ಬೆಂಗಳೂರು : ಸಂಧ್ಯಾ ಕಲಾವಿದರು ಅಭಿನಯಿಸುವ ಎಸ್.ವಿ. ಕೃಷ್ಣಶರ್ಮ ರಚಿಸಿ ನಿರ್ದೇಶಿಸಿರುವ ‘ಸುಯೋಧನ’ ನಾಟಕವು ದಿನಾಂಕ 07-06-2024ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ ‘ಚೌಡಯ್ಯ ಮೆಮೋರಿಯಲ್ ಹಾಲ್’ನಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ನಿರ್ವಹಣೆ ವೈ.ಕೆ. ಸಂಧ್ಯಾ ಶರ್ಮ ಅವರದ್ದು.
ಮಹಾಭಾರತದಲ್ಲಿ ನಡೆದು ಹೋದ ಘಟನೆ, ಕಥಾನಕವನ್ನು ದುರ್ಯೋಧನ ತನ್ನ ವಿಮರ್ಶಕ ಚಕ್ಷುಗಳಿಂದ ಪರಾಮರ್ಶಿಸುವ, ವಿಶ್ಲೇಷಿಸುವ ಚಿಂತನ ಮಂಥನಗಳಿಗೆ ಒತ್ತು ನೀಡುವ ‘ಸುಯೋಧನ’ ನಾಟಕ ಬೇರೆ ನಾಟಕಗಳಿಗಿಂತ ವಿಭಿನ್ನವಾಗಿದೆ. ಇಲ್ಲಿಯ ರಾಜಕಾರಣದಲ್ಲಿ ಕಂಡು ಬರುವ ಕೃಷ್ಣನ ಕಪಟ, ಶಕುನಿಯ ಕುತಂತ್ರ, ಸುಯೋಧನನ ಛಲ ಮುಂದಿನ ರಾಜಕೀಯಕ್ಕೆ ಭದ್ರ ಬುನಾದಿಯೆನ್ನುವ ನಾಟಕದ ಮಾತು, ಅವರ ನಡೆ ಇವತ್ತಿನ ರಾಜಕೀಯ ಪ್ರಸ್ತುತತೆಯನ್ನು ಎತ್ತಿಹಿಡಿಯುತ್ತದೆ.
ಮಹಾಭಾರತದ ಕಥೆಗೊಂದು ಹೊಸ ಆಯಾಮ ನೀಡುವ ಪ್ರಯತ್ನವನ್ನು ನಾಟಕಕಾರರು ಮಾಡಿದ್ದಾರೆ. ಮಹಾಭಾರತದ ಬಹುತೇಕ ವಿವರಗಳು ನಾಟಕದಲ್ಲಿ ಹಾದು ಹೋಗುತ್ತವೆ. ಈ ನಾಟಕದಲ್ಲಿ ಸುಯೋಧನ ಕೂಡ ತನ್ನ ದೃಷ್ಟಿಯಿಂದಲೇ ಎಲ್ಲವನ್ನೂ ವಿಶ್ಲೇಷಿಸುತ್ತಾನೆ. ಇಲ್ಲಿ ನಾಟಕದ ಕಥಾ ನಾಯಕ ದುರ್ಯೋಧನನಾದ್ದರಿಂದ ಅವನು ಕಂಡಂತೆ ಉಳಿದ ಪಾತ್ರಗಳ ಗುಣ ಸ್ವಭಾವಗಳು ಬಿಚ್ಚಿಕೊಳ್ಳುತ್ತವೆ. ಪ್ರಸಂಗಗಳು ಅವನ ವಿಮರ್ಶೆಗೆ ಒಳಪಡುತ್ತವೆ. ಕೃಷ್ಣ-ಪಾಂಡವರ ಪ್ರಶ್ನೆಗಳಿಗೆಲ್ಲ ಅವನು ಹರಿತವಾಗಿ ಉತ್ತರಿಸುತ್ತಾ ಅವರ ನಿಜ ಬಣ್ಣವನ್ನು ಬಯಲು ಮಾಡುತ್ತಾನೆ.
ಕಥೆ ಆರಂಭವಾಗುವುದೇ ಸ್ಮಶಾನ ಕುರುಕ್ಷೇತ್ರದಿಂದ. ತನ್ನ ಪತನಕ್ಕೆ ಕಾರಣವನ್ನು ಹುಡುಕುತ್ತಾ, ತನ್ನ ಕಡೆಯ ಜನಗಳ ಪಕ್ಷಪಾತ ನಡೆಯನ್ನು ಹಾಗೂ ಮೊದಲಿಂದ ಕೊನೆಯವರೆಗೂ ಕೃಷ್ಣನು ಪಾಂಡವರ ಪಕ್ಷಪಾತಿಯಾಗಿ ನಡೆದುಕೊಂಡಿದ್ದನ್ನು ಚುಚ್ಚುಮಾತುಗಳಲ್ಲಿ ಹೇಳುತ್ತಾನೆ. ತನ್ನ ಶೌರ್ಯ ಮತ್ತು ಸ್ವಾಭಿಮಾನವನ್ನು ಘಂಟಾಘೋಷವಾಗಿ ಸಾರುತ್ತಾ, ವೈಶಂಪಾಯನ ಸರೋವರದಿಂದ ಎದ್ದು ಬಂದು ಭೀಮನೊಡನೆ ಗದಾಯುದ್ಧ ಮಾಡಿ ಸಾವನ್ನಪ್ಪುತ್ತಾನೆ. ಇಡೀ ಮಹಾಭಾರತದ ಪ್ರಕರಣಗಳನ್ನೆಲ್ಲ ಮೆಲುಕು ಹಾಕುವಂತೆ ಮಾಡುವ ‘ಸುಯೋಧನ’ ನಾಟಕಕ್ಕೆ ಬಲವಾದ ಸಂಭಾಷಣೆಗಳೇ ಆಧಾರ.