15 ಫೆಬ್ರವರಿ 2023, ಮಂಗಳೂರು: ಫೆಬ್ರವರಿ 11 ಮತ್ತು 12ರಂದು ಸಂಪನ್ನಗೊಂಡ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಕುರಿತು ಸಮ್ಮೇಳನಾಧ್ಯಕ್ಷರಾದ ಡಾ. ಎಂ. ಪ್ರಭಾಕರ ಜೋಷಿ ಇವರ ಅನಿಸಿಕೆ
“ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಮಾನ್ಯ ಸುನಿಲ್ ಕುಮಾರ್ ಕಾರ್ಕಳ, ಶಾಸಕ ರಘುಪತಿ ಭಟ್ ಹಾಗೂ ಸಂಘಟನಾ ಸಮಿತಿಯ ಎಲ್ಲರೂ, ಜಿ.ಎಲ್.ಹೆಗ್ಡೆ ಮತ್ತು ಅವರ ಬಳಗ, ಉಡುಪಿ ಕಲಾರಂಗ ಬಳಗ ತುಂಬಾ ದುಡಿದು ಒಂದು ಅದ್ಭುತವಾದ ಕೆಲಸ ಮಾಡಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ಮುತುವರ್ಜಿ ಸಹಕಾರವೂ ಸ್ಮರಣೀಯ. ಅಕಾಡೆಮಿ ರಿಜಿಸ್ಟ್ರಾರ್ ಮತ್ತವರ ಸಿಬ್ಬಂದಿಗಳು, ಸ್ವಯಂಸೇವಕರು, ಅನೇಕ ದಾನಿಗಳು, ಸಹಕಾರಿ ಸಂಸ್ಥೆಗಳು, ದೇವಾಲಯಗಳ ಆಡಳಿತ ಮಂಡಳಿಗಳು ಜೊತೆಗಿದ್ದು ಸಹಕರಿಸಿದ್ದು ಶ್ಲಾಘನೀಯ. ಅದಕ್ಕೆ ಪೂರಕವಾಗಿ ಮಾಹೆಯವರ ಬಿ. ಎಡ್. ಕಾಲೇಜೂ ಸಿಕ್ಕಿತು. ಎಂ. ಜಿ. ಎಂ. ಕಾಲೇಜಿಗೂ ಇದು ಹತ್ತಿರವಾಯಿತು. ಉತ್ತಮ ಜಾಗ ಮತ್ತು ಎಲ್ಲಾ ಸೌಕರ್ಯಗಳಿರುವ ಜಾಗವೂ ಹೌದು. ಅತ್ಯಲ್ಪ ಅವಧಿಯ ಸಿದ್ಧತೆ. 100 ಅಂಗಡಿ ಮುಗ್ಗಟ್ಟುಗಳು, ದ್ವಾರಗಳು ಮತ್ತು ಅಂಗಣಗಳಿಗೆ ಬೇರೆ ಬೇರೆ ಹೆಸರುಗಳು, ಅಲ್ಲಿಯೇ ತಾಳ, ಸಾಮಗ್ರಿ, ಶಿಲ್ಪ ತಯಾರು ಮಾಡುವುದು, ಇದೆಲ್ಲಾ ಸಾಧ್ಯತೆಗಳನ್ನು ತೋರಿಸುತ್ತದೆ. ತೀರಾ ಹಳೆಯ ಕ್ರಮದ ರಂಗಸ್ಥಳ, ಮಡಲಿನಿಂದ ಕಟ್ಟಿದ ಚೌಕಿ, ಮೂರು ವೇದಿಕೆಗಳಲ್ಲಿ ನಿರಂತರ ಪ್ರದರ್ಶನ, ಪ್ರಧಾನ ವೇದಿಕೆಯಲ್ಲಿ ಉದ್ಘಾಟನೆ, ಅಧ್ಯಕ್ಷರ ಭಾಷಣ, ಸಂವಾದಗಳು, ಸನ್ಮಾನ, ಸಮಾರೋಪ ಇತ್ಯಾದಿ. ಸಮಾನಾಂತರದಲ್ಲಿರುವ ಉಳಿದೆರಡು ವೇದಿಕೆಗಳಲ್ಲಿ ತಾಳ ಮದ್ದಳೆ ನಡೆಯುತ್ತಿತ್ತು. ತೆಂಕು ಬಡಗು ತಿಟ್ಟುಗಳ ಪ್ರದರ್ಶನ ಉತ್ತಮವಾಗಿ ಮೂಡಿ ಬರುತ್ತಿತ್ತು. ಉತ್ತಮ ರೀತಿಯಲ್ಲಿ ಸನ್ಮಾನ, ರೂ.10000/- ಕೊಡುಗೆ ಮತ್ತು ಉಪಸ್ಥಿತರಿದ್ದ ಬೇರೆ ಬೇರೆ ಮೇಳಗಳಿಂದ ಬಂದ ಎಲ್ಲಾ ಕಲಾವಿದರಿಗೂ ಒಂದು ಗಿಫ್ಟ್ ಕೊಟ್ಟಿದ್ದಾರೆ. ಏನು ನೆನೆಸಿದ್ದಾರೋ ಅದರ ಬಹು ಭಾಗ ಕೈಗೂಡಿದೆ. ಅಸಮಾಧಾನ ಅತೃಪ್ತಿಗಳು ಉಳಿದಿರಬಹುದು. ಒಂದೇ ಭಾರಿಗೆ ಎಲ್ಲವನ್ನೂ ನಿಭಾಯಿಸಲಾಗುವುದಿಲ್ಲ. ಪ್ರಾಶಸ್ತ್ಯ ಬೇರೆ ಬೇರೆಯವರು ಕೊಡುವಾಗ ಬೇರೆ ಬೇರೆ ಇರುತ್ತದೆ. ಅದಕ್ಕೆ ಅಂತ್ಯ ಎಂಬುದು ಇಲ್ಲ. ಈ ಸಮ್ಮೇಳನ ನಿರಂತರವಾಗಿ ನಡೆಯಬೇಕು. ಅಧ್ಯಕ್ಷ ಭಾಷಣದಲ್ಲಿ 30 ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟಿದ್ದೇನೆ. ಅಂತರ್ ರಾಷ್ಟ್ರೀಯ ಮಟ್ಟದ ಪೂರ್ಣ ಸಂಗ್ರಹಾಲಯ, ಡೇಟಾಬೇಸ್, ಕಲಾವಿದರ ಹಿತರಕ್ಷಣೆ, ಮಾಸಾಶನ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಗಳಲ್ಲಿ ಯಕ್ಷಗಾನಕ್ಕೆ ಸ್ಥಾನ, ಯಕ್ಷಗಾನ ಶಾಲೆಗಳನ್ನು ಮೇಲ್ದರ್ಜೆಗೇರಿಸಿ Modern School Of Arts ತರಹ ಮಾಡಬೇಕು ಎಂಬಿತ್ಯಾದಿ ಬೇಡಿಕೆ. ಎಷ್ಟು ಮಾಡಲು ಸಾಧ್ಯವಿದೆಯೋ ಗೊತ್ತಿಲ್ಲ. ಮುಂದಿನ 10 -15 ವರ್ಷಗಳಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ತುಂಬಾ ಆತ್ಮೀಯವಾಗಿ ನಡೆಸಿಕೊಂಡಿದ್ದಾರೆ. ಅನೇಕ ಅರ್ಹರ ಮಧ್ಯೆ ನಾನೂ ಒಬ್ಬ. ನನಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ ಅದು ಒಬ್ಬ ಕಲಾವಿದನಿಗೆ ಹಾಗೂ ತಜ್ಞರಿಗೆ ಸಿಗಬಹುದಾದ ದೊಡ್ಡ ಮನ್ನಣೆ. ಸಮ್ಮೇಳನದ ಆರಂಭದ ಅಧ್ಯಕ್ಷನನ್ನಾಗಿ ನನ್ನನ್ನು ಮಾಡಿ ಗೌರವ ನೀಡಿದ್ದಕ್ಕೆ ಸಂಬಂಧ ಪಟ್ಟ ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಇನ್ನು ಮುಂದೆ ಯಾರಾದರೂ ಖಾಸಗಿಯಾಗಲೀ, ಸರ್ಕಾರಿಯಾಗಲೀ ಯಕ್ಷಗಾನದ ಕೆಲಸ ಮಾಡುವುದಿದ್ದಲ್ಲಿ ನಾನು ಯಾವಾಗಲೂ ಸಹಾಯ ನೀಡಲು ಸಿದ್ಧ. ಬಹಳಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಅದಕ್ಕೆ ಸರಿಯಾಗಿ ಸಾರ್ವಜನಿಕ ಪ್ರತಿಕ್ರಿಯೆಯೂ ಚೆನ್ನಾಗಿ ಬಂದಿದೆ. ಈ ಕೆಲಸ ಮುಂದೆ ಸಾಗಬೇಕು.”
- ಡಾ.ಎಂ.ಪ್ರಭಾಕರ ಜೋಷಿ, ಸಮ್ಮೇಳನಾಧ್ಯಕ್ಷ, ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ 2023
ಪೂರ್ಣ ಸಮ್ಮೇಳನ ಅಧ್ಯಕ್ಷರ ಆಯ್ಕೆಯಿಂದ ಮೊದಲ್ಗೊಂಡು ಗೋಷ್ಟಿಯವರೆಗೂ ಯಶಸ್ಸನ್ನು ಕಂಡಿದೆ. ಇದು ಒಂದು ಸರಕಾರಿ ಸಮ್ಮೇಳನದ ಹಾಗಿರದೆ, ಬಹಳ ಕಾಳಜಿವಹಿಸಿ ಮಂತ್ರಿಗಳು ಶಾಸಕರೆಲ್ಲರೂ ಸೇರಿ ಶ್ರದ್ಧೆಯಿಂದ ಮೂರೂ ವೇದಿಕೆಗಳನ್ನು ಬಳಸಿಕೊಂಡು ಗರಿಷ್ಠ ಪ್ರಾತಿನಿಧ್ಯ ಕೊಟ್ಟು ಮಾಡಿದ್ದಾರೆ ಎಂಬುದು ಜನಮಾನಸದ ಅಭಿವ್ಯಕ್ತಿ.