ತೆಕ್ಕಟ್ಟೆ: ಕೇಂದ್ರ ಸಂಸ್ಕೃತಿ ಇಲಾಖೆ ನವದೆಹಲಿ ಇದರ ಪ್ರಾಯೋಜಕತ್ವದಲ್ಲಿ ‘ಸಿನ್ಸ್ 1999 ಶ್ವೇತಯಾನ- 42ರ ಕಾರ್ಯಕ್ರಮದಡಿಯಲ್ಲಿ ಯಕ್ಷಾಂತರಂಗ (ರಿ.) ಕೋಟ ಪ್ರಸ್ತುತ ಪಡಿಸಿದ ‘ಅಂಬೆ’ ಯಕ್ಷಗಾನ ಪ್ರದರ್ಶನವು ದಿನಾಂಕ 13-07-2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್ ಮಾತನಾಡಿ “ಕತ್ತಲನ್ನು ಹೋಗಲಾಡಿಸುವುದಕ್ಕೆ ಮತ್ತೆ ಮತ್ತೆ ಯಕ್ಷರಂಗದಲ್ಲಿ ದೀಪವನ್ನು ಬೆಳಗ ಬೇಕಾಗುತ್ತದೆ. ಕರಾವಳಿ ಭಾಗದಲ್ಲಿ ಎಷ್ಟೇ ಮಳೆ ಬರಲಿ, ಬಿಸಿಲಿರಲಿ ಯಕ್ಷರಂಗದ ದೀಪವು ಸದಾ ಉರಿಯುತ್ತಿರುತ್ತದೆ. ದಣಿದು ದುಡಿದ ಒಂದಂಶವನ್ನು ಕಲಾ ಪ್ರಪಂಚಕ್ಕೆ ಕೊಡುಗೆಯಾಗಿ ಕೊಡುವ ಸದ್ಗುಣ ಸಜ್ಜನರಲ್ಲಿ ಸದಾ ಕಾಲ ಇರಲಿ. ಇದರಿಂದಾಗಿ ಮತ್ತಷ್ಟು ಎತ್ತರಕ್ಕೆ ಕಲೆ ಬೆಳೆದು ಬೆಳಕಾಗಲಿ.” ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಆಹಾರ್ಯ ತಜ್ಞ ಹಂದಾಡಿ ಬಾಲಕೃಷ್ಣ ನಾಯಕ್ ಇವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದ ಪ್ರಸಂಗಕರ್ತ ಹಾಗೂ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು “ಯಕ್ಷಗಾನ ರಂಗಭೂಮಿಯಲ್ಲಿ ವೇಷಭೂಷಣ ತಜ್ಞರಾಗಿ ಸುದೀರ್ಘ ಕಾಲ ವಿಶಿಷ್ಟವಾದ ಕೊಡುಗೆಯನ್ನು ಕೊಡುತ್ತಾ, ಸೇವೆ ಸಲ್ಲಿಸಿದ ಹಿರಿಯ ಆಹಾರ್ಯ ತಜ್ಞರಾದ ಹಂದಾಡಿ ಬಾಲಕೃಷ್ಣ ನಾಯಕ್ ಪ್ರೇಕ್ಷಕರ ಕಣ್ಣಿಗೆ ಕಾಣದೇ ಕೇವಲ ನೇಪತ್ಯ ಕಲಾವಿದರಾಗಿ ಪುರಾಣ ಲೋಕದ ಪಾತ್ರಗಳನ್ನು ವೇಷದ ಮೂಲಕ, ರಂಗ ಮಂಚಕ್ಕೆ ಪರಿಚಯಿಸುತ್ತಿದ್ದ ಹಿರಿಯ ಕಲಾವಿದರು. ಪುರಾಣ ಲೋಕದ ಅನೇಕ ಸಂಗತಿಗಳನ್ನು ಬಲ್ಲವರಾಗಿ ಪುರಾಣ ಲೋಕದ ವೇಷಗಳು ಹೀಗೆಯೇ ರಂಗದಲ್ಲಿ ಮೂಡಿ ಬರಬೇಕೆನ್ನುವ ಸ್ಪಷ್ಟ ಕಲ್ಪನೆಯುಳ್ಳ ಬಾಲಣ್ಣ, ರಂಗದಲ್ಲಿ ವ್ಯತಿರಿಕ್ತ ವೇಷಗಳನ್ನು ಮತ್ತು ಸಾತ್ವಿಕವಾದ ಕ್ರೋದವನ್ನೂ ವ್ಯಕ್ತಪಡಿಸುತ್ತಿದ್ದವರು. ಯಕ್ಷಗಾನ ರಂಗಭೂಮಿಯ ಬಗೆಗಿನ ಅತ್ಯಂತ ಪ್ರೀತಿಯಿಂದ ತನ್ನ ಮೂವರು ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ, ಸಮರ್ಥ ಕಲಾವಿದರನ್ನಾಗಿ ಯಕ್ಷ ರಂಗಕ್ಕೆ ಉಡುಗೊರೆಯಾಗಿ ಕೊಟ್ಟವರು.” ಎಂದರು.
ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉದ್ಯಮಿ ಸುಬ್ರಾಯ ಆಚಾರ್, ಗೆಳೆಯರ ಬಳಗ ಕಾರ್ಕಡದ ಅಧ್ಯಕ್ಷರಾದ ತಾರಾನಾಥ ಹೊಳ್ಳ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಯಕ್ಷಾಂತರಂಗ ಕಾರ್ಯದರ್ಶಿ ಕೃಷ್ಣಮೂರ್ತಿ ಉರಾಳ, ಯಕ್ಷಗಾನ ಜಾಗೃತಿ ವೇದಿಕೆಯ ರಾಘವ ಶೆಟ್ಟಿ ಬೇಳೂರು ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಬಳಿಕ ಯಕ್ಷಾಂತರಂಗ ತಂಡದ ಕಲಾವಿದರಿಂದ ‘ಅಂಬೆ’ ಯಕ್ಷಗಾನ ಪ್ರಸಂಗ ರಂಗ ಪ್ರಸ್ತುತಿಗೊಂಡಿತು.