ಮಂಗಳೂರು : ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು ಹವ್ಯಾಸಿ ನಾಟಕ ತಂಡವಾಗಿದ್ದು, ಸಮಾನ ಮನಸ್ಕರು ಒಟ್ಟು ಸೇರಿ ಕಟ್ಟಿದ ಸಂಸ್ಥೆ. ಕಳೆದ ಹತ್ತು ವರ್ಷಗಳಿಂದ ತನ್ನ ಇತಿಮಿತಿಯ ಒಳಗಡೆ ಅತಿಯೆನಿಸದೆ ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ಪ್ರಸ್ತುತ ನಮ್ಮ ತಂಡವು ಆಧುನಿಕ ತುಳು ನಾಟಕ ರಂಗಭೂಮಿಯ ಬೆಳವಣಿಗೆಯ ದೃಷ್ಟಿಯಿಂದ ಮತ್ತು ತುಳು ನಾಟಕ ಪಠ್ಯಗಳ ಕೊರತೆಯನ್ನು ನೀಗಿಸುವ ನೆಲೆಯಿಂದ ಪ್ರೊಫೆಸರ್ ಅಮೃತ ಸೋಮೇಶ್ವರವರ ಸವಿ ನೆನಪಿನಲ್ಲಿ ‘ತುಳು ನಾಟಕ ರಚನಾ ಕಾರ್ಯಾಗಾರ’ವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಈ ಕಾರ್ಯಾಗಾರಕ್ಕೆ ಹಿರಿಯ ಅನುಭವಿಗಳನ್ನೊಳಗೊಂಡ ಸಲಹಾ ಮಂಡಳಿ ಮತ್ತು ಮಾರ್ಗದರ್ಶನ ಮಂಡಳಿ ಇರುತ್ತದೆ.
ಈ ಕಾರ್ಯಾಗಾರವು ನಾಲ್ಕು ಹಂತಗಳಲ್ಲಿ ನಡೆಯಲಿದ್ದು, ಮೊದಲನೆಯ ಹಂತದಲ್ಲಿ ಆಯ್ಕೆಯಾಗುವ 10 ಜನ ಅಭ್ಯರ್ಥಿಗಳಿಗೆ ತುಳು ನಾಟಕ ರಂಗಭೂಮಿಯ ವಸ್ತುಸ್ಥಿತಿಯ ಪರಿಚಯ, ಹಲವಾರು ನಾಟಕ ಪಠ್ಯ-ಪ್ರಯೋಗಗಳ ಪರಿಚಯ ಮತ್ತು ವಿಶ್ಲೇಷಣೆ ಮೊದಲಾದವುಗಳ ಕುರಿತು ಚರ್ಚಿಸಲಾಗುತ್ತದೆ.
ಎರಡನೆಯ ಹಂತದಲ್ಲಿ ಅಭ್ಯರ್ಥಿಗಳು ತಮ್ಮದೇ ಆದ ಸ್ವಂತ ಕತೆಯ ಎಳೆಯನ್ನು ಸಿದ್ಧಪಡಿಸಿಕೊಂಡು ಬರಬೇಕಾಗುತ್ತದೆ. ಕಾರ್ಯಾಗಾರದಲ್ಲಿ ಅಭ್ಯರ್ಥಿಗಳ ಕತೆಗಳ ಕುರಿತು ಚರ್ಚಿಸಲಾಗುತ್ತದೆ. ಕಥೆಯ ವಿಸ್ತರಣೆ ಮತ್ತು ಕತೆಯ ನಾಟಕ ಸ್ವರೂಪಗಳ ಒಂದಷ್ಟು ಸಾಧ್ಯತೆಗಳನ್ನು ಕುರಿತು ಚರ್ಚಿಸಲಾಗುತ್ತದೆ.
40 ದಿವಸಗಳ ಬಳಿಕ ಮೂರನೆಯ ಹಂತದಲ್ಲಿ ಅಭ್ಯರ್ಥಿಗಳು ತಮ್ಮ ಕಥೆಯನ್ನು ವಿಸ್ತರಿಸಿ ಸ್ವರಚಿತ ನಾಟಕವನ್ನು ಬರೆದು ತಂದು ಓದುತ್ತಾರೆ. ಆ ನಾಟಕದ ಕುರಿತು ಚರ್ಚೆ – ವಿಶ್ಲೇಷಣೆಗಳನ್ನು ಮಾಡಲಾಗುತ್ತದೆ.
ನಾಲ್ಕನೆಯ ಹಂತದಲ್ಲಿ ಅಭ್ಯರ್ಥಿಗಳು ತಮ್ಮ ರಚನೆಯ ನಾಟಕವನ್ನು ತಿದ್ದುಪಡಿ ಮಾಡಿ ಪರಿಷ್ಕರಿಸಿ ಓದುತ್ತಾರೆ.
ಈ ಕಾರ್ಯಾಗಾರದಲ್ಲಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲು ರಂಗಭೂಮಿಯ ಹಿರಿಯ ನಾಟಕಕಾರರು, ನಿರ್ದೇಶಕರು, ರಂಗಕರ್ಮಿಗಳು – ಮೊದಲಾದ ಸಂಪನ್ಮೂಲ ವ್ಯಕ್ತಿಗಳಿರುತ್ತಾರೆ. ನಾಲ್ಕು ಹಂತಗಳಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ಅಭ್ಯರ್ಥಿಗಳ ಮೂಲಕ ಹತ್ತು ನಾಟಕ ಕೃತಿಗಳು ರಚನೆಯಾಗುತ್ತವೆ. ಮುಂದೆ ಈ ನಾಟಕಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಪಡಿಸುವ ಇರಾದೆಯನ್ನೂ ಇರಿಸಿಕೊಳ್ಳಲಾಗಿದೆ.
ಆದ್ದರಿಂದ ನಾಲ್ಕು ಹಂತಗಳ ಕಾರ್ಯಾಗಾರದ ಜೊತೆಗೆ ಪುಸ್ತಕ ಪ್ರಕಟಣೆಯವರೆಗೆ ನಾಲ್ಕು ಲಕ್ಷ ರೂಪಾಯಿಗಳ ವೆಚ್ಚವನ್ನು ಅಂದಾಜಿಸಲಾಗಿದೆ. ಆದ್ದರಿಂದ ರಂಗಭೂಮಿಯ ಹಿತೈಷಿಗಳಾದಂತಹ ತಾವು ನಮ್ಮೀ ಕಾರ್ಯಗಾರವನ್ನು ಯಶಸ್ವಿಗೊಳಿಸಲು ತನು- ಮನ-ಧನ ರೀತಿಯ ಸಹಕಾರವನ್ನು ನೀಡಿ ಪ್ರೋತ್ಸಾಹಿಸಿ, ತುಳುರಂಗಭೂಮಿಯ ಉದ್ದೀಪನಕ್ಕೆ ತಾವೂ ಕೈಜೋಡಿಸಬೇಕೆಂದು ಈ ಮೂಲಕ ವಿನಮ್ರವಾಗಿ ವಿನಂತಿಸುತ್ತಿದ್ದೇವೆ.