ಮಂಗಳೂರು : ಕರಾವಳಿ ಲೇಖಕಿಯರ-ವಾಚಕೀಯರ ಸಂಘ ಹಾಗೂ ಬೆಂಗಳೂರಿನ ವಸಂತಪುರದ ಸುಶಾಂತ ಪ್ರಕಾಶನ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ನಳಿನಾಕ್ಷಿ ಉದಯರಾಜ್ ರಚಿಸಿರುವ ‘ಬದುಕಿನ ಸತ್ಯಗಳು’ ಸಮಕಾಲೀನ ಚಿಂತನೆಗಳ ಸಂಕಲನ ಮತ್ತು ‘ಸ್ವಾತಿಮುತ್ತು’ ಚುಟುಕು ಸಂಕಲನವು ದಿನಾಂಕ 25-05-2024ರಂದು ಮಂಗಳೂರಿನ ಮಹಿಳಾ ಸಭಾದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು.
ಈ ಸಮಾರಂಭವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ ಮಾತನಾಡಿ “ಲೇಖಕಿ ನಳಿನಾಕ್ಷಿ ಉದಯರಾಜ್ ಇವರ ಎರಡೂ ಕೃತಿಗಳು ಬದುಕಿನ ಸತ್ಯಗಳೊಂದಿಗೆ ಸಾರ್ವಕಾಲಿಕ ಸತ್ಯಗಳನ್ನು ಅನಾವರಣಗೊಳಿಸಿವೆ. ಅಂಕಣ ಬರಹಗಳನ್ನು ಈ ರೀತಿಯಾಗಿ ಕೃತಿ ರೂಪದಲ್ಲಿ ಕಟ್ಟಿಕೊಟ್ಟಾಗ ಅದು ಎಲ್ಲರಿಗೂ ಓದುವ ಆಸಕ್ತಿಯನ್ನು ಮೂಡಿಸುವುದರೊಂದಿಗೆ ಜೀವನಾನುಭವಗಳನ್ನು ನೀಡುವ ಸಂದೇಶಗಳಾಗಿ ಜನಸಾಮಾನ್ಯರಿಗೆ ತಲುಪಲು ಸಾಧ್ಯ” ಎಂದು ಹೇಳಿದರು.
ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಳಿನಾಕ್ಷಿ ಉದಯರಾಜ್ ಇವರ ‘ಬದುಕಿನ ಸತ್ಯಗಳು’ ಕೃತಿಯನ್ನು ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಮತ್ತು ‘ಸ್ವಾತಿಮುತ್ತು’ ಚುಟುಕು ಸಂಕಲನವನ್ನು ಹಿರಿಯ ಲೇಖಕ ಸದಾನಂದ ನಾರಾವಿ ಅನಾವರಣಗೊಳಿಸಿದರು. ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಡಾ. ಸುಧಾರಾಣಿ ಮತ್ತು ಕವಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಕೃತಿಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಸೈನ್ಯಾಧಿಕಾರಿ ಹಾಗೂ ಕೆನರಾ ಬ್ಯಾಂಕಿನ ಪ್ರಬಂಧಕ ಸುಕುಮಾರ್ ಕುಂಬಳೆ, ಸುಶಾಂತ ಪ್ರಕಾಶನದ ಪ್ರಕಾಶಕ ಹಾಗೂ ಇನ್ಫೋಸಿನ್ ಸಂಸ್ಥೆಯಲ್ಲಿ ಸಂಶೋಧಕರಾಗಿರುವ ಸುಶಾಂತ್ ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ರತ್ನಾವತಿ ಜೆ. ಬೈಕಾಡಿ ಆಶಯ ಗೀತೆಯನ್ನು ಹಾಡಿದರು. ಕೃತಿಗಳ ಲೇಖಕಿ ನಳಿನಾಕ್ಷಿ ಉದಯರಾಜ್ ಸ್ವಾಗತಿಸಿ, ವಿಜಯಲಕ್ಷ್ಮೀ ಕಟೀಲು ಕಾರ್ಯಕ್ರಮ ನಿರೂಪಿಸಿ, ಅಕ್ಷತಾ ಅನಿಕೇತ್ ನಂದಿಸಿದರು.