ಕುಶಾಲನಗರ : ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ ಗ್ರೀಷ್ಮಸಿರಿ ಕವಿಗೋಷ್ಠಿ ಅಂಗವಾಗಿ ಉಳುವಂಗಡ ಕಾವೇರಿ ಉದಯ ಅವರ ‘ಕಲ್ಪನೆಯ ಹನಿಗಳು’ ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 07-07-2024ರ ಭಾನುವಾರದಂದು ಕುಶಾಲನಗರ ತಾಲೂಕಿನ ಹಾರಂಗಿಯಲ್ಲಿ ನಡೆಯಿತು.
ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ “ಕವಿಗಳನ್ನು ಸಮಾಜ ಗಮನಿಸುತ್ತಿರುತ್ತದೆ. ಹಾಗಾಗಿ ಕವನ ಬರೆಯುವವರು ಸಾಕಷ್ಟು ಹುಷಾರಾಗಿ ಇರಬೇಕು. ಕವನಗಳ ರಚನೆ ಬಹಳ ಸುಲಭ ಎಂದು ಅಂದು ಕೊಳ್ಳುತ್ತೇವೆ. ಆದರೆ ಇದರಷ್ಟು ಆಪಾಯಕಾರಿ ಕೆಲಸ ಯಾವುದೂ ಇಲ್ಲ. ಕವನ ಬರೆಯುವಾಗ ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಕವನ ಬರೆಯುವವರಿಗೆ ಅದರ ಪರಿಣಾಮಗಳ ಅರಿವು ಇರಬೇಕು. ಬರೆಯುವವರು ಓದುವ ಹವ್ಯಾಸ ಹೊಂದಿರಬೇಕು. ಹೆಚ್ಚು ಹೆಚ್ಚು ಓದಿ ಕಡಿಮೆ ಬರೆಯಬೇಕು. ಬರೆಯುವುದನ್ನು ಪರಿಣಾಮಕಾರಿಯಾಗಿ ಬರೆಯಬೇಕು. ಶಬ್ದಗಳನ್ನು ಚೆಂದವಾಗಿ ಜೋಡಿಸುವುದು ಕೂಡ ಒಂದು ಕಲೆ. ಈ ಕಲೆ ಕವಿಗಳಿಗೆ ಇರಬೇಕು. ಕವನ ಬರೆದವರು ಅದನ್ನು ತಾವೇ ಒಮ್ಮೆ ಓದಬೇಕು. ಅದನ್ನು ಒಳ್ಳೆಯ ವಿಮರ್ಶಕರಿಗೆ ಕೊಟ್ಟು ಅವರು ನೀಡುವ ಸಲಹೆಗಳನ್ನು ಸಕರಾತ್ಮಕವಾಗಿ ಸ್ವೀಕರಿಸುವ ಗುಣ ಹೊಂದಿರಬೇಕು. ಯಾವುದೇ ವಿಷಯವನ್ನಾದರೂ ವಿಭಿನ್ನವಾಗಿ ಆಲೋಚಿಸಿ ಬರೆದಾಗ ಸುಂದರ ಕವನಗಳು ಸೃಷ್ಟಿಯಾಗುತ್ತದೆ.” ಎಂದು ಹೇಳಿದರು.
ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಬಿ. ಎಸ್. ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಳುವಂಡ ಕಾವೇರಿ ಉದಯ ಅವರ ಕಲ್ಪನೆಯ ಹನಿಗಳು ಕವನ ಸಂಕಲನವನ್ನು ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಪರಿಚಯಿಸಿದರು. ನಿವೃತ್ತ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್, ನಿವೃತ್ತ ಉಪನ್ಯಾಕಿಯರಾದ ಪೂವಮ್ಮ, ತಿಲೋತ್ತಮೆ ನಂದಕುಮಾರ್ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೆ. ಎಸ್. ಕೃಷ್ಣಗೌಡ ಮತ್ತಿತರರು ಉಪಸ್ಥಿತರಿದ್ದರು. ಪುಸ್ತಕ ಬಿಡುಗಡೆ ಸಮಾರಂಭದ ಬಳಿಕ ಕುಡೇಕಲ್ ಸಂತೋಷ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಹದಿಮೂರು ಮಂದಿ ಕವಿಗಳು ತಮ್ಮ ಕವನಗಳನ್ನು ವಾಚಿಸಿದರು.