27 ಫೆಬ್ರವರಿ 2023, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ನೀಡುವ ಪ್ರತಿಷ್ಟಿತ “ನೃಪತುಂಗ ಸಾಹಿತ್ಯ ಪ್ರಶಸ್ತಿ”ಗೆ ಲೇಖಕಿ ವೈದೇಹಿ ಅವರನ್ನು ಆಯ್ಕೆ ಮಾಡಲಾಗಿದೆ.
ರೂ.7 ಲಕ್ಷ ನಗದು ಮತ್ತು ಪ್ರಮಾಣಪತ್ರವನ್ನು ಈ ಪ್ರಶಸ್ತಿ ಒಳಗೊಂಡಿದೆ. ವೈದೇಹಿ ಎಂಬ ಕಾವ್ಯನಾಮದಿಂದ ಖ್ಯಾತರಾಗಿರುವ ಜಾನಕಿ ಶ್ರೀನಿವಾಸಮೂರ್ತಿ, ಕನ್ನಡದ ಪ್ರಮುಖ ಲೇಖಕಿಯವರಲ್ಲಿ ಒಬ್ಬರು. ಸಣ್ಣಕತೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ – ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಅವರು ಬರೆದಿದ್ದಾರೆ. ಇವರ ಜೀವಮಾನದ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದಾರೆ.
ಕರ್ನಾಟಕದಲ್ಲೇ ಅತೀ ಹೆಚ್ಚು ನಗದು ಮೊತ್ತ ಒಳಗೊಂಡ ಪ್ರಶಸ್ತಿ ಇದಾಗಿದೆ. ಈ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ಲೇಖಕಿ ಇವರು. 2012ರಲ್ಲಿ ಲೇಖಕಿ ಸಾರಾ ಅಬೂಬಕರ್ ಆಯ್ಕೆಯಾಗಿದ್ದರು .
ಮಯೂರ ವರ್ಮ ಪ್ರಶಸ್ತಿ : ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗೆ ಗದಗ ಜಿಲ್ಲೆಯ ಗಜೇಂದ್ರಗಡದ ಹನುಮಂತ ಸೋಮನಕಟ್ಟೆ, ವಿಜಯನಗರ ಜಿಲ್ಲೆಯ ಕೊಟ್ಟೂರಿನ ಗುಡ್ಡಪ್ಪ ಬೆಟಗೇರಿ, ತುಮಕೂರು ಜಿಲ್ಲೆಯ ಸತ್ಯಮಂಗಲ ಮಹಾದೇವ, ಕಾಸರಗೋಡಿನ ವಿದ್ಯಾರಶ್ಮಿ ಪೆಲ್ಲತ್ತಡ್ಕ, ಹಾಸನ ಜಿಲ್ಲೆಯ ಬೇಲೂರು ರಘುನಂದನ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ರೂ.25 ಸಾವಿರ ನಾಗರು ಒಳಗೊಂಡಿದೆ. 45 ವರ್ಷದೊಳಗಿನ ಪ್ರತಿಭಾವಂತ ಸಾಧಕರಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮಹೇಶ ಜೋಶಿ ವಿವರಿಸಿದ್ದಾರೆ.