ಕನ್ನಡದ ಮಹತ್ವದ ಲೇಖಕರಾದ ಡಾ. ನಾ. ಮೊಗಸಾಲೆಯವರ ‘ನೀರು’ ಎಂಬ ಕಾದಂಬರಿಯು ಒಂದು ದೃಷ್ಟಿಯಲ್ಲಿ ನೀಳ್ಗತೆಯಂತೆ ಇದ್ದರೂ 250 ಪುಟಗಳಷ್ಟು ಬೆಳೆದು ಕಾದಂಬರಿಯ ವ್ಯಾಪ್ತಿಯನ್ನು ಪಡೆದಿದೆ. ಕಥೆ, ಕಾದಂಬರಿ ಎಂದು ವಿಂಗಡಿಸಿ ಲಕ್ಷಣವನ್ನು ವಿಧಿಸುವವರಿಗೆ ಇದೊಂದು ಗಟ್ಟಿ ಸವಾಲಾಗಿ ಪರಿಣಮಿಸಿದೆ.
ಮನುಷ್ಯ ಸಂಬಂಧದೊಳಗೆ ಸಹಜವಾದ ಅಸೂಯೆ, ಸ್ಪರ್ಧೆ, ಫಟಿಂಗತನ, ಕಾಮ ಕ್ರೋಧಾದಿಗಳ ತಳಮಟ್ಟದ ಹುಡುಕಾಟವನ್ನು ಕಾದಂಬರಿಕಾರರು ಹೊಸ ಬಗೆಯಲ್ಲಿ ನಡೆಸಿದ್ದಾರೆ. ತಮ್ಮ ಹೆಚ್ಚಿನ ಕೃತಿಗಳಂತೆ ಇಲ್ಲೂ ಮರಣ, ಕೊಲೆ, ದೊಂಬಿಗಳನ್ನು ತಂದಿಲ್ಲ. ಮನುಷ್ಯರು ಪರಸ್ಪರ ದೂರವಾಗುವುದಕ್ಕೆ ಕಾರಣವಾಗುವ ಅಂತರಂಗದ ಸ್ಥಾಯೀ ಸಂಚಾರೀ ಭಾವ ಮನಃಶಾಸ್ತ್ರೀಯವಾಗಿ ವಿಶ್ಲೇಷಣೆಗೊಳಗಾಗುವುದೇ ಈ ಕೃತಿಯ ಪ್ರತ್ಯೇಕತೆಯಾಗಿದೆ.
ಪಾತ್ರ ನಿರ್ಮಾಣದ ತಂತ್ರ, ಸಂಭಾಷಣೆಯ ಸೊಗಸು, ಪರಿಸರ ಸೃಷ್ಟಿಯ ಕಲಾತ್ಮಕತೆ, ಆಧುನಿಕ ಕಾನೂನುಗಳ ವಿಶ್ಲೇಷಣೆ, ವ್ಯಕ್ತಿ ತನ್ನ ಸುತ್ತ ನಿರ್ಮಿಸಿಕೊಳ್ಳುವ ಪ್ರಭಾವಲಯ, ರಾಜಕಾರಣ ಮತ್ತು ಸಂಸ್ಕೃತಿಗಳೊಳಗಿನ ಸಂಘರ್ಷ, ಧರ್ಮ ಹಾಗೂ ಆಚಾರಗಳೊಳಗೆ ತಪ್ಪುವ ತಾಳ, ಅಮಾನವೀಯ – ಅಸಂಗತ ನಡವಳಿಕೆಯಿಂದ ತನ್ನ ಸುತ್ತ ತಾನೇ ಬೇಲಿ ಬಿಗಿದುಕೊಂಡು ಪಾಡುಪಟ್ಟು ಹೊರಬರಲಾಗದೆ ಪಶ್ಚಾತ್ತಾಪ ಪಡುವ ಮನುಷ್ಯ ಸಹಜ ಬದುಕು ಈ ಕಾದಂಬರಿಯ ತಿರುಳಾಗಿದೆ.
ಅನ್ಯೋನ್ಯವಾಗಿದ್ದ ಅಣ್ಣ ತಮ್ಮಂದಿರ ನಡುವೆ ಪಾಲಾಗಿ, ನೀರಿನ ಹಕ್ಕಿನ ವಿಷಯದಲ್ಲಿ ವಿರಸ ಹುಟ್ಟಿ ಸಮಾಜದ ಮುಂದೆ ಗೌರವ ಕಳೆದುಕೊಳ್ಳುವ ಸನ್ನಿವೇಶ ಇಲ್ಲಿದೆ. ಸರಳವಾದ ಕಥಾ ವಸ್ತುವನ್ನು ಹೊಂದಿರುವ ಕಾದಂಬರಿಯ ಯಶಸ್ಸು ಕಥಾವಸ್ತುವನ್ನು ಅವಲಂಬಿಸಿಲ್ಲ ಎನ್ನುವುದೇ ಇಲ್ಲಿನ ಸ್ವಾರಸ್ಯವಾಗಿದೆ.
ಪಂಚೇಂದ್ರಿಯಗಳ ಚರ್ಯೆ, ಅವುಗಳನ್ನು ಅವಲಂಬಿಸುವ ನಡೆನುಡಿ, ದೇಹ, ಮಾತು, ಮನಸ್ಸುಗಳೊಳಗೆ ತಪ್ಪುವ ಹೊಂದಾಣಿಕೆ, ಅದರಿಂದಾಗಿ ಊರಿಗೆ ಊರೇ ಬವಣೆ ಪಡುವ ದೃಶ್ಯಾವಳಿ, ಸಮಕಾಲೀನ ನೋಟ ಮತ್ತು ಪಾತ್ರಗಳು ಈ ಕಾದಂಬರಿಯನ್ನು ಉತ್ತಮ ಕಲಾ ಸೃಷ್ಟಿಯಾಗುವಂತೆ ಮಾಡಿದೆ.
ಕಾಸರಗೋಡು ಪರಿಸರದ ಸೆಕೆಯ ತೀವ್ರತೆ, ಅಂತರ್ಜಲ ಮಟ್ಟ ಕುಸಿದಾಗಲೂ ಕೊಳವೆ ಬಾವಿ ಅನಿವಾರ್ಯವಾಗುವ ದುಃಸ್ಥಿತಿ, ಮದಕವನ್ನು ದುರಸ್ತಿಪಡಿಸಲಾಗದ ಒಳಗುದಿ, ಶ್ರೀ ಪಡ್ರೆ ಅವರಂಥ ಪರಿಸರ ಹೋರಾಟಗಾರರ ಕ್ರಾಂತಿಯ ಉಲ್ಲೇಖ, ಮಂಜೇಶ್ವರ ಪರಿಸರದ ಸ್ಥಳನಾಮಗಳ ಬಳಕೆ, ಕೌಟುಂಬಿಕ ಸಂಬಂಧ ಸುಧಾರಣೆಯಾದರೆ ಸಂಸ್ಕೃತಿ ಸಂವರ್ಧನೆ ಸಾಧ್ಯ ಎಂದು ಪರೋಕ್ಷವಾಗಿ ಸಾರುವಲ್ಲಿ ಕಾದಂಬರಿಯ ಯಶಸ್ಸು ಅಡಗಿದೆ.
ಅಣ್ಣ ಮಹಾಬಲಯ್ಯ ಮತ್ತು ತಮ್ಮ ಗೋಪಾಲಯ್ಯರೊಳಗೆ ರಾಜಿಮಾಡಿಸುವ ಸಂದರ್ಭದಿಂದ ಹಿಡಿದು ನೂರಾರು ಸನ್ನಿವೇಶ ಚಿತ್ರಣಗಳಲ್ಲಿ ಕಾದಂಬರಿಕಾರನ ನಿರೂಪಣ ಶೈಲಿ ಓದುಗನನ್ನು ಸೆಳೆಯುತ್ತದೆ.
“ಸದಾನಂದ ಶೆಟ್ಟರು ಫೋನನ್ನು ಮಹಾಬಲಯ್ಯಗೆ ಕೊಟ್ಟು, ‘ಈಗ ಮಾತನಾಡುವ ಸರದಿ ನಿಮ್ಮದು. ಹಲೋ
ಎನ್ನುತ್ತಲೆ ಹೇಗಿದ್ದಿ ಎಂದು ನೀವು ಪ್ರಶ್ನಿಸಬೇಕು. ಆಮೇಲೆ ಅವರ ಮಾತಿಗೆ ಸರಿಯಾಗಿಯೇ ಪ್ರತಿಕ್ರಿಯೆ ಕೊಡಬೇಕು’ ಎಂದರು. ಆ ಕಡೆಯಿಂದ ಗೋವಿಂದಯ್ಯನೂ ಹಲೋ ಎಂದರು. ಮತ್ತೆ ಮಾತು ಮುಂದುವರಿಸಲು ಮಹಾಬಲಯ್ಯನಿಗೆ ಆಗಲಿಲ್ಲ. ಅಷ್ಟರಲ್ಲಿ ಶೆಟ್ಟರು,’ಹೇಗಿದ್ದಿ ಎಂದು ಕೇಳಿ ಮಾರಾಯ್ರೆ ನಿಮ್ಮ ತಮ್ಮನನ್ನು’ ಎಂದರು. ಮಹಾಬಲಯ್ಯ ‘ಹೇಗಿದ್ದಿ’ ಎಂದು ಕೇಳಿದರು. ಆ ಕಡೆಯಿಂದ ‘ಚೆನ್ನಾಗಿದ್ದೇನೆ’ ಎನ್ನುವ ಉತ್ತರ ಬಂತು. ಆ ಮೇಲೆ ಇಬ್ಬರೂ ಪ್ರಶ್ನಿಸದೇ ನಿಂತರು. ಶೆಟ್ಟರು ಏನಾದರೂ ಕೇಳಿ ಎಂದು ಮಹಾಬಲಯ್ಯನಿಗೆ ಹೇಳಿದರೆ ಮಹಾಬಲಯ್ಯ, ‘ಎಂಥದ್ದು ಕೇಳುವುದು ಮಣ್ಣು’ ಎಂದು ಫೋನನ್ನು ಶೆಟ್ಟರ ಕೈಗೇ ನೀಡಿದರು. (ಪುಟ 112)
ಹೀಗೆ ತಾನೇ ಸೃಷ್ಟಿಸಿದ ಪಾತ್ರಗಳ ಒಳಹೊಕ್ಕು ನ್ಯಾಯವನ್ನು ಒದಗಿಸುವ ಕಾದಂಬರಿಕಾರರು ಪ್ರತಿಯೊಂದರ ನಡೆಗೂ ಅದರದ್ದೆ ದಾರಿ ಮಾಡಿಕೊಡುತ್ತಾರೆ. ರಾಜಿ ಮಾಡಿಸುವ ಅತ್ಯುತ್ಸಾಹ, ಅದಕ್ಕೆ ಒಪ್ಪದವನ ಮೇಲೆ ರೋಷ, ನಂತರ ಅದೇ ಕಾರಣ ಹಿಡಿದು ಜಾತಿದ್ವೇಷ, ಅದಾಗಿ ಇಡೀ ಸಮಾಜವೇ ಮಾನಸಿಕ ಸಂಘರ್ಷದಿಂದ ನಲುಗುವುದು ದೊಡ್ಡ ಪಾಠವೊಂದನ್ನು ಹೇಳುತ್ತದೆ. ನೀರಿನ ವಿವಾದ ಇಬ್ಬರೊಳಗಿನ ವೈಯಕ್ತಿಕ ವಿಷಯ ಎಂದು ನಿರ್ಲಕ್ಷಿಸುವ ಉದಾರತೆ ಅಧಿಕಾರಶಾಹಿಗಳಲ್ಲಿ ಇರದೇ ಹೋದರೆ ಮತ್ತು ರಾಜಕೀಯ ಪುಡಾರಿಗಳು ಕ್ರಾಂತಿಯನ್ನೇ ಪರಿಹಾರ ಮಾರ್ಗವೆಂದು ಬಗೆದರೆ ಅದೆಂಥ ಫಲ ಕೊಡುತ್ತದೆ ಎಂಬ ಕುತೂಹಲಕಾರಿ ವಿದ್ಯಮಾನವನ್ನು ಓದುಗ ಉಸಿರು ಬಿಗಿ ಹಿಡಿದು ಗಮನಿಸಬೇಕಾಗುತ್ತದೆ. ಯಾವುದೇ ಸನ್ನಿವೇಶವನ್ನು ನಿರ್ಲಕ್ಷಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಮೇಲು ನೋಟಕ್ಕೆ ಆಭಾಸ ಅನ್ನಿಸುವ ಕೆಲವು ಪ್ರಸಂಗಗಳು ಇಲ್ಲಿವೆ. ಅಷ್ಟೊಂದು ಸಜ್ಜನನಾದ ಮಹಾಬಲಯ್ಯನು ಚೋಮುವಿನ ಜೊತೆ ಸಂಬಂಧ ಇಟ್ಟುಕೊಳ್ಳುವುದು, ಒಡಕು ತೀವ್ರವಾದಾಗಲೂ ಇಬ್ಬರ ಹೆಂಡತಿಯರು ಇನ್ನೂ ಅನ್ಯೋನ್ಯರಾಗುವುದು, ಗೋಪಾಲಯ್ಯ ಚೋಮುವನ್ನು ಬ್ಲ್ಯಾಕ್ ಮೇಲ್ ಮಾಡಿ ವಶವರ್ತಿಯಾಗಿಸುವುದಕ್ಕೆ ಯತ್ನಿಸಿ ಅವಮಾನಿತನಾಗುವುದರೊಂದಿಗೆ ಅಣ್ಣನನ್ನು ಮೀರಿದ ದುಷ್ಟ ಅನಿಸಿಕೊಳ್ಳುವುದು, ಶರೀರ ಭಾಷೆಗೆ ಭಾರವಾಗುವಂತೆ ಎಲ್ಲರೂ ಮಾತುಕತೆಗೆ ಕುಳಿತುಕೊಳ್ಳುವ ಬದಲು ಕುಂಡೆ ಊರುವುದು, ಹೊರಡುವ ಬದಲು ಏಳುಕುಂಡೆ ಹಾಕು ಹೆಜ್ಜೆ ಮುಂತಾದ ಪ್ರಯೋಗಗಳ ಅಗತ್ಯವಿತ್ತೇ ಎಂದು ಸಹಜವಾಗಿಯೇ ಅನ್ನಿಸುತ್ತದೆ.
ಆದರೆ ಸೂಕ್ಷ್ಮವಾಗಿ ನೋಡಿದರೆ ಇವಕ್ಕೆಲ್ಲ ಮಾರ್ಮಿಕ ಉತ್ತರ ಕಥಾನಕದಲ್ಲಿ ಅಡಗಿದೆ. ಮಹಾಬಲಯ್ಯನಿಗೆ ಚೋಮು ಸುಮ್ಮನೆ ಸಿಕ್ಕಿದ್ದಲ್ಲ, ಕುಡುಕ ಬಲಹೀನ ಗಂಡನಿಂದ ಮಗುವಿಲ್ಲದಾಗಿ ಆಕೆಗೆ ಇನ್ನೊಬ್ಬನ ಅಗತ್ಯ ಇತ್ತು. ಇತ್ತ ಮಹಾಬಲಯ್ಯನಿಗೂ ಮಕ್ಕಳಿರುವ ಸೂಚನೆ ಇಲ್ಲ. ನಿಜವಾಗಿಯೇ ಅಣ್ಣನನ್ನು ತಿದ್ದ ಹೊರಟ ಗೋಪಾಲಯ್ಯ ಪ್ರಕೃತಿ ಸಹಜವಾಗಿಯೇ ಹೆಣ್ಣಿನ ಮುಂದೆ ದುರ್ಬಲನಾಗುವುದು ಬೇರೆಯೇ ಸಂದೇಶವನ್ನು ಕೊಡುತ್ತವಲ್ಲವೆ? ಅಣ್ಣ ತಮ್ಮರೊಳಗಿನ ತಗಾದೆಯನ್ನು ವಕೀಲರು ತಮ್ಮ ಸಂಪಾದನೆಗೆ ದಕ್ಕಿದ ದಾರಿ ಎಂದು ಖುಶಿಪಡದೆ ಇರುವುದು, ವ್ಯಾಜ್ಯ ಹೂಡುವ ತಮ್ಮನ ಮನೋವೃತ್ತಿಯನ್ನು ತಿದ್ದುವುದು ಆಭಾಸವಾಗಿ ಕಂಡರೂ ಆ ವಕೀಲನೇ ಚೋಮುವಿಗೆ ಹುಟ್ಟಿದವನಾಗಿ ಮಹಾಬಲಯ್ಯನಿಗೆ ಸಹಾಯವಾಗುವಲ್ಲಿನ ಕಥಾ ಸ್ಫೋಟ ಸಣ್ಣದಲ್ಲ.
ದಾಂಪತ್ಯ ಧರ್ಮಕ್ಕೆ ಈ ಕಾದಂಬರಿ ಉನ್ನತ ಸ್ಥಾನ ಕೊಡುತ್ತದೆ. ಕೊನೆಯಲ್ಲಿ ಗೋಪಾಲಯ್ಯನನ್ನು ತಿದ್ದಿದ ಮಹಾಶಕ್ತಿ ಅವನ ಮಡದಿಯೇ ಎಂಬುದು ಸತಿಪತಿ ಆದರ್ಶಕ್ಕೂ ಬಲವಾದ ಉದಾಹರಣೆಯಾಗಿದೆ. ಆಯ್ಕೆ ಮಾಡಿಕೊಂಡ ಕಥಾವಸ್ತುವಿಗೆ ಗರಿಷ್ಠ ನ್ಯಾಯ ಒದಗಿಸಿ ಉತ್ತಮ ಕಲಾಕೃತಿಯಾಗಿಸಿದ ವಿಧಾನವನ್ನು ನೋಡಿದರೆ ಈ ತನಕ ಬಂದ ಕಾದಂಬರಿಗಳಲ್ಲಿ ಅತ್ಯಂತ ಗಮನಾರ್ಹವಾಗಿದೆ.
ವಿಮರ್ಶಕರು : ಪ್ರೊ. ಪಿ.ಎನ್. ಮೂಡಿತ್ತಾಯ
ಪ್ರೊ. ಪಿ.ಎನ್. ಮೂಡಿತ್ತಾಯ ಇವರು ಏಳು ವರ್ಷ ಆಕಾಶವಾಣಿ ಸಲಹೆಗಾರನಾಗಿಯೂ ಒಂದು ವರ್ಷ ತಲಚ್ಚೇರಿಸರಕಾರಿ ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿರುವ ಇವರು ‘ದೇವರ ಕ್ಷಮೆ ಕೋರಿ’, ‘ಕಾರ್ಟೂನು ಬರೆಹಗಳು’, ‘ಮಿಸ್ಕಾಲು’ ಹೀಗೆ ನಾಲ್ಕು ಲಲಿತ ಪ್ರಬಂಧಗಳ ಸಂಕಲನ, ‘ಗೋವು ಮತ್ತು ಸಾವಯವ ಬದುಕು’ ಹಾಗೂ ‘ಹಸಿರುವಾಣಿ’ ಎಂಬ ಎರಡು ಪ್ರಕೃತಿ ಪರಿಸರ ಕೃತಿಗಳನ್ನು ರಚಿಸಿದ್ದಾರೆ. ಗೋಪಕುಮಾರ್ ವಿ. ಇವರ ಜೊತೆ ಸೇರಿ ಕಾರಂತರ ‘ಚೋಮನ ದುಡಿ’, ‘ಮೂಕಜ್ಜಿಯ ಕನಸುಗಳು’ ಹಾಗೂ ‘ಒಡಿಯೂರಿಲೆ ಅವಧೂತನ್’ ಹೀಗೆ ಆರು ಕೃತಿಗಳನ್ನು ಕನ್ನಡದಿಂದ ಮಲಯಾಳಕ್ಕೆ, ‘ಜ್ಞಾನಪ್ಪಾನ’, ‘ಚಟ್ಟಂಬಿ ಸ್ವಾಮಿಗಳು’, ‘ವ್ಯಾಸ ಭಾರತದ ದ್ರೌಪದಿ’ ಇತ್ಯಾದಿ ಕೃತಿಗಳನ್ನು ಮಲಯಾಳದಿಂದ ಕನ್ನಡಕ್ಕೆ ಅನುವಾದಿಸಿದ ಖ್ಯಾತಿ ಇವರದ್ದು. ಕವನ ಸಂಕಲನ ‘ಬೇರೆ ಶಬ್ದಗಳಿಲ್ಲ’ ಎಂಬ ಸ್ವರಚಿತ ಕವನ ಸಂಕಲನ ಮತ್ತು ಓರೆಗೆರೆ ಬರಹ (ಕಾರ್ಟೂನ್) ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಲೇಖಕ ಬಗ್ಗೆ :
ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಿಕ ಚಟುವಟಿಕೆ ನಡೆಸುತ್ತಿದ್ದಾರೆ.
ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದ್ದೂ ಇಲ್ಲದ್ದು, ಇಹಪರದ ಕೊಳ, ಕಾಮನೆಯ ಬೆಡಗು, ದೇವರು ಮತ್ತೆ ಮತ್ತೆ, ಬೇಲಿಯ ಗೂಟದ ಮೇಲೊಂದು ಚಿಟ್ಟೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ಮಕ್ಕಳು, ಅನಂತ, ಕನಸಿನ ಬಳ್ಳಿ, ನನ್ನದಲ್ಲದ್ದು, ಪಲ್ಲಟ, ಹದು. ಪ್ರಕೃತಿ, ನೆಲಮುಗಿಲುಗಳ ಮಧ್ಯೆ, ದಿಗಂತ, ದೃಷ್ಟಿ, ಉಪ್ಪು, ತೊಟ್ಟಿ, ಪಂಥ, ಅರ್ಥ, ಉಲ್ಲಂಘನೆ. ಮುಖಾಂತರ, ಧಾತು (ಕಾದಂಬರಿಗಳು), ಆಶಾಂಕುರ, ಹಸಿರುಬಿಸಿಲು, ಸುಂದರಿಯ ಎರಡನೇ ಅವತಾರ. ಸೀತಾಪುರದ ಕಥೆಗಳು, ಸನ್ನಿಧಿಯಲ್ಲಿ ಸೀತಾಪುರ (ಕಥಾ ಸಂಕಲನಗಳು), ಸೀತಾಪುರದಲ್ಲಿ ಕತೆಗಳೇ ಇಲ್ಲ (ಸಮಗ್ರ ಕಥಾ ಸಂಕಲನ) ಬಿಸಿಲಕೋಲು (ವ್ಯಕ್ತಿಚಿತ್ರಗಳ ಸಂಗ್ರಹ) ಪ್ರಕಟಿತ ಕೃತಿಗಳು.