಾಧವ, ಟಿ. ಎ. ಎನ್. ಖಂಡಿಗೆ, ಗಣರಾಜ ಕುಂಬ್ಳೆ, ವೆಂಕಟರಾಮ ಭಟ್ ಸುಳ್ಯ ಹಾಗೂ ಮುರಳೀಧರ ಚೂಂತಾರು ಇವರನ್ನು ಕಾರ್ಯಕ್ರಮದಲ್ಲಿ ಶಾಲು ಹೊದೆಸಿ, ಸ್ಮರಣಿಕೆ ಕ ನೀಡಿ ಅಭಿನಂದಿಸಲಾಯಿತು.
ಕೃತಿ ಬಿಡುಗಡೆಗೆ ಮುನ್ನ ಕರ್ನಾಟಕದೊಂದಿಗೆ ಕಾಸರಗೋಡಿನ ಸಾಂಸ್ಕೃತಿಕ ವಿಲಿನೀಕರಣ ಎಂಬ ವಿಷಯದಲ್ಲಿ ಸಂವಾದಗೋಷ್ಠಿ ಜರಗಿತು. ಮಾಧ್ಯಮ ತಜ್ಞ ಭಾಸ್ಕರ ರೈ ಕುಕ್ಕುವಳ್ಳಿ ಗೋಷ್ಠಿಯನ್ನು ಉದ್ಘಾಟಿಸಿದರು. ಡಾ. ರಮಾನಂದ ಬನಾರಿ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ದೇಶಕ ಡಾ. ವಸಂತಕುಮಾರ್ ಪೆರ್ಲ, ದ. ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಸಾಹಿತಿ ಹಾಗೂ ಉಪನ್ಯಾಸಕರಾದ ಟಿ. ಎ. ಎನ್. ಖಂಡಿಗೆ ಸಂವಾದದಲ್ಲಿ ಮಾತನಾಡಿದರು.
ಸಮಾರಂಭದ ಅಂಗವಾಗಿ ಡಾ.ರಮಾನಂದ ಬನಾರಿಯವರ ಕಾವ್ಯಗಳ ವಾಚನ ಮತ್ತು ಗಾಯನ ನಡೆಯಿತು. ಸಿ. ಎಚ್. ಗೋಪಾಲಭಟ್ ಚುಕ್ಕಿನಡ್ಕ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಪ್ರಮೀಳಾ ಚುಳ್ಳಿಕಾನ, ವೆಂಕಟ್ ಭಟ್ ಎಡನೀರು, ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ, ವಸಂತ ಬಾರಡ್ಕ ಇವರು ಕಾವ್ಯಗಳ ವಾಚನ, ಗಾಯನ ನಡೆಸಿದರು. ಶ್ರೀಕೃಷ್ಣಯ್ಯ ಅನಂತಪುರ, ನಾರಾಯಣ ದೇಲಂಪಾಡಿ, ಕಿಶೋರ ಬನಾರಿ ಉಪಸ್ಥಿತರಿದ್ದರು.
ಅಹಲ್ಯಾ ಬನಾರಿ, ಪೃಥ್ವಿ ಬನಾರಿ ಪ್ರಾರ್ಥನೆ ಹಾಡಿ, ವಿಜಯಲಕ್ಷ್ಮೀ ಶ್ಯಾನುಭೋಗ್ ಸ್ವಾಗತಿಸಿ, ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿ, ವಿಶಾಲಾಕ್ಷ ಪುತ್ರಕಳ ವಂದಿಸಿದರು.