ಮೈಸೂರು : ಗಾಂಧಿವಾದಿ, ಪತ್ರಕರ್ತ ಕೆ.ವಿ. ಶ್ರೀನಿವಾಸನ್ (81) ಅವರು ಹುಣಸೂರಿನ ಕಲ್ಕುಣಿಕೆ ಗ್ರಾಮದಲ್ಲಿ ವಯೋಸಹಜ ಅನಾರೋಗ್ಯದಿಂದ ದಿನಾಂಕ 06 ಫೆಬ್ರವರಿ 2026ರಂದು ನಿಧನರಾದರು. ಅವಿವಾಹಿತರಾಗಿದ್ದ ಅವರು, ವೃತ್ತಿ ಬದ್ಧತೆ, ಕಿರಿಯರಿಗೆ ನೀಡುತ್ತಿದ್ದ ಪ್ರೋತ್ಸಾಹದ ಕಾರಣಕ್ಕೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶ್ರೀನಿವಾಸನ್ ‘ಬ್ರದರ್’ ಎಂದೇ ಹೆಸರಾಗಿದ್ದರು.
1944ರ ಮಾರ್ಚ್ 6ರಂದು ಜನಿಸಿದ ಅವರು ಎಂ.ಎ. ಪತ್ರಿಕೋದ್ಯಮ ಹಾಗೂ ಎಲ್‌ಎಲ್‌ಬಿ ಪದವಿ ಪಡೆದಿದ್ದರು. ಭಾರತೀಯ ಹಾಗೂ ಪಾಶ್ಚಾತ್ಯ ತತ್ವಶಾಸ್ತ್ರದ ಸರ್ಟಿಫಿಕೇಟ್ ಕೋರ್ಸ್ ಮಾಡಿದ್ದರು. ಗಾಂಧಿ ತತ್ವದಲ್ಲಿ ಅಪಾರ ಒಲವಿದ್ದ ಅವರು, ಗಾಂಧಿ ಅಧ್ಯಯನದಲ್ಲಿ ಡಿಪ್ಲೊಮಾ ಮಾಡಿದ್ದರು. ‘ಪತ್ರಿಕೋದ್ಯಮಿಯಾಗಿ ಗಾಂಧೀಜಿ’ ಮತ್ತು ‘ಸಹ ಬರಹಗಾರರ ಜಾಹೀರಾತು’ ಕೃತಿಗಳನ್ನು ಬರೆದಿದ್ದಾರೆ. ‘ನವಧ್ವನಿ’ ಕನ್ನಡ ವಾರಪತ್ರಿಕೆಯನ್ನು ಸ್ಥಾಪಿಸಿದ್ದರು. ಹಲವು ಪತ್ರಕರ್ತರನ್ನು ರೂಪಿಸಿದ ‘ಮಹಾನಂದಿ’ ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ‘ಸಂಕ್ರಾಂತಿ’, ‘ಅಶೋಕ’, ‘ವಿಜಯ’, ‘ವರ್ತಮಾನ’ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಆಕಾಶವಾಣಿಯ ವರದಿಗಾರರಾಗಿದ್ದರು. 70ರ ದಶಕದಲ್ಲಿ ಜಯಪ್ರಕಾಶ ನಾರಾಯಣ ಮುನ್ನಡೆಸಿದ ಚಳವಳಿಗಳಲ್ಲಿ ಪಾಲ್ಗೊಂಡಿದ್ದರು. ಹಿಂದಿ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು. ಪತ್ರಕರ್ತರ ಅಭ್ಯುದಯಕ್ಕಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಹಲವು ಪ್ರಶಸ್ತಿಗಳನ್ನು ಸ್ಥಾಪಿಸಿದ್ದರು.
