ಉಡುಪಿ : ಬೆಂಗಳೂರಿನ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಇದರ ವತಿಯಿಂದ ‘ಸಾಹಿತ್ಯ ಸಹವಾಸ’ ದಿ. ಪ್ರೊ. ಯು.ಆರ್. ಅನಂತಮೂರ್ತಿಯವರ ವಿಡಿಯೊ ಸಾಹಿತ್ಯಿಕ ಉಪನ್ಯಾಸ ಸರಣಿಯ ಬಿಡುಗಡೆ ಹಾಗೂ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ 01-06-2024ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಬೆಳಗ್ಗೆ ಗಂಟೆ 9-30ಕ್ಕೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಹಿತಿಗಳು ಮತ್ತು ಚಿಂತಕರಾದ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ವಿಡಿಯೊ ಸರಣಿ ಬಿಡುಗಡೆ ಮಾಡಲಿದ್ದಾರೆ. ಕಾರಂತರ ಸಾಧನೆಯ ಅವಲೋಕನದಲ್ಲಿ ಪ್ರೊ. ಕೆ. ಚಿನ್ನಪ್ಪ ಗೌಡ ಇವರಿಂದ ‘ಕಾರಂತರ ಕುರಿತಾದ ಅನಂತಮೂರ್ತಿಯವರ ಉಪನ್ಯಾಸಕ್ಕೆ ಪ್ರತಿಸ್ಪಂದನೆ’, ಗಂಟೆ 11-00ರಿಂದ ಕಾರಂತಸೃಷ್ಟಿಯ ಹಲವು ಮುಖಗಳು ಎಂಬ ವಿಷಯದಲ್ಲಿ ಗೋಷ್ಠಿ, ಗಂಟೆ 12-20ಕ್ಕೆ ಉಡುಪಿಯ ಇಂದ್ರಾಳಿ ಯಕ್ಷಗಾನ ಕೇಂದ್ರದವರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಮಧ್ಯಾಹ್ನ ಗಂಟೆ 2-00ರಿಂದ ‘ಕಾರಂತರು ಮತ್ತು ಅಡಿಗರ ಜೊತೆಗಿನ ಒಡನಾಟದ ನೆನಪುಗಳು’, ‘ಅಡಿಗರು ಮತ್ತು ನವ್ಯ ಕಾವ್ಯ : ಇಂದಿನ ಅನುಸಂಧಾನ’ದಲ್ಲಿ ಅಡಿಗರ ಕುರಿತಾದ ಅನಂತಮೂರ್ತಿಯವರ ಉಪನ್ಯಾಸಕ್ಕೆ ಪ್ರತಿಸ್ಪಂದನೆ ಮತ್ತು ‘ಅಡಿಗರ ಕಾವ್ಯ – ವಸಾಹತೋತ್ತರ ನೆಲೆ’ ಎಂಬ ವಿಷಯದ ಬಗ್ಗೆ ಸಂವಾದ ನಡೆಯಲಿದೆ. ಗಂಟೆ 3.45ರಿಂದ ನಡೆಯಲಿರುವ ಸಮಾರೋಪದಲ್ಲಿ ಅಡಿಗರ ಗೀತಗಾಯನ ಮತ್ತು ಪ್ರಬಂಧ ಮತ್ತು ಗಾಯನ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.