ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 05-08-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಸಿಂಚನಾ ಬಾಯರಿ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಕುಮಾರಿ ಸಿಂಚನಾ ಬಾಯರಿ ಇವರು ಉಡುಪಿಯ ಕೊಡಂಕೂರಿನ ಖ್ಯಾತ ಆಯುರ್ವೇದ ತಜ್ಞ ಡಾ. ಟಿ. ಶ್ರೀಧರ ಬಾಯರಿ ಹಾಗೂ ಡಾ. ಅನುಪಮ ಬಾಯರಿ ಇವರ ಸುಪುತ್ರಿ. ಇವಳು ನಾಲ್ಕು ವರ್ಷದ ವಯಸ್ಸಿನಿಂದ ವಿದುಷಿ ಮಾನಸಿ ಸುಧೀರ್ ಹಾಗೂ ವಿದ್ವಾನ್ ಸುಧೀರ್ ರಾವ್ ಕೊಡವೂರು ಅವರ ಮಾರ್ಗದರ್ಶನದಲ್ಲಿ ಭರತನಾಟ್ಯದಲ್ಲಿ ತರಬೇತಿ ಪಡೆಯತ್ತಿದ್ದಾಳೆ. ವಿದ್ವತ್ ಪೂರ್ವ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ್ದು, ಈ ವರ್ಷ ವಿದ್ವತ್ ಅಂತಿಮ ಪರೀಕ್ಷೆಯನ್ನು ಬರೆಯಲಿದ್ದಾಳೆ. ಸುಮಾರು 8 ವರ್ಷದಿಂದ ನೃತ್ಯನಿಕೇತನ ಕೊಡವೂರು ತಂಡದ ಹಲವಾರು ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾಳೆ. ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ ಹಾಗೂ ವಿದುಷಿ ಚೇತನಾ ಆಚಾರ್ಯ ಇವರಲ್ಲಿ ಸಂಗೀತ ತರಬೇತಿ ಪಡೆದಿದ್ದು, ಪ್ರಕಾಶ್ ರಾವ್ ಇವರಲ್ಲಿ ಕೀಬೋರ್ಡ್ ಅಭ್ಯಾಸ ಮಾಡಿರುತ್ತಾಳೆ. ಬೆಂಗಳೂರಿನಲ್ಲಿ ತನ್ನ 13 ವರ್ಷದ ವಯಸ್ಸಿನಲ್ಲಿ ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧೆಯಲ್ಲಿ ಗೆದ್ದು ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಳು. ಕಲಾಂಜಲಿಯ ಮುದ್ರಾ ತಂಡದ ನೃತ್ಯವನ್ನು ನಿರೂಪಿಸಿ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾಳೆ.