ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಅತ್ಯಂತ ಪ್ರಾಚೀನ, ಸಾಂಪ್ರದಾಯಿಕ ಹಾಗೂ ಮಂಗಳಕರ ವಾದ್ಯವೆಂದು ಖ್ಯಾತಿ ಪಡೆದ ನಾದಸ್ವರ ವಾದ್ಯವು ಹಲವಾರು ಕಾರಣಗಳಿಂದ ಕೇವಲ ಕೆಲವೇ ಕೆಲವು ದೇವಾಲಯಗಳ ಧಾರ್ಮಿಕ ಕಾರ್ಯಾಚರಣೆಯಲ್ಲಿ ಮಾತ್ರ ಕಂಡು ಬರುತ್ತಿರುವುದು ಅತ್ಯಂತ ಬೇಸರದ ಸಂಗತಿ. ಹಲವಾರು ಭರವಸೆ ಮೂಡಿಸುವ ಉತ್ತಮ ಕಲಾವಿದರು ನಾದಸ್ವರ ವಾದನದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಇಂತಹವರು ಕಲಾ ರಸಿಕರ ಸಮ್ಮುಖದಲ್ಲಿ ಕಾರ್ಯಕ್ರಮ ನೀಡುವಲ್ಲಿ ಅವಕಾಶಗಳಿಂದ ವಂಚಿತರಾಗಿರುವುದು ನಮಗೆಲ್ಲ ತಿಳಿದ ವಿಷಯವೇ ಆಗಿದೆ.
ಶ್ರೀ ನರಸಿಂಹ ಉತ್ಸವದ ಸಂದರ್ಭ ಶ್ರೀ ಸುಬ್ರಮಣ್ಯ ಮಠದ ಯತಿಗಳಾದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರು ಸಭಾ ಕಛೇರಿ ರೀತಿಯಲ್ಲೇ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಇವರ ನಾದಸ್ವರ ವಾದನ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದುದು ಅತ್ಯಂತ ಶ್ಲಾಘನೀಯ ವಿಷಯ. ಸಾಂಪ್ರದಾಯಿಕವಾಗಿ ಗುರುಕುಲ ಮಾದರಿಯಲ್ಲಿ ಸಂಗೀತಭ್ಯಾಸ ಮಾಡಿದ ನಾಗೇಶ್ ಎ. ಬಪ್ಪನಾಡು ಅವರದ್ದು ಪಂಡಿತ-ಪಾಮರರೆಲ್ಲರನ್ನು ಆಕರ್ಷಿಸುವ ಸುಂದರ ಶೈಲಿ. ರಾಗಗಳ ಗಾಂಭೀರ್ಯಕ್ಕೆ ಒಂದಿನಿತೂ ತೊಂದರೆಯಾಗದಂತೆ ನುಡಿಸುವುದು ಇವರ ಪ್ರಸ್ತುತಿಯ ವಿಶೇಷತೆ. ಸಭಾ ಕಛೇರಿಗಳಿಗೆ ನಾದಸ್ವರವನ್ನು ಬಳಸುವಲ್ಲಿ ಈ ವಾದ್ಯಕ್ಕಿರುವ ದೊಡ್ಡ ಸಮಸ್ಯೆಯೇ ಇದರ ಒಟ್ಟು ಧ್ವನಿ ಪ್ರಮಾಣ. ಆದರೆ ನಾಗೇಶ್ ಎ. ಬಪ್ಪನಾಡು ಅವರು ತನ್ನ ವಿಶೇಷ ಪರಿಶ್ರಮದ ಮೂಲಕ ಸಭಾ ಕಛೇರಿಗಳಲ್ಲಿಯೂ ಈ ವಾದ್ಯವನ್ನು ಬಳಸಿ ಹೊಗಳಿಸಿಕೊಂಡವರು. ನವರಾಗ ಮಾಲಿಕೆ ವರ್ಣದಿಂದ ತೊಡಗಿ ಮಧ್ಯಮಾವತಿ ರಾಗದ ಹರಿವರಾಸನಂ ಕೃತಿಯ ತನಕ ತನ್ನ ಇಂಪಾದ ವಾದನದ ಶೈಲಿಯಿಂದ ಕೇಳುಗರನ್ನು ತಲಪುವಲ್ಲಿ ಇವರು ಯಶಸ್ವಿಯಾದರು. ತಮ್ಮ ಹಿತ-ಮಿತವಾದ ವಾದನದ ಮೂಲಕ ಶ್ರೀ ಮುರುಗಾನಂದನ್ ತವಿಲ್ ನಲ್ಲಿ ಶ್ರೀಮತಿ ಸುನಾದ ಪಿ.ಎಸ್. ವಯಲಿನ್ ನಲ್ಲಿ, ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ, ಶ್ರೀ ಉಮೇಶ್ ಸುರತ್ಕಲ್ ಮತ್ತು ಶ್ರೀ ನಾರಾಯಣ ಪೊರ್ಕೋಡಿ ಸ್ಯಾಕ್ಸೋಫೋನ್ ನಲ್ಲಿ ಹಾಗೂ ಶ್ರೀ ಆನಂದ ತಾಳದಲ್ಲಿ ಸಹಕರಿಸಿ ಕಾರ್ಯಕ್ರಮದ ಒಟ್ಟು ಯಶಸ್ಸಿಗೆ ಕಾರಣರಾದರು. ಇಂತಹ ಸಂಘಟನೆಗಳಿಂದ ನಾದಸ್ವರದಂತಹ ವಾದ್ಯ ಪ್ರಕಾರಗಳು ಉಳಿಯಲಿ ಹಾಗೂ ಬೆಳೆಯಲಿ ಎಂಬುದು ನನ್ನ ಆಶಯ. ಸಂಘಟಕರಿಗೆ ಮತ್ತು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಮಗದೊಮ್ಮೆ ಪ್ರಣಾಮಗಳು.
– ಪಿ. ನಿತ್ಯಾನಂದ ರಾವ್
9742792669