ತೆಕ್ಕಟ್ಟೆ: ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದದ ‘ಶ್ವೇತಯಾನ-31’ರ ಕಾರ್ಯಕ್ರಮವಾಗಿ ಯಕ್ಷಗಾನ ಭಾಗವತಿಗೆ, ಚಂಡೆ, ಮದ್ದಳೆ, ಹೆಜ್ಜೆ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 01-06-2024ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ತರಗತಿಗಳನ್ನು ದೀಪ ಬೆಳಗಿ ಉದ್ಘಾಟಿಸಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಕಲೆಯನ್ನು ಗೌರವಿಸಿ, ಪ್ರೀತಿಸಿದರೆ ಕಲೆ ನಮ್ಮನ್ನು ಅಪ್ಪಿಕೊಳ್ಳುತ್ತದೆ. ಸಪ್ತ ಬಗೆಯ ಸುಪ್ತ ಪ್ರಕಾರಗಳಿರುವ ಕಲೆ ಯಕ್ಷಗಾನ. ಇಂತಹ ಸಹಸ್ರ ಗುಣವಿರುವ ಯಕ್ಷಗಾನ ಕಲೆಯನ್ನು ಮೀರಿಸುವ ಕಲೆ ಪ್ರಪಂಚದಲ್ಲಿ ಇನ್ನೊಂದಿಲ್ಲ. ಕಲಿಯುವಿಕೆಯಲ್ಲಿ ಆಸಕ್ತಿ ಹೊಂದಿ, ಶ್ರದ್ಧೆ ಭಕ್ತಿಗಳನ್ನು ಹೊಂದಿ ಕಲಿಯಿರಿ. ಕಲೆಯ ಮೂಲಕ ಪ್ರಪಂಚದಾದ್ಯಂತ ನಿಮಗೆ ಗೌರವ ಸಿಗುತ್ತದೆ. ವಿದ್ಯೆ ಬದುಕಿಗೆ ಬೇಕು, ಕಲೆ ಜೀವನ ಅರಳುವುದಕ್ಕೆ ಬೇಕು. ಕಲೆಗೆ ಮರಣವಿಲ್ಲ. ಇಂದು ಸಮರ್ಥ ಗುರುಗಳಿಂದ ಯಕ್ಷಗಾನ ಕಲಿತು, ನಾಳೆ ಭವಿಷ್ಯವಾಳಿ, ಮುಂದಿನ ಜನಾಂಗಕ್ಕೆ ದಾಟಿಸುವ ಕೆಲಸ ಆಗಬೇಕು.” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯಕ್ಷಗಾನ ಕಲಾವಿದ ಹಾಗೂ ಸಂಘಟಕರಾದ ಮಹಮದ್ ಗೌಸ್ ಮಾತನಾಡಿ “ಜಾತಿ ಬೇಧವನ್ನು ಮರೆತು, ಯಕ್ಷಗಾನ ಕಲೆ ಮೀರಿ ಮೇಲೇರಿದೆ. ಬದುಕನ್ನು ನಡೆಸುವುದಕ್ಕಾಗಿ ಆಯ್ದುಕೊಂಡ ಯಕ್ಷಗಾನ ನನ್ನನ್ನು ಜನಮಾನಸದಲ್ಲಿ ನಿಲ್ಲಿಸಿದೆ. ಬರೇ ವ್ಯಾವಹಾರಿಕವಲ್ಲದ, ಜನರ ಪ್ರೀತಿಯನ್ನು ಒದಗಿಸಿಕೊಡುವ ಯಕ್ಷಗಾನ ಕಲೆ ನಮ್ಮಲ್ಲಿನ ಚೈತನ್ಯವನ್ನು ಇಮ್ಮಡಿಗೊಳಿಸುತ್ತದೆ.” ಎಂದರು.
ಯಶಸ್ವಿ ಕಲಾವೃಂದದ ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಉರಾಳ, ಸಂಸ್ಥೆಯ ವಿದ್ಯಾರ್ಥಿ ಸುಮನಾ ನೇರಂಬಳ್ಳಿ, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು ಉಪಸ್ಥಿತರಿದ್ದರು.
ಡಾ. ಗಣೇಶ್ ಯು. ಸ್ವಾಗತಿಸಿ, ಕಿಶನ್ ಪೂಜಾರಿ ಪ್ರಾರ್ಥನೆಗೈದು, ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಗಾನ ತರಗತಿಯಲ್ಲಿ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವೀಗೊಳಿಸಿದರು.