ಸುರತ್ಕಲ್ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ತು ದ.ಕ. ಜಿಲ್ಲೆ, ಕರ್ನಾಟಕ ಗಮಕ ಕಲಾ ಪರಿಷತ್ತು ಮಂಗಳೂರು ಮತ್ತು ಸುರತ್ಕಲ್ ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನಲ್ಲಿ 9ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ‘ಗಮಕ ಕಲಾ ಸಮ್ಮೇಳನ’ವು ದಿನಾಂಕ 13-07-2024ರಂದು ನಡೆಯಿತು.
ಈ ಸಮ್ಮೇಳನವನ್ನು ಜ್ಯೋತಿ ಪ್ರಜ್ವಲನೆ ಮಾಡಿ ಉದ್ಘಾಟನೆ ಮಾಡಿದ ಕರ್ನಾಟಕ ಗಮಕ ಕಲಾ ಪರಿಷತ್‌ನ ಅಧ್ಯಕ್ಷ ಎ.ವಿ. ಪ್ರಸನ್ನ ಮಾತನಾಡಿ “ಕಾವ್ಯದ ಜೊತೆಗೆ ಬೆಳೆದಿರುವ ಗಮಕ ಕಲೆ ಶ್ರೇಷ್ಠವಾದುದು. ಜನ ಸಾಮಾನ್ಯರಿಗೆ ಕಾವ್ಯಗಳನ್ನು ಪರಿಚಯಿಸಿ ನಾಡಿನ ಶ್ರೇಷ್ಠ ಸಂಸ್ಕೃತಿ ಪಸರಿಸುವ ಕಾರ್ಯವನ್ನು ಗಮಕಿಗಳು ಮಾಡುತ್ತಿದ್ದಾರೆ” ಎಂದು ನುಡಿದರು.
ಸಮ್ಮೇಳನಾಧ್ಯಕ್ಷ ಗಮಕ ವಿದ್ವಾನ್ ಹೆಚ್. ಯಜ್ಞೇಶಾಚಾರ್ಯ ಹೊಸಬೆಟ್ಟು ಮಾತನಾಡಿ “ಗಮಕ ವಾಚನ ಮನೆಮನೆಗಳಲ್ಲಿ ಚಳುವಳಿಯ ರೂಪದಲ್ಲಿ ನಡೆಸಬೇಕಾಗಿದೆ. ಗಮಕ ಅಭಿಮಾನಿಗಳು ಈ ನಿಟ್ಟಿನಲ್ಲಿ ಶ್ರಮಿಸಬೇಕು. ಶ್ರೇಷ್ಠತರ ಕಲೆಯಾದ ಗಮಕವನ್ನು ಸಾಂಸ್ಕೃತಿಕ ಸಂಸ್ಥೆಗಳು ರಕ್ಷಿಸುವ ಕಾರ್ಯ ಮಾಡಬೇಕಾಗಿದೆ” ಎಂದರು. ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ ಕಾರ್ಯದರ್ಶಿ ದಕ್ಷಿಣಾ ಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿ “ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗಮಕ ಪರಂಪರೆ ಅನನ್ಯವಾದುದು” ಎಂದರು.
ಆಶಯ ನುಡಿಗಳನ್ನಾಡಿದ ದ.ಕ. ಜಿಲ್ಲಾ ಗಮಕ ಕಲಾ ಪರಿಷತ್‌ನ ಅಧ್ಯಕ್ಷರಾದ ಪ್ರೊ. ಮಧೂರು ಮೋಹನ ಕಲ್ಲೂರಾಯ ಅವರು “ಯುವಜನತೆ ಗಮಕ ಕಲೆಯಲ್ಲಿ ಆಕರ್ಷಿತರಾಗಲು ಕಾರ್ಯ ಯೋಜನೆಗಳನ್ನು ರೂಪಿಸಲಾಗಿದೆ” ಎಂದರು. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕರಾದ ಶ್ರೀ ವೇದಮೂರ್ತಿ ಹರಿನಾರಾಯಣ ದಾಸ ಆಸ್ರಣ್ಣ “ಯಕ್ಷಗಾನ ಕಲೆಯಂತೆ ಗಮಕ ಕಲೆಯೂ ನಮ್ಮ ಸಂಸ್ಕೃತಿಯಲ್ಲಿ ಬೆಸೆದುಕೊಂಡಿದೆ” ಎಂದು ಹೇಳಿ ಶುಭ ಹಾರೈಸಿದರು. ಹಿಂದೂ ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್ ಮಾತನಾಡಿ “ಹಿಂದೂ ವಿದ್ಯಾದಾಯಿನೀ ಸಂಘವು ತನ್ನ ಶಿಕ್ಷಣ ಸಂಸ್ಥೆಗಳ ಮೂಲಕ ಭಾರತೀಯ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯವನ್ನು ಬೆಳೆಸುವಲ್ಲಿ ಸರ್ವ ಪ್ರೋತ್ಸಾಹ ನೀಡುತ್ತಿದೆ” ಎಂದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ “ಸಮ್ಮೇಳನಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳು ನಮ್ಮ ಕಲೆ ಸಂಸ್ಕೃತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ” ಎಂದರು.
ಇದೇ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ‘ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಪ್ರಶಸ್ತಿ’ಯನ್ನು ಮಂಜುಳಾ ಜಿ. ರಾವ್ ಇರಾ, ವಿದ್ವಾನ್ ಡಾ. ಬಂದಗದ್ದೆ ನಾಗರಾಜ್, ಪ್ರೊ. ಮಧೂರು ಮೋಹನ ಕಲ್ಲೂರಾಯ, ಡಾ. ಎಸ್.ಪಿ. ಗುರುದಾಸ್, ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಸೇರಾಜೆ ಸೀತಾರಾಮ ಭಟ್ಟ ಇವರುಗಳಿಗೆ ಪ್ರದಾನ ಮಾಡಲಾಯಿತು.
ಸಮ್ಮೇಳನಾಧ್ಯಕ್ಷ ವಿದ್ವಾನ್ ಎಚ್. ಯಜ್ಞೇಶಾಚಾರ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೋಶಾಧಿಕಾರಿ ಚಂದ್ರಿಕಾ ಸುರೇಶ್ ಅಭಿನಂದನಾ ಪತ್ರ ವಾಚಿಸಿದರು. ಕವಿ ಮತ್ತು ವ್ಯಾಖ್ಯಾನಕಾರ ಸೇರಾಜೆ ಸೀತಾರಾಮ ಭಟ್ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಮಂಗಳೂರಿನ ಗಮಕಿ ಯಾಮಿನಿ ಭಟ್ ನಾಂದಿ ಪದ್ಯವನ್ನು ಹಾಡಿದರು. ಗಮಕ ಕಲಾ ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಪ್ರೊ. ಪಿ. ಕೃಷ್ಣಮೂರ್ತಿ ಸ್ವಾಗತಿಸಿದರು. ಮಂಗಳೂರು ಗಮಕ ಕಲಾ ಪರಿಷತ್‌ನ ಅಧ್ಯಕ್ಷ ಸುರೇಶ್ ರಾವ್ ವಂದಿಸಿ, ನಿವೃತ್ತ ಪ್ರಾಧ್ಯಾಪಕ ಮತ್ತು ವ್ಯಾಖ್ಯಾನಕಾರ ಭಾಸ್ಕರ ರೈ ಕುಕ್ಕುವಳ್ಳಿ ನಿರೂಪಿಸಿದರು. ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್, ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಪುತ್ತೂರು ವೇದವ್ಯಾಸ ರಾಮಕುಂಜ, ಮಂಗಳೂರು ತಾಲೂಕಿನ ಅಧ್ಯಕ್ಷ ಸುರೇಶ್ ರಾವ್, ಸಮಿತಿ ಪದಾಧಿಕಾರಿಗಳಾದ ತಲಪಾಡಿಯ ಪ್ರಾಂಶುಪಾಲ ವಿನಾಯಕ್ ಜಿ.ಜೆ., ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ., ಕರ್ನಾಟಕ ಗಮಕ ಕಲಾ ಪರಿಷತ್ತು ಮಂಗಳೂರಿನ ಕಾರ್ಯದರ್ಶಿ ಶುಭಕರ ಕೆ. ಉಪಸ್ಥಿತರಿದ್ದರು. ಸಮ್ಮೇಳನ ಯಶಸ್ಸಿಗೆ ಕಾಲೇಜಿನ ವಿವಿಧ ವಿದ್ಯಾರ್ಥಿ ಘಟಕಗಳು, ಉಪನ್ಯಾಸಕ ವರ್ಗ ಮತ್ತು ಸಿಬಂದಿ ವರ್ಗದವರು ನೆರವಾದರು.
ಸಮ್ಮೇಳನಾಧ್ಯಕ್ಷರ ಸಹಿತ ಗಣ್ಯರನ್ನು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಸಭಾಂಗಣದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಶ್ರೀ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದ ಮೂರ್ತಿ ಐ. ರಮಾನಂದ ಭಟ್ ಆಶೀರ್ವಚನ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ‘ಗಮಕ ಯಕ್ಷ ತರಂಗ’ದಲ್ಲಿ ಲಕ್ಷ್ಮೀಶ ಕವಿ ವಿರಚಿತ ಜೈಮಿನಿ ಭಾರತದ ಪ್ರಸಂಗ ‘ಸೀತಾ ಪರಿತ್ಯಾಗ’ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು.