ಅಂಕೋಲಾ : ಕರ್ನಾಟಕ ಸಂಘ (ರಿ.) ಅಂಕೋಲಾ ಮತ್ತು ದೀನಬಂಧು ಸ.ಪ. ಗಾಂವಕರ ದತ್ತಿನಿಧಿ ಸಮಿತಿ ಅಂಕೋಲಾ ಇದರ ವತಿಯಿಂದ ‘ದತ್ತಿನಿಧಿ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ’ವು ದಿನಾಂಕ 16-06-2024ರಂದು ಬೆಳಗ್ಗೆ ಗಂಟೆ 10-30ಕ್ಕೆ ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ನಡೆಯಲಿದೆ.
ಬೆಂಗಳೂರು ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ ಇವರು ಸಮಾರಂಭವನ್ನು ಉದ್ಘಾಟಿಸಲಿದ್ದು, ದೀನಬಂಧು ಸ.ಪ. ಗಾಂವಕರ ದತ್ತಿನಿಧಿ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಶಾಂತಾರಾಮ ನಾಯಕ ಇವರು ಅಧ್ಯಕ್ಷತೆ ವಹಿಸಲಿರುವರು. ಖ್ಯಾತ ನ್ಯಾಯವಾದಿಗಳಾದ ಶ್ರೀ ಪ್ರದೀಪ ಕೃಷ್ಣದೇವ ಗಾಂವಕರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹೊನ್ನಾವರದ ಜಾನಪದ ವಿದ್ವಾಂಸರು ಮತ್ತು ಹಿರಿಯ ಸಾಹಿತಿಗಳಾದ ಡಾ. ಎನ್.ಆರ್. ನಾಯಕ ಇವರಿಗೆ ‘ದೀನಬಂಧು ಸ.ಪ. ಗಾಂವಕರ ದತ್ತಿನಿಧಿ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಜನಪದ ಕಣಜ ಡಾ. ಎನ್.ಆರ್. ನಾಯಕ
ಅಂಕೋಲಾ ತಾಲೂಕಿನ ಭಾವಿಕೇರಿಯಲ್ಲಿ ಜನಿಸಿದ ಡಾ. ಎನ್.ಆರ್. ನಾಯಕ ಇವರು ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಎನ್.ಎಸ್.ಎಸ್ ಯೋಜನಾಧಿಕಾರಿಯಾಗಿ, ಪಿ.ಎಚ್.ಡಿ. ಮಾರ್ಗದರ್ಶಕರಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದವರು. 1982ರಲ್ಲಿ ‘ಜಾನಪದ ಪ್ರಕಾಶನ’ ಸಂಸ್ಥೆ ಹುಟ್ಟು ಹಾಕಿ ಜಾನಪದಕ್ಕೆ ಸಂಬಂಧಿಸಿದ 62 ಗ್ರಂಥಗಳ ಪ್ರಕಟಣೆ ಮಾಡಿದವರು. ‘ಜಾನಪದ ದೀಪಾರಾಧನೆ’ ಕಾರ್ಯಕ್ರಮ ಪ್ರಾರಂಭಿಸಿ, ನಾಡಿನೆಲ್ಲೆಡೆ ನೂರಾರು ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ವಿಚಾರ ಸಂಕಿರಣ ಏರ್ಪಡಿಸಿದ್ದಾರೆ. ಪ್ರಕಟಿತ 98 ಗ್ರಂಥಗಳಲ್ಲಿ 54 ಜಾನಪದಕ್ಕೆ ಸಂಬಂಧಿಸಿದ್ದು, 26 ಹಿಂದುಳಿದ ಬುಡಕಟ್ಟು ಜನಾಂಗಗಳ ಸಾಹಿತ್ಯ, ಕಲೆ, ಸಂಸ್ಕೃತಿಗೆ ಸಂಬಂಧಿಸಿದ ಸಂಶೋಧನಾತ್ಮಕ ಗ್ರಂಥಗಳು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ‘ಜಾನಪದ ತಜ್ಞ ಪ್ರಶಸ್ತಿ’, ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ‘ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ’, ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿಯ ‘ಜಾನಪದ ವಿಶೇಷ ಪ್ರಶಸ್ತಿ’, ‘ಗೋರುರು ಜಾನಪದ ಪ್ರಶಸ್ತಿ’, ವಿ.ಸಿ.ಸಂಪದ ಸನ್ಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಲಲಿತಾಂಬ ವೃಶಭೇಂದ್ರಸ್ವಾಮಿ ಸಾಹಿತ್ಯ ದಂಪತಿ ಸನ್ಮಾನ ಹಾಗೂ ಬಾರ್ಕೂರಿನ ‘ಭೂತಾಳ ಪಾಂಡ್ಯ ಪ್ರಶಸ್ತಿ’ ಲಭಿಸಿವೆ.