ಕನ್ನಡದಲ್ಲಿ ಕಾದಂಬರಿಯು ಅತ್ಯಂತ ಹುಲುಸಾಗಿ ಬೆಳೆದ ಸಾಹಿತ್ಯ ಪ್ರಕಾರವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಅದು ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಅದರ ಬೆಳವಣಿಗೆಯನ್ನು ಸ್ಥೂಲವಾಗಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಯುಗಗಳೆಂದು ಗುರುತಿಸಲಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯ ಈ ಹಂತಗಳನ್ನು ಕಾಲ ಕ್ರಮದಲ್ಲಿ ಒಂದು ಮುಗಿದ ನಂತರ ಇನ್ನೊಂದು ಆರಂಭವಾಯಿತು ಎನ್ನುತ್ತಿದ್ದರೂ ಅವುಗಳೆಲ್ಲ ಏಕ ಕಾಲದಲ್ಲಿ ಅಸ್ತಿತ್ವದಲ್ಲಿರುವುದನ್ನು ಅಲ್ಲಗೆಳೆಯುವಂತಿಲ್ಲ. ಈಗ ಬಂಡಾಯ ಯುಗವು ಮುಗಿದರೂ ಅದರ ಸೂಕ್ಷ್ಮ ದನಿಯನ್ನು ಹೊಂದಿದ ಅನೇಕ ಕಾದಂಬರಿಗಳು ಬರುತ್ತಿವೆ. ನವ್ಯ ಮಾರ್ಗದ ಕೃತಿಗಳೂ ಬೆಳಕು ಕಾಣುತ್ತಿವೆ.
ನಾರಾಯಣ ಕಂಗಿಲ ಅವರ ‘ಶಬ್ದ ಮತ್ತು ನೂಪುರ’ ಎಂಬ ಕಾದಂಬರಿಯು ನವ್ಯದ ಸತ್ವವನ್ನು ಹೀರಿಕೊಂಡು ರೂಪು ತಾಳಿದೆ. ವಿಶಾಲ ಎಂಬ ವ್ಯಕ್ತಿಯ ಆತ್ಮಶೋಧನೆ, ದ್ವಂದ್ವ, ಸ್ವಗತಗಳಿಂದ ಆರಂಭಗೊಳ್ಳುವ ಕಾದಂಬರಿಯು ಆಪ್ತವಾದ ನಿರೂಪಣೆಯೊಂದಿಗೆ ಬದುಕಿನ ಸಂಕೀರ್ಣ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತದೆ. ಮಾನವೀಯ ಸಂಬಂಧಗಳ ಸೂಕ್ಷ್ಮ ರೂಪವನ್ನು ಹಿಡಿದಿಡುತ್ತದೆ. ಇಲ್ಲಿ ‘ಶಬ್ದ’ ಎಂಬುದು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ನೆಲೆಗಳಲ್ಲಿ ಕಾಣಿಸಿಕೊಳ್ಳುವ ಸದ್ದು ಗದ್ದಲಗಳನ್ನು ಸೂಚಿಸಿದರೆ ‘ನೂಪುರ’ವು ನಮ್ಮ ಹೃದಯದಲ್ಲಿ ಅನುರಣಿಸಬೇಕಾದ ಪ್ರೀತಿಯ ದನಿಗೆ ಸಂಕೇತವಾಗಿದೆ.
ನಾರಾಯಣ ಕಂಗಿಲರು ತಮ್ಮ ಬರವಣಿಗೆಯನ್ನು ಆರಂಭಿಸಿದ್ದು ಕನ್ನಡದಲ್ಲಿ ನವ್ಯ ಚಳುವಳಿಯು ಪ್ರಖರವಾಗಿದ್ದ ಕಾಲದಲ್ಲಿ. ಆದ್ದರಿಂದ ಆ ಚಳುವಳಿಯ ಪ್ರಭಾವವು ಅವರ ಮೇಲಿದೆ. ಕೇರಳದ ತಲಶ್ಶೇರಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ಕೇರಳೀಯರ ಬದುಕು ಮತ್ತು ರಾಜಕೀಯವು ಜನತೆಯ ಬದುಕನ್ನು ಪ್ರಭಾವಿಸುವ ಬಗೆಯನ್ನು ಕಂಡಿದ್ದುದರಿಂದ ಆ ಅನುಭವವು ಅವರ ಕಾದಂಬರಿಯ ವಸ್ತು ಮತ್ತು ಪಾತ್ರ ಪ್ರಪಂಚದ ಭಾಗವಾಗಿದೆ. ಹೊರಗಿನಿಂದ ಬಂದ ವ್ಯಕ್ತಿಯ ದೃಷ್ಟಿಕೋನದ ಮೂಲಕ ಕೇರಳದ ರಾಜಕೀಯ ನಡೆಯನ್ನು ಅವಲೋಕಿಸುವ ಕಾದಂಬರಿಯು ಸಮಕಾಲೀನ ಸಮಾಜದಲ್ಲಿ ಕಂಡುಬರುವ ಧರ್ಮ ಮತ್ತು ಸಂಸ್ಕೃತಿಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಬದುಕಿನ ಮುಖಗಳನ್ನು ವಿಶ್ಲೇಷಿಸುತ್ತದೆ.
ಕರ್ನಾಟಕದವನಾದ ವಿಶಾಲನು ಕೇರಳದ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿ ನೇಮಕಗೊಳ್ಳುತ್ತಾನೆ. ಕೇರಳೀಯರ ರಾಜಕೀಯ ಪ್ರೀತಿ ಮತ್ತು ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪತ್ರಿಕೆಗಳ ಮೂಲಕ ಮಾತ್ರವೇ ತಿಳಿದಿದ್ದ ಅವನನ್ನು ಭಯಭೀತಗೊಳಿಸುವ ಸಂಗತಿಗಳು ಕಾದಂಬರಿಯುದ್ದಕ್ಕೂ ಎದುರಾಗುತ್ತವೆ. ಧ್ವನಿವರ್ಧಕದಲ್ಲಿ ಕೇಳಿ ಬರುವ ಸುಪ್ರಭಾತವು ವಿಚಿತ್ರ ಸ್ವರಗಳಾಗಿ ನಿದ್ದೆಗೆಡಿಸುವ ಸನ್ನಿವೇಶವು ಮುಂದೆ ಬರಲಿರುವ ವ್ಯಕ್ತಿ ಸ್ವಾತಂತ್ರ್ಯ ಹರಣಕ್ಕೆ ಪೂರಕವಾಗಿ ಬಂದಿದೆ. ಉಪನ್ಯಾಸಕನಾಗಿ ಕಾಲೇಜಿಗೆ ಬಂದ ದಿನವೇ ಎದುರಾಗುವ ರಾಜಕೀಯ ಕಾರ್ಯಕರ್ತರ ಮೆರವಣಿಗೆ, ಘೋಷಣೆ, ಜನಸಂದಣಿ, ಸಾಂಸ್ಕೃತಿಕ ಕಾರ್ಯಕ್ರಮಗಳಂತೆ ಕೇಳಿ ಬರುವ ಭಾಷಣಗಳು, ವಾಸಿಸಲು ಮನೆಯು ಸಿಗದೆ ರಾಜಕೀಯ ಮುಖಂಡರ ಮನೆಯಲ್ಲೇ ಉಳಿದುಕೊಳ್ಳಬೇಕಾಗಿ ಬರುವ ವಿದ್ಯಮಾನಗಳು ಆತನನ್ನು ಗೊಂದಲ ಮತ್ತು ಸಮಸ್ಯೆಗಳ ನಡುವೆ ಸಿಕ್ಕಿ ಹಾಕುವಂತೆ ಮಾಡುತ್ತವೆ.
ಕಾಮ್ರೇಡ್ ಜಯಕಾಂತನ ಒಡೆತನದಲ್ಲಿರುವ ಬಂಗಲೆಯನ್ನು ತನ್ನ ಸಹೋದ್ಯೋಗಿಯಾದ ವಿಶಾಲನ ವಾಸಕ್ಕೆ ಸಿಗುವಂತೆ ಮಾಡಿದ ಸುಕುಮಾರನಿಗೆ ನ್ಯಾಯ ನೀತಿಗಳ ಹಂಗಿಲ್ಲ. ಸ್ವೇಚ್ಛೆಯಿಂದ ವರ್ತಿಸುವ ಸ್ವಭಾವದವನಾದ ಆತನು ನಾಸ್ತಿಕನಾದರೂ ರಾಜಕೀಯದಿಂದ ದೂರ. ಆದರೆ ಜಯಕಾಂತನು ಎಲ್ಲರೊಂದಿಗೂ ಅತ್ಯಂತ ಆಪ್ತವಾಗಿ ವ್ಯವಹರಿಸುವ, ಮಾತು ಮತ್ತು ಭಾಷಣಗಳ ಮೂಲಕ ಎಂಥವರಿಗೂ ಮೋಡಿ ಮಾಡುವ ಸಾಮರ್ಥ್ಯವನ್ನು ಹೊಂದಿದ ಅಪ್ಪಟ ರಾಜಕಾರಣಿ. ಅವರ ಮೂಲಕ ವಿಶಾಲನಿಗೆ ತಾನು ಸೇವೆಯನ್ನು ಸಲ್ಲಿಸುತ್ತಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷನಾದ ನಾಯರ್ ಬಗ್ಗೆ ತಿಳಿಯುತ್ತದೆ. ಜಮೀನ್ದಾರನಾಗಿರುವ ಆತನು ತನ್ನ ಅಳಿಯ ಪಂಕಜಾಕ್ಷನ ಮೂಲಕ ಕೊಲೆ, ಸುಲಿಗೆಗಳಂಥ ಕೆಟ್ಟ ಕೆಲಸಗಳನ್ನು ಮಾಡಿಸುತ್ತಿದ್ದ ಬಗೆ, ಜಯಕಾಂತನು ಸಮಾಜದ ಪ್ರಭಾವಿ ವ್ಯಕ್ತಿಯಾಗಿ ಬದಲಾದ ಮೇಲೆ ಅವರ ಸರ್ವಾಧಿಕಾರಕ್ಕೆ ತಡೆಯೊಡ್ಡಿದ ರೀತಿ ಮತ್ತು ಇನ್ನಿತರ ಮರ್ಮಗಳು ಗೊತ್ತಾಗುತ್ತವೆ. ಊರು ಕ್ರಮೇಣ ಕ್ರೂರವಾಗುತ್ತಾ ವಿಶಾಲನ ಮನದಲ್ಲಿ ಭಯವನ್ನು ಹುಟ್ಟಿಸುವ ರೀತಿಯನ್ನು ಮನಗಾಣಿಸಿದ ಬಗೆಯು ಮನೋಜ್ಞವಾಗಿದೆ.
ವಿಶಾಲ, ಜಯಕಾಂತ ಮತ್ತು ಸುಕುಮಾರನ ನಡುವಿನ ಸ್ನೇಹ ವಲಯವು ವಿಸ್ತರಿಸುತ್ತದೆ. ಕಮ್ಯೂನಿಸ್ಟರಾದ ಜಯಕಾಂತ ಮತ್ತು ಸುಕುಮಾರ ವಿಲಾಸಿ ಬದುಕನ್ನು ನೆಚ್ಚಿಕೊಂಡಿದ್ದು ಹೆಣ್ಣಿನ ಖಯಾಲಿಗಳನ್ನು ಹೊಂದಿದವರಾಗಿದ್ದರೂ ವಿಶಾಲನೊಂದಿಗೆ ಗೆಳೆತನವು ಏರ್ಪಡುವುದಕ್ಕೆ ಅಡ್ಡಿಯಾಗುವುದಿಲ್ಲ. ಅಪ್ಪಟ ಸಸ್ಯಾಹಾರಿಯಾಗಿದ್ದ ವಿಶಾಲನು ಅವರಿಗಾಗಿ ಮದ್ಯ ಮಾಂಸಗಳನ್ನು ಸೇವಿಸುತ್ತಾನೆ. ಸುಕುಮಾರ ಮತ್ತು ಜಯಕಾಂತರು ಹೆಂಡವನ್ನು ಕುಡಿಯುತ್ತಿರುವಾಗ ಅದು ಆರೋಗ್ಯಕ್ಕೆ ಹಾನಿಕಾರಕವೆಂದು ತಿಳಿದಿದ್ದರೂ ವಿಶಾಲನು ಅವರ ಜೊತೆಯಲ್ಲಿ ಕುಳಿತು ಸ್ವಲ್ಪವೇ ಕುಡಿಯುವ, ನಂತರ ಕುಡಿಯುತ್ತಲೇ ಹೋಗುವ, ಬಳಿಕ ವಾಂತಿಯನ್ನು ಮಾಡುವ ಕ್ರಿಯೆಗಳು ಅವನ ವ್ಯಕ್ತಿತ್ವದ ದೌರ್ಬಲ್ಯವನ್ನು ಸೂಚಿಸುತ್ತವೆ. ಸಮಸ್ಯೆಗಳಿಂದ ದೂರವಿರಬಹುದಾದರೂ ಸಮಸ್ಯೆಗಳೊಂದಿಗೆ ಬದುಕುವ, ಅವುಗಳನ್ನು ಎದುರಿಸಲು ಸಾಧ್ಯವಿಲ್ಲದಿದ್ದರೂ ಅವುಗಳ ಕುರಿತು ತಿಳಿದುಕೊಳ್ಳುವ ಹಂಬಲದಿಂದ ಸಮಸ್ಯೆಗಳ ಮಡುವಿನೊಳಗೆ ಮುಳುಗೇಳುವ ಗುಣವು ಅವನ ಬಲಹೀನತೆಯನ್ನು ವ್ಯಕ್ತಪಡಿಸುತ್ತದೆ.
ಮಾನವೀಯ ಸಂಬಂಧಗಳು ರಾಜಕೀಯ ತಳಹದಿಯ ಮೇಲೆ ರೂಪುಗೊಳ್ಳುತ್ತಾ ಹೋಗುವಾಗ ಆಘಾತಕ್ಕೊಳಗಾಗುವ ಆತನ ಭಾವ ಜಗತ್ತು, ಔದ್ಯೋಗಿಕ ಬದುಕಿನಲ್ಲಿ ಎದುರಾಗುವ ತೊಡಕುಗಳು, ತನ್ನ ನಂಬಿಕೆ, ದಕ್ಷತೆಗಳಿಗೆ ಮನ್ನಣೆಯು ಇಲ್ಲವಾಗುತ್ತಿರುವ ಅರಿವಿನಿಂದ ಹುಟ್ಟುವ ನೋವು, ಏಕಾಂಗಿತನ, ಅರ್ಥಪೂರ್ಣ ಸಂಬಂಧಗಳು ಏರ್ಪಡದಿರುವ ಪರಿಸ್ಥಿತಿ, ಹೊಸ ಕಾಲ, ಜಾಗ ಮತ್ತು ಮನೋಧರ್ಮಗಳೊಂದಿಗೆ ಹೊಂದಿಕೊಳ್ಳಬೇಕಾದ ಅವಸ್ಥೆ, ಆಕಸ್ಮಿಕ ತಿರುವಿಗೆ ಒಳಗಾದ ಬದುಕಿನ ವಾಸ್ತವವನ್ನು ಒಪ್ಪಿಕೊಳ್ಳಬೇಕಾಗುವ ಅನಿವಾರ್ಯತೆ, ಈ ಬದಲಾವಣೆಯಲ್ಲಿ ತನ್ನನ್ನೇ ತಾನು ಕಳೆದುಕೊಳ್ಳುವ ಭಯ ಮತ್ತು ಸಮಾಜದ ಆಗುಹೋಗುಗಳ ಬಗ್ಗೆ ಭೀತಿಯನ್ನು ಮೀರಲು ಆತನ ಮನಸ್ಸು ಬದುಕಿನಲ್ಲಿರುವ ಪ್ರೀತಿಯ ಸಂಬಂಧಗಳನ್ನು ಅರಸುತ್ತವೆ. ಜಯಕಾಂತನ ಪ್ರೇಯಸಿ ‘ಅಪ್ಸರೆ’ಯ ಭೇಟಿ, ಅವಳ ನೂಪುರದ ದನಿಯು ಅವನೊಳಗೆ ಪ್ರೇಮದ ತರಂಗಗಳನ್ನು ಎಬ್ಬಿಸುತ್ತದೆ. ಆದರೆ ಅವನ ಪ್ರೇಮದ ಆಲೋಚನೆಗಳಿಗೆಲ್ಲ ಅವನ ಸಹೋದ್ಯೋಗಿಯಾದ ಪ್ರಮೀಳೆಯೇ ಕೇಂದ್ರವಾಗುತ್ತಾಳೆ. ಬೌದ್ಧಿಕ ಮತ್ತು ಭೌತಿಕ ಪ್ರಮೇಯಗಳಷ್ಟೇ ಮನುಷ್ಯನ ಬದುಕನ್ನು ವಿಸ್ತರಿಸುವುದಿಲ್ಲ. ಭಾವುಕ ಪ್ರಮೇಯಗಳೂ ಅಷ್ಟೇ ಪ್ರಮುಖವಾಗಿವೆ ಎಂಬುದಕ್ಕೆ ಇವರ ವರ್ತನೆಗಳು ಸಾಕ್ಷಿಯಾಗಿವೆ. ವಿಶಾಲನ ಯೋಚನಾ ಲಹರಿ ಮತ್ತು ರಾಜಕೀಯ ಕ್ಷೋಭೆಯೇ ಇಲ್ಲಿನ ಪ್ರಧಾನ ವಸ್ತುವಾದರೂ ಈ ಕೃತಿಯ ಹಿನ್ನೆಲೆಯಲ್ಲಿ ಅಂತಃಕರಣದ ತುಡಿತವು ಮಿಡಿಯುತ್ತಿರುತ್ತದೆ. ವಿಶಾಲನ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ, ಆತನನ್ನು ಮುಕ್ತ ಮನಸ್ಸಿನಿಂದ ಪ್ರೀತಿಸುವ ಪ್ರಮೀಳೆಯು ಈ ಅಂತಃಕರಣದ ಪ್ರತಿನಿಧಿಯಾಗಿದ್ದಾಳೆ. ಭ್ರಷ್ಟತೆ ಮತ್ತು ರಾಜಕೀಯ ಹಿಂಸೆಗಳಿಂದ ಮುಕ್ತವಾದ ಸಮಾಜವನ್ನು ಲೇಖಕರು ವಿಶಾಲ ಮತ್ತು ಪ್ರಮೀಳೆಯರ ಮೂಲಕ ಎದುರು ನೋಡುತ್ತಾರೆ. ಇಲ್ಲಿ ನಿರ್ದಿಷ್ಟವಾದ ‘ಕತೆ’ಯು ಇಲ್ಲದಿದ್ದರೂ ‘ಪರಿಸ್ಥಿತಿ’ಗೆ ಸಂಬಂಧಿಸಿದಂತೆ ವ್ಯಕ್ತಿಯ ಅನಿಸಿಕೆಗಳನ್ನು, ಕ್ರಿಯೆ ಪ್ರತಿಕ್ರಿಯೆಗಳನ್ನು ನೀಡುತ್ತಾ ಹೋಗುವ ವಿಚಾರವು ಮುಖ್ಯವಾಗುತ್ತದೆ. ಆದ್ದರಿಂದ ಕಾದಂಬರಿಯ ವಸ್ತುವೇ ನಾಯಕನಾಗಿ ಬಿಡುವಷ್ಟು ಪ್ರಭಾವಶಾಲಿಯಾಗಿದೆ.
ಜಯಕಾಂತನ ಗೆಳೆಯನೂ ನಕ್ಸಲ್‌ವಾದಿಯೂ ಆದ ಶಶಿರಾಜನು ವಿಶಾಲನ ಮನೆಯೊಳಗೆ ಒಂದು ದಿನದ ಆಸರೆಯನ್ನು ಪಡೆದ ಬಳಿಕ ವಿಶಾಲನ ಕಷ್ಟಕಾಲವು ಅರಂಭಗೊಳ್ಳುತ್ತದೆ. ಪಂಕಜಾಕ್ಷನು ತನ್ನ ತಂಡದ ನೆರವಿನಿಂದ ಅವನನ್ನು ಅಪಹರಿಸುತ್ತಾನೆ. ಜಯಕಾಂತ, ಸುಕುಮಾರ ಮತ್ತು ಶಶಿರಾಜನ ಕುರಿತು ಸೂಕ್ತ ಮಾಹಿತಿಗಳು ದೊರಕದಿದ್ದುದರಿಂದ ಅವನ ಮನೆಗೆ ಪೋಲೀಸರಿಂದ ದಾಳಿಯನ್ನು ಮಾಡಿಸುತ್ತಾನೆ. ತಪಾಸಣೆಯ ಹೆಸರಿನಲ್ಲಿ ಅವರು ಬಂಗಲೆಯೊಳಗಿನ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡುತ್ತಾರೆ. ಯಾಕೆ ಹೀಗಾಯಿತು ಎಂದು ವಿಶಾಲನಿಗೆ ಗೊತ್ತಾಗುವುದಿಲ್ಲ. ತಾನು ಮಾಡಿರುವ ಅಪರಾಧವೇನು ಎಂದು ತಿಳಿಯಲು ಯತ್ನಿಸಿದರೂ ಸಮರ್ಪಕವಾದ ಉತ್ತರಗಳು ದೊರೆಯದೆ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಾನೆ. ತಾನು ಮಾಡದ ತಪ್ಪುಗಳಿಗಾಗಿ ತನ್ನನ್ನು ಏಕೆ ಶಿಕ್ಷಿಸುತ್ತಿದ್ದಾರೆ ಎಂದರಿಯದೆ ತಲ್ಲಣಿಸುತ್ತಾನೆ. ಅಮಾಯಕನಾದ ವಿಶಾಲನು ಯಾವುದೇ ರಾಜಕೀಯ ಪಕ್ಷ ಮತ್ತು ಗಲಭೆಗಳಿಗೆ ಸಂಬಂಧಿಸಿದವನಲ್ಲದಿದ್ದರೂ ಕಾಮ್ರೇಡುಗಳ ಗೆಳೆಯನಾಗಿರುವುದರಿಂದ ಅವರ ನಡುವೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ಬದುಕು ಹೇಗೆ ಅತಂತ್ರವಾಗುತ್ತದೆ ಎಂಬುದನ್ನು ಕೃತಿಯ ವಿವರಗಳಲ್ಲಿ, ಒಟ್ಟು ಪರಿಣಾಮದಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ. ಪಾಶ್ಚಾತ್ಯ ಬರಹಗಾರನಾದ ಕಾಫ್ಕಾನ ‘ದ ಟ್ರಯಲ್’ ಕಾದಂಬರಿಯ ‘ಕೆ’ ಯ ಮನಸ್ಥಿತಿಯೊಂದಿಗೆ ಈತನ ಪರಿಸ್ಥಿತಿಯನ್ನು ಹೋಲಿಸಬಹುದು.
ಜಯಕಾಂತ ಮತ್ತು ಸುಕುಮಾರರು ದಸ್ತಗಿರಿಯಾದರೂ ಜಾಮೀನನ್ನು ಪಡೆದು ಬಿಡುಗಡೆಗೊಳ್ಳುತ್ತಾರೆ. ಜನರು ಅವರ ಪರವಾಗಿ ಘೋಷಣೆಯನ್ನು ಕೂಗುತ್ತಾ ಮೆರವಣಿಗೆಯನ್ನು ಮಾಡುವಾಗ ವಿಶಾಲನಿಗೆ ಅವರ ಸಂಘಟನ ಶಕ್ತಿಯ ಬಗ್ಗೆ ಹೆಮ್ಮೆಯೆನಿಸಿದರೂ ವೈಯಕ್ತಿಕ ದ್ವೇಷಕ್ಕೆ ರಾಜಕೀಯದ ಬಣ್ಣವನ್ನು ಬಳಿದು, ಗಲಭೆಯನ್ನು ಎಬ್ಬಿಸಿ, ರಾಜ್ಯದ ಜನತೆಯನ್ನೇ ಕಷ್ಟಕ್ಕೆ ಗುರಿ ಮಾಡುವ ರೀತಿಯು ಅವನ ಮನದಲ್ಲಿ ರೇಜಿಗೆಯನ್ನು ಹುಟ್ಟಿಸುತ್ತದೆ. ಸುಕುಮಾರ ಮತ್ತು ವಿಶಾಲನ ಮೇಲೆ ಪೋಲೀಸರ ಆಪಾದನೆಗಳು ಇದ್ದುದರಿಂದ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷನಾದ ನಾಯರ್ ಅವರಿಬ್ಬರಿಗೂ ಎಚ್ಚರಿಕೆಯನ್ನು ಕೊಡುತ್ತಾರೆ. ಸುಕುಮಾರನು ವ್ಯಗ್ರನಾಗಿ ಅವರನ್ನು ಕಟುವಾದ ಮಾತುಗಳಿಂದ ಪ್ರತಿಭಟಿಸಿ ಸಭಾತ್ಯಾಗವನ್ನು ಮಾಡುತ್ತಾನೆ. ಪಕ್ಷದ ಕಾರ್ಯಾಲಯದಲ್ಲಿ ವಿಷಯವನ್ನು ತಿಳಿಸಿದಾಗ ವ್ಯಗ್ರಗೊಂಡ ಕಾರ್ಯಕರ್ತರು ಪ್ರಿನ್ಸಿಪಾಲರಿಗೆ ದಿಗ್ಬಂಧನವನ್ನು ಮಾಡಿ, ಅಧ್ಯಕ್ಷನ ಮನೆಗೆ ಮುತ್ತಿಗೆಯನ್ನು ಹಾಕಿ ಮುಷ್ಕರಕ್ಕೆ ಇಳಿಯಲು ತಯಾರಾಗುತ್ತಾರೆ. ಆಗ ಜಯಕಾಂತನು ಅವರನ್ನು ಸಮಾಧಾನ ಪಡಿಸಿ ‘ಶಶಿರಾಜನ ಬಂಧನದಲ್ಲಿ ನಾಯರನ ಕೈವಾಡವಿದೆ. ಅವನ ಕಿರುಕುಳವೇ ಇಲ್ಲಿ ಮುಖ್ಯ. ಅದಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯ ಮತ್ತು ಜನರ ಬದುಕನ್ನು ಹಾಳುಗೆಡಹುವುದು ಬೇಡ’ ಎಂದು ಅವರನ್ನು ಸುಮ್ಮನಾಗಿಸುತ್ತಾನೆ. ಅದೇ ಹೊತ್ತಿನಲ್ಲಿ ನಾಯರನ ಕಾರನ್ನು ಯಾರೋ ಸುತ್ತುಗಟ್ಟಿ ಬೆಂಕಿ ಹಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡ ಆತನನ್ನು ಕಲ್ಲಿಕೋಟೆಯ ಆಸ್ಪತ್ರೆಗೆ ಸಾಗಿಸಿದ ವಿವರವು ತಿಳಿಯುತ್ತದೆ. ಮರುದಿನ ಪೇಟೆಯಲ್ಲಿ ಬಾಂಬು ಸ್ಪೋಟಗಳಾಗಿ ನಾಯರನ ಕಾರ್ಖಾನೆಗಳು, ಬಸ್ ನಿಲ್ದಾಣದ ಅಂಗಡಿಗಳು ನುಚ್ಚುನೂರಾಗುತ್ತವೆ. ನಾಯರ್ ಮತ್ತು ಜಯಕಾಂತ ಸಾಯುತ್ತಾರೆ. ಜನರ ಆಕ್ರೋಶವು ಮುಗಿಲು ಮುಟ್ಟುತ್ತದೆ. ಊರು ಹೊತ್ತಿ ಉರಿಯುತ್ತದೆ. ನಗರದಲ್ಲಿ ನಿಷೇಧಾಜ್ಞೆಯನ್ನು ಹೇರಲಾಗುತ್ತದೆ. ಬಾಂಬು ಸ್ಪೋಟದ ಹಿಂದೆ ಯಾರ ಕೈವಾಡವಿದೆ ಎಂಬ ಪ್ರಶ್ನೆಗೆ ಉತ್ತರವು ಸಿಗುವುದಿಲ್ಲ.
ಕಾದಂಬರಿಯ ವಸ್ತು, ತಂತ್ರ ಶೈಲಿ ಮತ್ತು ಸಂವೇದನೆಗಳನ್ನು ಗಮನಿಸಿದರೆ ಈ ಹಾದಿಯು ಯು.ಆರ್. ಅನಂತಮೂರ್ತಿ, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಪಿ. ಲಂಕೇಶ, ಕೆ.ವಿ. ತಿರುಮಲೇಶ ಮುಂತಾದವರು ಸೃಷ್ಟಿಸಿಕೊಂಡ ಮಾರ್ಗವೇ ಆಗಿದೆ. ನವ್ಯತೆ, ನಗರ ಸಂವೇದನೆ, ಅನುಭವದ ಆದ್ಯತೆ ಮುಂತಾದ ಗುಣಗಳನ್ನು ಇಲ್ಲಿಯೂ ಗುರುತಿಸಬಹುದು. ಆದರೆ ಕನ್ನಡಿಗನಾಗಿದ್ದುಕೊಂಡು ಕೇರಳದ ರಾಜಕೀಯವು ವ್ಯಕ್ತಿಯ ಬದುಕಿನಲ್ಲಿ ಹಾಸುಹೊಕ್ಕ ರೀತಿಯನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸಿದ ಬಗೆಯಿಂದಾಗಿ ಲೇಖಕರು ನವ್ಯ ಸಾಹಿತಿಗಳಿಗಿಂತ ಭಿನ್ನರಾಗುತ್ತಾರೆ. ಸಿದ್ಧಾಂತಗಳಿಗೆ ಅಂಟಿಕೊಂಡ ಬಹಳಷ್ಟು ಬರಹಗಾರರು ಅನುಭವದ ಚಲನಶೀಲತೆಯನ್ನು ಗಮನಿಸದೆ ಯಾಂತ್ರಿವಾಗಿ ಬರೆಯುತ್ತಿರುವ ಸಂದರ್ಭದಲ್ಲಿ ನಾರಾಯಣ ಕಂಗಿಲರು ಈ ಅಪಾಯದಿಂದ ಪಾರಾಗಿದ್ದಾರೆ. ವೈಯಕ್ತಿಕ ಸಂಬಂಧಗಳ ಮೂಲಕ ಬದುಕನ್ನು ಶೋಧಿಸುತ್ತಾ ಅದಕ್ಕೆ ಅರ್ಥವನ್ನು ತುಂಬುವ ಅವರ ಉದ್ದೇಶವು ಈಡೇರಿದೆ. ಪ್ರಭುತ್ವ ಮತ್ತು ರಾಜಕೀಯ ಪಕ್ಷಗಳು ಬಳಸುವ ಹಿಂಸೆಯ ಅಮೂರ್ತ ಸ್ವರೂಪವನ್ನು ತೀವ್ರವಾಗಿ ಬಿಂಬಿಸುವ ಈ ಕೃತಿಯು ರಾಜಕೀಯ ವಿಶ್ಲೇಷಣೆಯಲ್ಲದಿದ್ದರೂ ಮನುಷ್ಯನ ಘನತೆಯನ್ನು ಹೊಸಕಿ ಹಾಕುವ ಹಿಂಸೆಯ ಮುಖಗಳನ್ನು ಸೂಕ್ಷ್ಮವಾಗಿ ಅಭಿವ್ಯಕ್ತಿಸುವ ಮೂಲಕ ರಾಜಕೀಯದೊಳಗೆ ಹುದುಗಿಕೊಂಡಿರುವ ಕ್ರೌರ್ಯದ ದರ್ಶನವನ್ನು ಮಾಡುತ್ತದೆ. ವಾಸ್ತವವಾದವನ್ನು ಮಾತ್ರ ನೆಚ್ಚಿಕೊಳ್ಳದ ನಿರೂಪಣೆಯು ವಾಸ್ತವೇತರ ವಿಧಾನಗಳನ್ನೂ ಬಳಸಿಕೊಳ್ಳುತ್ತದೆ. ಕನಸಿನ ಮೂಲಕ ಮೂಡಿ ಬರುವ ಅನುಭವಗಳು ಬದುಕಿನ ಆಳ ಮತ್ತು ಅಗಲಗಳನ್ನು ಶೋಧಿಸುತ್ತದೆ. ರಾಜಕೀಯವು ಮಾನವನ ಬದುಕನ್ನು ಆವರಿಸುವ ಬದುಕಿನ ಅನಿಶ್ಚಿತತೆ, ಗುರಿಯಿಲ್ಲದ ಕಾಯುವಿಕೆ, ಬೇರ್ಪಟ್ಟ ಸಂಬಂಧಗಳು, ನಿರಪರಾಧಿಯ ಯಾತನೆ, ಅರ್ಥ ಸ್ಪಷ್ಟವಾಗದ ಕ್ರಿಯೆ ಇವುಗಳಿಗೆ ಸಂಕೀರ್ಣ ರೂಪಕವೇ ನಿರ್ಮಾಣಗೊಂಡಿದೆ. ಚರಿತ್ರೆಯು ನಿರ್ದಯವಾಗಿ ಚಲಿಸುತ್ತದೆ ಎಂಬ ಸತ್ಯವನ್ನು ಕಾದಂಬರಿಯು ಮರೆಮಾಚುವುದಿಲ್ಲ. ಈ ಚಲನೆಯು ಮನುಷ್ಯರ ಮೇಲೆ ಬೀರುವ ಪರಿಣಾಮಗಳನ್ನು ಅಲಕ್ಷಿಸುವುದಿಲ್ಲ. ಬದುಕಿನ ಸುಖ, ಸಂಭ್ರಮ ಮತ್ತು ವಿಕೃತಿಗಳನ್ನು ಮುಖಾಮುಖಿಯಾಗಿಸಿ, ಸಾಮಾಜಿಕ ಪ್ರಕ್ರಿಯೆಗಳ ಮತ್ತು ಮನುಷ್ಯರ ಮನೋವ್ಯಾಪಾರಗಳ ಜಟಿಲವೂ ಸಂಕೀರ್ಣವೂ ಆದ ಚಿತ್ರವನ್ನು ನೇಯುತ್ತದೆ. ಹಲವು ಬಗೆಯ ವೈರುಧ್ಯಗಳಿಂದ ತುಂಬಿದ ಸಮಾಜದಲ್ಲಿ ಬದುಕುವ ಮನುಷ್ಯನ ಸ್ಥಿತಿ ಮತ್ತು ಸಾಧ್ಯತೆಗಳ ಬಗ್ಗೆ ಚಿಂತಿಸುವುದರಿಂದ ಇದು ಎಲ್ಲಾ ಕಾಲಕ್ಕೂ ಸಲ್ಲುವ ಕೃತಿಯೆನಿಸಿಕೊಳ್ಳುತ್ತದೆ.
ಪುಸ್ತಕದ ಹೆಸರು : ಶಬ್ದ ಮತ್ತು ನೂಪುರ (ಕಾದಂಬರಿ)
ಲೇಖಕರು : ನಾರಾಯಣ ಕಂಗಿಲ
ಪುಟಗಳು : 77
ಬೆಲೆ ರೂ. : 40
ಪ್ರಕಾಶಕರು : ಶ್ರೀರಾಮ ಪ್ರಕಾಶನ ಮಂಡ್ಯ
ವರ್ಷ : 2010
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಲೇಖಕ ನಾರಾಯಣ ಕಂಗಿಲ