ಸಾಂಪ್ರದಾಯಿಕ ಶೈಲಿಯ ಸಂಪೂರ್ಣ ಮಾರ್ಗ ಪದ್ಧತಿಯನ್ನು ಒಳಗೊಂಡ ಭರತನಾಟ್ಯ ರಂಗ ಪ್ರವೇಶಗಳನ್ನು ಕಂಡು ಆನಂದಿಸಲು ವಿರಳವಾಗಿರುವ ಈ ಸಮಯದಲ್ಲಿ, ದಿನಾಂಕ 12-05-2024ರಂದು ಮಂಗಳೂರು ಪುರಭವನದಲ್ಲಿ ಗಾನ ನೃತ್ಯ ಅಕಾಡೆಮಿ ವತಿಯಿಂದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆ ಕುಮಾರಿ ಮಹತಿ ಪಾವನಸ್ಕರ್ ಇವಳ ಭರತನಾಟ್ಯ ರಂಗ ಪ್ರವೇಶ ಅರ್ಥಪೂರ್ಣವಾಗಿ ಜರುಗಿತು. ಕಲಾವಿದೆಯ ಲೀಲಾಜಾಲ ಚಲನೆಗಳು, ಸಾಹಿತ್ಯದ ಸಾರವನ್ನು ಭಾವಪೂರ್ಣವಾಗಿ ರಸಿಕನ ಹೃದಯಕ್ಕೆ ತಲುಪಿಸುತ್ತಿದ್ದ ಕಣ್ಣುಗಳು, ನೃತ್ತಭಾಗದಲ್ಲಿನ ಅಂಗಶುದ್ಧಿ, ನುರಿತ ಆಹಾರ್ಯ, ಪರಿಪೂರ್ಣ ನೃತ್ಯಸಂಯೋಜನೆ, ವಿದ್ವತ್ಪೂರ್ಣ ಹಿಮ್ಮೇಳ ಹಾಗೂ ನೃತ್ಯದ ಅನುಭಾವವನ್ನು ಇಮ್ಮಡಿಗೊಳಿಸುತ್ತಿದ್ದ ಸುಂದರ ಉಡುಪು ಹಾಗೂ ಆಭರಣಗಳಿಂದ ಕಲಾವಿದೆ ನೃತ್ಯದ ಮೂಲಕ ನೋಡುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಳು. ದ್ವಿತೀಯ ಪಿಯುಸಿಯ ವಿದ್ಯಾರ್ಥಿನಿಯಾಗಿದ್ದರೂ ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಸಂಪೂರ್ಣ ಸಮತೋಲನದಲ್ಲಿ ಯಶಸ್ವಿಯಾಗಿ ನಿಭಾಯಿಸಿದ ರೀತಿ ಉದಾಹರಣಾತ್ಮಕವಾಗಿತ್ತು.
ಮೊತ್ತ ಮೊದಲನೆಯದಾಗಿ ಪುಷ್ಪಾಂಜಲಿಯ ಮೂಲಕ ನಾಟ್ಯಾಧಿದೇವತೆ ನಟರಾಜನನ್ನು ವಂದಿಸಿ ಕಾರ್ಯಕ್ರಮಕ್ಕೆ ದೈವಿಕ ಪ್ರಾರಂಭವನ್ನು ನೀಡುತ್ತಾ, ವಿಘ್ನ ನಿವಾರಕನಾದ ಗಣೇಶನನ್ನು ಸುತ್ತಿಸುವ ಮೂಲಕ ವಿನಾಯಕನಲ್ಲಿ ನಿರ್ವಿಘ್ನವಾಗಿ ಕಾರ್ಯಕ್ರಮ ಸಾಗುವಂತೆ ಪ್ರಾರ್ಥಿಸಲಾಯಿತು. ಬಳಿಕ ಅಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯವಿರುವಂತಹ ಮಾರ್ಗ ಪದ್ಧತಿಯ 3ನೇ ನೃತ್ಯಬಂಧ “ಶಬ್ದಂ”ನೊಂದಿಗೆ ಮುಂದುವರಿದ ಕಾರ್ಯಕ್ರಮ, ನಂತರದಲ್ಲಿ ರಂಗಪ್ರವೇಶದ ಪೂರ್ವಾರ್ಧದ ಪ್ರಮುಖ ನೃತ್ಯ ಬಂಧ ವರ್ಣವನ್ನು ಕಲಾವಿದೆ ಪ್ರಸ್ತುತ ಪಡಿಸಿದರು. ಸಾಮಾನ್ಯವಾಗಿ ನಾಯಕನಿಗಾಗಿ ಪರಿತಪಿಸಿ ಅಥವಾ ನಾಯಕನನ್ನು ಕಾಣಲು ಹಾತೊರೆಯುವಂತಹ ಸಂದರ್ಭಗಳಿಗಿಂತ ಭಿನ್ನವಾಗಿ, ಕೃಷ್ಣನ ಅಷ್ಟಮಹಿಷಿಯರಲ್ಲೊಬ್ಬಳಾದ ಸತ್ಯಭಾಮೆಯ ಭಾವಾಂತರಂಗವೇ ವರ್ಣದ ಕಥಾವಸ್ತು. ಸತ್ಯಭಾಮೆಯ ಮನದಿಂಗಿತ ಆಕೆಯ ಮನದಲ್ಲಿನ ಪ್ರಶ್ನೆಗಳನ್ನು ಅತ್ಯಂತ ಸಮಂಜಸ ಮುಖಭಾವದಿಂದ ತೋರ್ಪಡಿಸುವಲ್ಲಿ ಕಲಾವಿದೆ ಯಶಸ್ವಿಯಾಗಿದ್ದಳು. ಅಲ್ಲದೆ ತನ್ನ ವಯಸ್ಸಿಗೂ ಮೀರಿ ಸತ್ಯಭಾಮೆಯ ಸರ್ವ ಗೊಂದಲಗಳನ್ನು ಅನುಭವಿಸಿ ಅನುರೂಪಿಸಿದ್ದಳು ಮಹತಿ. ಬಳಿಕ ಕಾರ್ಯಕ್ರಮದ ಉತ್ತರಾರ್ಧವವು ದೇವರನಾಮದೊಂದಿಗೆ ಪ್ರಾರಂಭಗೊಂಡು, ಬಳಿಕ ಪಂಡರಾಪುರದ ಪಾಂಡರಿನಾಥನನ್ನು ಸ್ತುತಿಸುವ ಅಭಂಗ್. ಇಲ್ಲಿ ಪಂಡರಿನಾಥನನ್ನು ವಿಡಂಬನಾತ್ಮಕವಾಗಿ ಸ್ತುತಿಸುವ ಸನ್ನಿವೇಶ, “ಪಂಡರಾಪುರದಲ್ಲಿ ಒಂದು ಭೂತವಿದೆ ಹಾಗೂ ಒಮ್ಮೆ ನೀವದನ್ನು ನಂಬಿದ್ದೆಯಾದರೆ ಮತ್ತೆ ಯಾವತ್ತೂ ಅದು ನಿಮ್ಮ ಕೈ ಬಿಡದು” ಎಂಬ ಸಾರಕ್ಕೆ ಅನುಗುಣವಾಗಿ ಸಂಯೋಜನೆಗೊಂಡಿದ್ದ ನೃತ್ಯ ನೋಡುಗರ ಕಣ್ಮನ ಸೂರೆಗೊಳಿಸಿತ್ತು. ಕೊನೆಗೆ ಮಾರ್ಗಪದ್ದತಿಯಂತೆ ತಿಲ್ಲಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲು, ಕಲಾವಿದೆಯ ಧನ್ಯತೆ ಆನಂದಾಶ್ರುವಾಗಿ ಹೊರಬಂದಾಗ ಪ್ರೇಕ್ಷಕರ ಕಣ್ಣಂಚು ಕೂಡ ತೇವಗೊಂಡದ್ದು ಕಾರ್ಯಕ್ರಮ ಯಾವ ಮಟ್ಟಿಗೆ ಪ್ರೇಕ್ಷಕನ ಹೃದಯ ತಟ್ಟಿದೆ ಎಂಬುದರ ಪ್ರತೀಕವಾಗಿತ್ತು.
ಈ ಉದಯೋನ್ಮುಖ ಕಲಾವಿದೆಯ ನೃತ್ಯ ಜೀವನದ ಬಹುಮುಖ್ಯ ದಿನದಂದು ಪ್ರಸಿದ್ಧ ಹಿಮ್ಮೇಳ ಕಲಾವಿದರ ಸಹಕಾರ ಮತ್ತು ಕೊಡುಗೆ ಅದ್ವಿತೀಯವಾದದ್ದು. ನಟುವಾಂಗದಲ್ಲಿ ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ಗಾಯನದಲ್ಲಿ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ಕಾರ್ತಿಕೇಯನ್ ರಾಮನಾಥನ್ ಚೆನ್ನೈ, ಕೊಳಲಿನಲ್ಲಿ ವಿದ್ವಾನ್ ರಘುನಂದನ್ ರಾಮಕೃಷ್ಣ ಬೆಂಗಳೂರು ಹಾಗೂ ವಿದ್ವಾನ್ ಅನಂತನಾರಾಯಣ ಚೆನ್ನೈ ಇವರೆಲ್ಲರ ಕಲಾಜ್ಞಾನ ಯುವ ಕಲಾವಿದೆಯ ಪ್ರಾಮಾಣಿಕ ಪ್ರಯತ್ನಕ್ಕೆ ಹೆಚ್ಚಿನ ಮೆರುಗು ನೀಡಿದೆ. ವೊಲ್ಟ್ಯಾಂಪ್ ಮೂಡುಬಿದಿರೆ ಬೆಳಕು ಮತ್ತು ಧ್ವನಿಯನ್ನು ಪೂರೈಸಿದ್ದು, ಬೆಳಕಿನ ಅಚ್ಚುಕಟ್ಟಾದ ನಿರ್ವಹಣೆಯಲ್ಲಿ ರಾಧಾಕೃಷ್ಣ ಭಟ್ ಉತ್ತಮ ರೀತಿಯಲ್ಲಿ ಸಹಕರಿಸಿದ್ದಾರೆ. ಆದ್ದರಿಂದ ಈ ಕಾರ್ಯಕ್ರಮದ ಕಲಾತ್ಮಕ ಕೊಂಡಿ ಸಭಾಂಗಣದ ಹಿಂದಿನ ಸಾಲಿನಲ್ಲಿ ಕುಳಿತ ಪ್ರೇಕ್ಷಕರ ಮನಸ್ಸನ್ನು ಕೂಡ ಬೆಸೆದುಕೊಂಡದ್ದಕ್ಕೆ, ಕಾರ್ಯಕ್ರಮದ ಕೊನೆಯಲ್ಲಿ ಪ್ರೇಕ್ಷಕರೆಲ್ಲರೂ ಎದ್ದು ನಿಂತು ನೀಡಿದ ಗೌರವ ಕಲೆಗೂ ಹಾಗೂ ಇವರೆಲ್ಲರ ಪರಿಶ್ರಮಕ್ಕೂ ಸಾಕ್ಷಿಯಾಗಿದೆ.
ಕರ್ನಾಟಕ ಕಲಾಶ್ರೀ ಗುರು ಉಳ್ಳಾಲ ಮೋಹನ್ ಕುಮಾರ್ ಇವರಿಂದ ದೀಪೋಜ್ವಲನಗೊಂಡು ಸಭಾ ಕಾರ್ಯಕ್ರಮ ಪ್ರಾರಂಭಗೊಂಡಿತ್ತು . ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಕಶೆಕೋಡಿ ಸೂರ್ಯ ನಾರಾಯಣ ಭಟ್ ಕಲಾಶ್ರಯ ದಾಸಕೋಡಿ ಬಂಟ್ವಾಳ ಇವರೀರ್ವರ ಕಲೆಯ ಶ್ರೇಷ್ಠತೆಯನ್ನು ಹೇಳುವುದರ ಜೊತೆಗೆ ಕಲಾವಿದೆಗೆ ಶುಭ ಹಾರೈಸಿದ್ದರು. ಮಹತಿಯ ಪೋಷಕರಾದ ಶ್ರೀ ಹರೀಶ್ ಪಾವನಸ್ಕರ್, ಶ್ರೀಮತಿ ಮಾಲಿನಿ ಹರೀಶ್, ಗಾನ ನೃತ್ಯ ಅಕಾಡೆಮಿಯ ನಿರ್ದೇಶಕರಾದ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಹಾಗೂ ಕಾರ್ಯದರ್ಶಿಗಳಾದ ಶ್ರೀ ರಾಧಾಕೃಷ್ಣ ಭಟ್ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯ ಚುಕ್ಕಾಣಿ ಹಿಡಿದಿದ್ದ ಶ್ರೀಮತಿ ಸುಮಂಗಲಾ ರತ್ನಾಕರ್ ಅತ್ಯಂತ ಸಮರ್ಪಕವಾಗಿ ಕಾರ್ಯಕ್ರಮವನ್ನು ಅಂದಗಾಣಿಸುವಲ್ಲಿ ಸಹಕರಿಸಿದರು.
ಅಭಿವೃದ್ಧಿಯ ಪಥದಲ್ಲಿ ಅತ್ಯಂತ ಅವಸರವಸರವಾಗಿ ಸಾಗುತ್ತಿರುವ ಯುವ ಜನಾಂಗ ಭಾರತೀಯ ಕಲೆಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿದೆ ಎಂದು ಮಹತಿ ನಿರೂಪಿಸಿದ್ದಾರೆ. ಜೊತೆಗೆ ಗುರುವೊಬ್ಬರ ಬೆಂಬಲವಿದ್ದರೆ ಯಾವುದೇ ಗುರಿ ತಲುಪಲು ಸಾಧ್ಯ ಎನ್ನುವುದಕ್ಕೆ ಉದಾಹರಣೆ ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ. ಅಭಿವೃದ್ಧಿಯ ಬೆಳವಣಿಗೆ ಸಂಸ್ಕೃತಿಯ ಅನುಷ್ಠಾನದ ಜೊತೆಗೆ ಸಾಗಿದಾಗ ಹೊಸ ನಾಳೆಗಳ ಬುನಾದಿ ಇನ್ನಷ್ಟು ಸದೃಢವಾಗಿ ರೂಪುಗೊಳ್ಳಲು ಸಾಧ್ಯ. ಇಂತಹ ಹಲವು ಕಾರ್ಯಕ್ರಮಗಳಿಗೆ ನಮ್ಮ ಪ್ರೋತ್ಸಾಹವನ್ನು ನೀಡುತ್ತಾ ಸುಂದರ ಸಮೃದ್ಧ ನಾಳೆಗಳ ಸೃಷ್ಟಿಯಲ್ಲಿ ಕೈಜೋಡಿಸೋಣ.
ಮಹಿಮಾ ಯು.ಎಸ್.
ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆ
ಕೆನರಾ ಇಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ಮತ್ತು ಡಿಸೈನ್ ಇಂಜಿನಿಯರಿಂಗ್ ವಿದ್ಯಾರ್ಥಿನಿ