ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳ ಮದ್ದಳೆ ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮವು ದಿನಾಂಕ 26-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್.ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ “ಯಕ್ಷಗಾನದಿಂದಾಗಿ ಕಲೆ, ಸಾಹಿತ್ಯಗಳನ್ನು ಓದಿ ಮನನ ಮಾಡಿಕೊಳ್ಳುವುದರಿಂದ ಆತ್ಮಸ್ಥೈರ್ಯ ವೃದ್ಧಿಸುತ್ತದೆ. ಓದುವ ಹಾಗೂ ಲೋಕದ ವಿಚಾರಗಳನ್ನು ಮನನ ಮಾಡಿಕೊಳ್ಳುವ ವೈಚಾರಿಕ ಶಕ್ತಿ ಉದ್ದೀಪನಗೊಳ್ಳುತ್ತದೆ. ರಾಷ್ಟ್ರಹಿತಕ್ಕಾಗಿ ಚಿಂತಿಸುವ ಶಕ್ತಿ ಜಾಗೃತವಾಗುತ್ತದೆ. ನಾನು ಕ. ಸಾ. ಪ. ಇದರ ಅಧ್ಯಕ್ಷನಾಗಿದ್ದಾಗಲೂ ಈ ವಿಚಾರಗಳ ಬಗ್ಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿದ್ದೆ. ಯಕ್ಷಗಾನದಂತಹ ಸಾಗರೋಲ್ಲಂಘನ ಕಲೆಯನ್ನು ನಂಬಿ ಎಷ್ಟೋ ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ.” ಎಂದರು.
ಕಾರ್ಯಕ್ರಮದಲ್ಲಿ ಝೀ-ಕನ್ನಡ ಸರಿಗಮಪ ಸೀಸನ್-19ರ ಸಂಗೀತ ಕಾರ್ಯಕ್ರಮದಲ್ಲಿ ದ್ವಿತೀಯ ರನ್ನರ್ಸ್ ಅಪ್ ಆಗಿ ಮೂಡಿ ಬಂದ ಶಾರದಾ ವಿದ್ಯಾಲಯದ ವಿದ್ಯಾರ್ಥಿನಿ ಕು. ತನುಶ್ರೀಯವರನ್ನು ನ್ಯಾಯವಾದಿಗಳು ಮತ್ತು ಧಾರ್ಮಿಕ ಮುಖಂಡರಾದ ಜಗದೀಶ ಶೇಣವ ಗೌರವಿಸಿದರು. ಕಾರ್ಯಕ್ರಮ ನಿರೂಪಕ ಸುಧಾಕರ ರಾವ್ ಪೇಜಾವರ, ಭಾರತೀ ಪ್ರಮೋದ್, ಪ. ರಾಮಕೃಷ್ಣರಾವ್, ಬಾಲಕೃಷ್ಣ ಶೆಟ್ಟಿ, ನಾಗರಾಜ ಖಾರ್ವಿ ಉಪಸ್ಥಿತರಿದ್ದರು.
ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಆಹ್ವಾನಿತ ಮಹಿಳಾ ತಂಡಗಳಿಂದ” ಮಹಿಳಾ ಯಕ್ಷಗಾನ ತಾಳಮದ್ದಳೆ ಸಂಭ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ‘ಗುರುದಕ್ಷಿಣಿ’ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಂಡಿತು.