ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ‘ಸಿನ್ಸ್ 1999 ಶ್ವೇತಯಾನ-43’ ಕಾರ್ಯಕ್ರಮದಡಿಯಲ್ಲಿ ದಿಮ್ಸಾಲ್ ಫಿಲ್ಮ್ಸ್ ಹಾಗೂ ಧಮನಿ ಟ್ರಸ್ಟ್ ಸಹಕಾರದೊಂದಿಗೆ ರಸರಂಗ (ರಿ.) ಕೋಟ ಸಾದರ ಪಡಿಸಿದ ‘ಕಲೆ ಮತ್ತು ಶಿಕ್ಷಣ’ಕ್ಕೆ ಸಂಬಂಧಿಸಿದ ‘ಆಷಾಡದಲ್ಲೊಂದು ಚಿಂತನ – ಮಂಥನ’ ಸಂವಾದ ಕಾರ್ಯಕ್ರಮವು ದಿನಾಂಕ 17-07-2024ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ರಂಗಭೂಮಿಯ ವಿವಿಧ ವಾದ್ಯ ಪರಿಕರವನ್ನು ನುಡಿಸುವ ಮೂಲಕ ಸಂವಾದಕ ಗಣ್ಯರು ಚಾಲನೆ ನೀಡಿದರು. ಸಂವಾದಕ ಗಣ್ಯರ ಪರವಾಗಿ ಶ್ರೀಮತಿ ಅಭಿಲಾಷಾ ಎಸ್. ಮಾತನಾಡಿ “ಶಾಲಾ ಪಠ್ಯ ಪುಸ್ತಕಗಳನ್ನು ರಂಗಭೂಮಿಯಲ್ಲಿ ಅಳವಡಿಸಿದರೆ ಅನುಭವಜನ್ಯ ಚಟುವಟಿಕೆಗಳಾಗುತ್ತದೆ. ಕಲಾ ಮಾಧ್ಯಮವನ್ನು ಶಾಲೆಯಲ್ಲಿ ಚುರುಕುಗೊಳಿಸಿದರೆ ಪಂಚೇಂದ್ರಿಯಗಳಿಗೆ ಕೆಲಸ ಸಿಗುತ್ತದೆ. ಬರೇ ಓದು ಜೀವನವನ್ನು ಕಟ್ಟಿ ಕೊಡದು. ಲಡಾಕ್, ಉತ್ತರಕಾಂಡ ಹಾಗೂ ಕರ್ನಾಟಕಗಳ ಬಗ್ಗೆ ಒಂದಿಷ್ಟು ತಿಳಿಯುವುದಕ್ಕೆ ರಂಗ ಪಠ್ಯಗಳು ಪೂರಕವಾಗುತ್ತದೆ. ಶಿಕ್ಷಣದಲ್ಲಿ ಪ್ರತಿಯೊಂದು ಮಗುವಿಗೂ ಒಂದು ಕಲಾ ಪ್ರಕಾರದಲ್ಲಿ ಆಸಕ್ತಿಯನ್ನು ಹುಟ್ಟಿಸುವ ಕೆಲಸ ಶಿಕ್ಷಕರಿಂದ ಆಗಬೇಕು. ಜೀವನದಲ್ಲಿ ಏಳ್ಗೆಯನ್ನು ಕಂಡುಕೊಳ್ಳಬೇಕಾದರೆ ಮಕ್ಕಳು ಕಲಾ ಪ್ರಕಾರದಲ್ಲಿ ತೊಡಗಿಸಿಕೊಳ್ಳಬೇಕು.” ಎಂದು ಅಭಿಪ್ರಾಯ ಪಟ್ಟರು.
ಸಂವಾದದಲ್ಲಿ ಯಕ್ಷಗಾನ ರಂಗಭೂಮಿಯ ಕುರಿತಾಗಿ ಕೃಷ್ಣಮೂರ್ತಿ ಉರಾಳ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಧಾ ಆಡುಕಳ ಅಭಿಲಾಷಾ ಎಸ್., ನರೇಂದ್ರಕುಮಾರ್ ಕೋಟ, ರಾಘವೇಂದ್ರ ತುಂಗ ಕೋಟ, ರಂಗಭೂಮಿಯ ಕುರಿತಾಗಿ ರಘು ಪಾಂಡೇಶ್ವರ ಹಾಗೂ ಶ್ರೀಷ ತೆಕ್ಕಟ್ಟೆ ಹಾಗೂ ಸಂಪ್ರದಾಯದ ಹಾಡುಗಳ ಕುರಿತಾಗಿ ಜಾನ್ಹವಿ ಹೇರ್ಳೆ ವಿಶ್ಲೇಷಿಸಿದರು. ಸಮನ್ವಯಕಾರರಾಗಿ ಡಾ. ಪ್ರದೀಪ ವಿ. ಸಾಮಗ ಭಾಗವಹಿಸಿದ್ದರು. ಸುಧಾ ಕದ್ರಿಕಟ್ಟು ಕಾರ್ಯಕ್ರಮವನ್ನು ನಿರ್ವಹಿಸಿದರು.