ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯ ಇಲ್ಲಿನ ಕನ್ನಡ ವಿಭಾಗದ ವತಿಯಿಂದ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪೆರಿಯ ಕಾಲೇಜಿನಲ್ಲಿ ಕನ್ನಡದ ಪ್ರಸಿದ್ಧ ಲೇಖಕ ಪೂರ್ಣಚಂದ್ರ ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಎಂಬ ಕಥಾಸಂಕಲನದ ಕಥೆಗಳ ಕುರಿತ ವಿಮರ್ಶಾ ಸ್ಪರ್ಧೆಯು ದಿನಾಂಕ 30-05-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲಕ್ಷ್ಮೀ ನಾರಾಯಣ ಕಜಿಗದ್ದೆ ಮಾತನಾಡಿ ಪೂರ್ಣಚಂದ್ರ ತೇಜಸ್ವಿಯವರ ಬರವಣಿಗೆಯ ವಿಶೇಷತೆಯನ್ನು ವಿವರಿಸಿದರು. ಅಲ್ಲದೆ ಜೀವನದಲ್ಲಿ ಸಾಹಿತ್ಯದ ಓದು, ಆಸಕ್ತಿಯ ಮಹತ್ವದ ಕುರಿತು ತಿಳಿಸಿದರು. ಸಾಹಿತ್ಯದ ಓದು ನಮ್ಮನ್ನು ಇತರರಿಗಿಂತ ಭಿನ್ನವಾಗಿಸುತ್ತದೆ ಎಂದರು. ಕಾರ್ಯಕ್ರಮದ ಸಂಯೋಜಕ ಕೇರಳ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ. ಸೌಮ್ಯಾ ಎಚ್. ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್‌ಕುಮಾರ್ ಕೆ. ಆರ್. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆಯರಾದ ಡಾ.ಜಯಶ್ರೀ ಮತ್ತು ಸರಸ್ವತಿ ಕೆ. ಉಪಸ್ಥಿತರಿದ್ದರು. ಸುಳ್ಯ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಸರಿತಾ ಸ್ವಾಗತಿಸಿ, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಥಮ ಎಂ. ಎ. ವಿದ್ಯಾರ್ಥಿ ಸಚಿನ್ ನಿರೂಪಿಸಿ, ಮುತ್ತು ಶೆಟ್ಟಿ ವಂದಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.