18 ಫೆಬ್ರವರಿ 2023, ಮಂಗಳೂರು: ಯಕ್ಷಗಾನದ ಹಿರಿಯ ತಲೆಮಾರಿನ ಕೊಂಡಿಯಂತಿದ್ದ ಬಲಿಪ ನಾರಾಯಣ ಭಾಗವತರು ತನ್ನ ಅಸಾಧಾರಣವಾದ ಜ್ಞಾನ ಸಂಪನ್ನತೆಯಿಂದ, ಎಲ್ಲರೊಂದಿಗೆ ಬೆರೆತು ಸಜ್ಜನಿಕೆಯಿಂದ ಕೂಡಿದ ಮಾತುಗಳಿಂದ ಜನಪ್ರೀತಿ ಗಳಿಸಿದ್ದರು. ತನ್ನ ಏರುಸ್ವರದ ಭಾಗವತಿಕೆಯಿಂದ ಯಕ್ಷಕಲಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಅವರು ಯಕ್ಷರಂಗದಲ್ಲಿ ಮೂಡಿಸಿ ಹೋಗಿರುವ ಛಾಪು ಸದಾ ಕಾಲವೂ ಸ್ಮರಣೀಯವಾಗಿದೆ. ಪ್ರಸಂಗ ರಚನೆ, ಸಹಿತ ಅನೇಕ ಪ್ರಸಂಗಗಳ ಪದ್ಯಗಳನ್ನು ಕಂಠಸ್ಥಗೊಳಿಸಿದ್ದ ಅವರು ಓರ್ವ ಪ್ರೌಢ ಭಾಗವತರಾಗಿ ಕಿರಿಯ ಕಲಾವಿದರೆಲ್ಲರಿಗೂ ಮಾರ್ಗದರ್ಶಿಯಾಗಿದ್ದರೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿನಮನ ಸಲ್ಲಿಸಿದರು. ಇಂದು ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ಬಲಿಪ ನಾರಾಯಣ ಭಾಗವತರಿಗೆ ‘ಸಾರ್ವಜನಿಕ ಶ್ರದ್ಧಾಂಜಲಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ನುಡಿನಮನ ಸಲ್ಲಿಸುತ್ತಾ ಬಲಿಪರ ಮತ್ತು ತನ್ನ ಯಕ್ಷಗಾನ ಒಡನಾಟವನ್ನು ಸ್ಮರಿಸಿದರು. ಮಗುವಿನ ಮುಗ್ಧತೆ ಬಲಿಪರಲ್ಲಿತ್ತು. ಭಾಗವತಿಕೆಯ ಹಾಗೂ ಯಕ್ಷಗಾನ ಕಲೆಯ ಕುರಿತ ಅವರಲ್ಲಿದ್ದ ಅಗಾಧವಾದ ಜ್ಞಾನ ಮತ್ತು ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಗುಣ ಅವರದಾಗಿತ್ತು ಎಂದು ನುಡಿದರು.
ಡಾ. ಹರಿಕೃಷ್ಣ ಪುನರೂರು, ಪ್ರೋ| ಎಂ.ಬಿ. ಪುರಾಣಿಕ್, ಭುವನಾಭಿರಾಮ ಉಡುಪ, ದಿವಾಣ ಗೋವಿಂದ ಭಟ್, ಡಾ| ಶ್ರುತಕೀರ್ತಿ ತಮ್ಮ ಲಕ್ಷ್ಮಣ, ಚಂದ್ರಶೇಖರ ಮಯ್ಯ, ಕದ್ರಿ ನವನೀತ ಶೆಟ್ಟಿ, ಜನಾರ್ದನ ಹಂದೆ, ಭಾಸ್ಕರ ರೈ ಕುಕ್ಕುವಳ್ಳಿ, ದಯಾನಂದ ಕಟೀಲು, ಜಿ.ಕೆ. ಭಟ್ ಸೆರಾಜೆ, ದಯಾನಂದ ಕಟೀಲು, ಜಿ.ಕೆ. ಭಟ್ ಸೆರಾಜೆ, ಸುಧಾಕರ ರಾವ್ ಪೇಜಾವರ, ಪುರುಷೋತ್ತಮ ಭಟ್, ರಾಮಕೃಷ್ಣ ರಾವ್, ಪ್ರಭಾಕರ ರಾವ್ ಪೇಜಾವರ, ಪೂರ್ಣಿಮಾ ರಾವ್ ಪೇಜಾವರ, ಚಂದ್ರಶೇಖರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.