ಉಡುಪಿ : ಬಡಗುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ‘ವೀರಬಾಹುಕ’ ಪಾತ್ರದ ಮೂಲಕ ಅಸಂಖ್ಯಾತ ಅಭಿಮಾನಿಗಳ ಮನಗೆದ್ದ ಮಳಲಿ ಶೀನಯ್ಯ (96 ವರ್ಷ) ದಿನಾಂಕ 29 ಏಪ್ರಿಲ್ 2026ರಂದು ಶಿವಮೊಗ್ಗದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಇಪ್ಪತ್ತನೇ ವರ್ಷಕ್ಕೆ ಯಕ್ಷಗಾನ ತಿರುಗಾಟ ಆರಂಭಿಸಿದ ಇವರು ಸ್ಥಳೀಯ ಬಯಲಾಟದ ಮೂಲಕ ವೇಷಧಾರಿಯಾಗಿ ಕಲೆಗೆ ಪಾದಾರ್ಪಣೆ ಮಾಡಿದರು. ಇವರಿಗೆ ಗುರು ವೀರಭದ್ರ ನಾಯಕ್ ಯಕ್ಷಗಾನದ ಗುರುಗಳಾಗಿದ್ದರು. ಮಳಲಿ, ರಂಜದಕಟ್ಟೆ, ಹುಂಚಾ, ಹನ್ನೂರು, ಕೊಲ್ಲೂರು, ಸುಬ್ರಹ್ಮಣ್ಯ, ಇಡಗುಂಜಿ ಮೇಳಗಳಲ್ಲಿ ಕಲಾಸೇವೆಗೈದಿದ್ದಾರೆ. ಭೀಮ, ಹಿರಣ್ಯಕಶಿಪು, ಕೌರವ, ಕೈಟಭ, ವೀರಬಾಹು, ವಲಲ, ದೂರ್ವಾಸ ಮೊದಲಾದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಕೇವಲ ವೇಷಧಾರಿಯಾಗಿ ಮಾತ್ರವಲ್ಲದೆ, ತಾಳಮದ್ದಲೆಯ ಅರ್ಥಧಾರಿಯಾಗಿಯೂ ಪ್ರಸಿದ್ಧರಾಗಿದ್ದ ಇವರು ಪುತ್ರ, ಪುತ್ರಿ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಇವರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿತ್ತು.
