ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇವರ ಆಶ್ರಯದಲ್ಲಿ ಸಾಹಿತಿ ದಿ. ಮೇಟಿ ಮುದಿಯಪ್ಪ ನೆನಪಿನ ಯುವ ಕಥಾ ಸ್ಪರ್ಧೆಯ ವಿಜೇತರರಿಗೆ ಬಹುಮಾನ ವಿತರಣೆ ಹಾಗೂ ಅವರ ಬದುಕು ಬರಹದ ಕುರಿತು ಉಪನ್ಯಾಸ ಕಾರ್ಯಕ್ರಮವು ಉಡುಪಿಯ ಯಕ್ಷಗಾನ ಕಲಾರಂಗದ ಐ. ವೈ. ಸಿ. ಸಭಾಂಗಣದಲ್ಲಿ ದಿನಾಂಕ 26-05-2024ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮೇಟಿ ಅವರೊಂದಿಗಿನ ನಾಲ್ಕು ದಶಕಗಳ ಒಡನಾಟದ ನೆನಪುಗಳನ್ನು ಮೆಲುಕು ಹಾಕಿದ ನಾಡಿನ ಖ್ಯಾತ ವಿಮರ್ಶಕ ಹಾಗೂ ಲೇಖಕರಾದ ಜಿ. ಪಿ. ಪ್ರಭಾಕರ್ ತುಮರಿ “ಸಾಹಿತಿ ದಿ. ಮೇಟಿ ಮುದಿಯಪ್ಪನವರು ಮಾನವೀಯತೆ ಪ್ರಧಾನವಾದ ಬಹುಮುಖ ವ್ಯಕ್ತಿತ್ವ ಹೊಂದಿದವರು. ವಿವಿಧ ಸಂಘ- ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದುದು ಮಾತ್ರವಲ್ಲದೆ, ರಂಗ ನಟರಾಗಿ ಪ್ರತಿಭೆ ತೋರಿದ್ದಾರೆ. ಅವರದ್ದು ಸಾಮಾನ್ಯರಲ್ಲಿ ಸಾಮಾನ್ಯನಾಗುವ ಗುಣ. ಯಾವುದೇ ಅಹಂಕಾರ ಇಲ್ಲದ, ಎಲ್ಲರೊಂದಿಗೆ ಬೆರೆಯುವ ಅವರ ಗುಣವೇ ಎಲ್ಲರಿಗೂ ಅವರನ್ನು ಪ್ರಿಯವಾಗಿಸಿದೆ. ಉಡುಪಿಗೆ ಉತ್ತರ ಕರ್ನಾಟಕದಿಂದ ವಲಸೆ ಬಂದವರನ್ನು ಒಟ್ಟು ಸೇರಿಸಿ ಕನಕದಾಸ ಸಮಾಜ ಸೇವಾ ಸಂಘವನ್ನು ಸ್ಥಾಪಿಸಿ ಸ್ವಾಭಿಮಾನ ತುಂಬಿದವರು. ಇನ್ನು ಕನಕದಾಸನ ಕುರಿತು ಉಡುಪಿಯಲ್ಲಿ ವಿವಾದ ಎದ್ದಾಗ ಅದನ್ನು ಅತ್ಯಂತ ಸೌಹಾರ್ದವಾಗಿ, ಸುಖಾಂತ್ಯವಾಗಿ ಮಾಡಲು ಅದರ ನೇತೃತ್ವವನ್ನು ವಹಿಸಿದ್ದರು. ಇವರ ಸಂಸ್ಮರಣೆಯನ್ನು ಮಾಡುತ್ತಿರುವುದು ಬಹಳ ಅರ್ಥಪೂರ್ಣ ಕಾರ್ಯ.” ಎಂದರು.
ಕಾರ್ಯಕ್ರಮದಲ್ಲಿ ಮೇಟಿ ಮುದಿಯಪ್ಪ ನೆನಪಿನಲ್ಲಿ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಯುವ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಡಾ. ನಮೃತಾ ಬಿ. , ದ್ವಿತೀಯ ಬಹುಮಾನ ಪಡೆದ ಡಾ. ಜಿ. ಪಿ. ನಾಗರಾಜ್ ಹಾಗೂ ಮೆಚ್ಚುಗೆ ಬಹುಮಾನ ಪಡೆದ ರಾಮಾಂಜಿ ನಮ್ಮಭೂಮಿ ,ಮಂಜುನಾಥ್ ಕಾರ್ತಟ್ಟು ಹಾಗೂ ಮಂಜುನಾಥ್ ಹಿಲಿಯಾಣ ಇವರಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ತೀರ್ಪುಗಾರರಾಗಿ ಸಹಕರಿಸಿದ್ದ ಹಿರಿಯ ಸಾಹಿತಿ ಡಾ. ಜನಾರ್ದನ್ ಭಟ್ಟ ಹಾಗೂ ತುಳು ಸಾಹಿತ್ಯ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಯಾದ ಉದ್ಯಾವರ ನಾಗೇಶ್ ಕುಮಾರ್ ಇವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ ಇದರ ವಿಶ್ವಸ್ಥರಾದ ಹಿರಿಯಡ್ಕ ಮುರಳೀಧರ ಉಪಾಧ್ಯ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿರಂಜನ ಚೋಳಯ್ಯ, ಮೇಟಿ ಮುದಿಯಪ್ಪ ಅವರ ಪುತ್ರಿ ಶಾಂತಾ ಮೇಟಿ ಉಪಸ್ಥಿತರಿದ್ದರು.
ಕ. ಸಾ. ಪ. ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಆಶಯ ಮಾತುಗಳೊಂದಿಗೆ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ನಿರೂಪಿಸಿ, ಗೌರವ ಕಾರ್ಯದರ್ಶಿ ರಂಜಿನಿ ವಸಂತ್ ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಾಡಿನ ಖ್ಯಾತ ನಿರ್ದೇಶಕ ಡಾ. ಶ್ರೀಪಾದ್ ಭಟ್ ನಿರ್ದೇಶನದ ‘ಮಂಟೇಸ್ವಾಮಿ ಕಾವ್ಯ ಪ್ರಯೋಗ’ ಪ್ರದರ್ಶನಗೊಂಡಿತು.