ಕಿನ್ನಿಗೋಳಿ : ಯಕ್ಷಗಾನ ಕಲಾವಿದ, ವೇಷಭೂಷಣ ಪ್ರಸಾದನ ಕಲಾ ಪರಿಣತ, ಮೋಹಿನೀ ಕಲಾ ಸಂಪದದ ಸಂಸ್ಥಾಪಕ ಕೀರ್ತಿಶೇಷ ಟಿ. ದಾಮೋದರ ಶೆಟ್ಟಿಗಾರ್ ಇವರ 25ನೇ ವರ್ಷದ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಪ್ರದರ್ಶನವು ದಿನಾಂಕ 11 ಆಗಸ್ಟ್ 2024ರಂದು ಬೆಳಗ್ಗೆ 9-00 ಗಂಟೆಗೆ ಕಿನ್ನಿಗೋಳಿಯ ನೇಕಾರ ಸೌಧ ಸಭಾಭವನದಲ್ಲಿ ನಡೆಯಲಿದೆ.
ಚೌಕಿ ಪೂಜೆಯ ಬಳಿಕ ಶ್ರೀ ಶರತ್ ಕುಡ್ಲ ಇವರ ನಿರ್ದೇಶನದಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. (ದುಬೈ) ತಂಡದವರಿಂದ ಪೂರ್ವರಂಗ, ಬೆಳಿಗ್ಗೆ 9-00 ಗಂಟೆಗೆ ಕೀರ್ತಿಶೇಷ ಶೆಟ್ಟಿಗಾರರ ಮೊಮ್ಮಕ್ಕಳಿಂದ ‘ಚೆಂಡೆ ಪೀಠಿಕೆ ಜುಗಲ್ ಬಂದಿ’ ಪ್ರಸ್ತುತಗೊಳ್ಳಲಿದೆ. ಶ್ರೀಧರ ಡಿ.ಎಸ್. ಕಿನ್ನಿಗೋಳಿ, ಶ್ರೀ ಭುವನಾಭಿರಾಮ ಉಡುಪ, ಶ್ರೀ ಸುನಿಲ್ ಭಟ್, ಶ್ರೀ ಮಾಧವ ಶೆಟ್ಟಿಗಾರ್ ಕೆರೆಕಾಡು, ದಿನೇಶ ಶೆಟ್ಟಿ ಕೊಟ್ಟಿಂಜ, ವಿದುಷಿ ರಶ್ಮಿ ಉಡುಪ ಇವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ‘ಆಳ್ವಾಸ್ ಧೀಂಕಿಟ’ ಯಕ್ಷಗಾನ ಅಧ್ಯಯನ ಕೇಂದ್ರದವರಿಂದ ‘ಚೂಡಾಮಣಿ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇದರ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ‘ಯಕ್ಷ ದಾಮೋದರ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅನುವಂಶಿಕ ಪ್ರದಾನ ಅರ್ಚಕರಾದ ವೇದಮೂರ್ತಿ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಇವರು ಆಶೀರ್ವಚನ ನೀಡಲಿದ್ದಾರೆ. ಶ್ರೀ ಉಮಾನಾಥ ಕೋಟ್ಯಾನ್, ಶ್ರೀ ಕಲ್ಲಾಡಿ ದೇವಿ ಪ್ರಸಾದ ಶೆಟ್ಟಿ, ಶ್ರೀ ರವಿ ಶೆಟ್ಟಿಗಾರ್ ಕಾರ್ಕಳ, ಶ್ರೀ ರಾಮಪ್ರಸಾದ್ ಅಮ್ಮೆನಡ್ಕ, ಶ್ರೀಮತಿ ದೀಪ್ತಿ ಬಾಲಕೃಷ್ಣ ಭಟ್ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಸಮಾಜ ಸೇವಕ ಮತ್ತು ಕಲಾಪೋಷಕರಾದ ಡಾ. ಹರಿಕೃಷ್ಣ ಪುನರೂರು, ಯಕ್ಷಗಾನ ಕಲಾವಿದ ಮತ್ತು ವೇಷಭೂಷಣ ತಯಾರಿ ಪರಿಣತ ಪಡ್ರೆ ಕುಮಾರ, ಖ್ಯಾತ ಬಣ್ಣದ ವೇಷಧಾರಿ ಶ್ರೀ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಖ್ಯಾತ ಕಲಾವಿದ ಶ್ರೀ ಪಿ.ವಿ. ಪರಮೇಶ್ ಮತ್ತು ಪ್ರಖ್ಯಾತ ವೇಷಭೂಷಣ ತಯಾರಿ, ವಿತರಣೆ ಮತ್ತು ಪ್ರಸಾದನ ಸಂಸ್ಥೆ ಲಲಿತ ಕಲಾ ಆರ್ಟ್ಸ್ ಇವರಿಗೆ ‘ಯಕ್ಷ ದಾಮೋದರ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಶ್ರೀ ಶಶಿಧರ ಶೆಟ್ಟಿ ಬರೋಡ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಸ್ಮರಣಾ ಕಾರ್ಯಕ್ರಮದಲ್ಲಿ ವೇದಮೂರ್ತಿ ಶ್ರೀ ವೆಂಕಟ್ರಮಣ ಆಸ್ರಣ್ಣರು ಇವರು ಆಶೀರ್ವಚನ ನೀಡಲಿದ್ದಾರೆ. ಶ್ರೀಮತಿ ಮೀನಾಕ್ಷಿ ರಾಮಚಂದ್ರ, ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ, ಶ್ರೀ ಎಂ. ದೇವಾನಂದ ಭಟ್ ಉಪಸ್ಥಿತಿಯಲ್ಲಿ ಯಕ್ಷಗಾನ ಕಲಾವಿದ ಶ್ರೀ ಸೇರಾಜೆ ಸೀತಾರಾಮ ಭಟ್ ಸಂಸ್ಮರಣೆ ಮಾತುಗಳನ್ನಾಡಲಿದ್ದಾರೆ. ಖ್ಯಾತ ಕಲಾವಿದರಿಂದ ಯಕ್ಷಗಾನ ‘ಕುಂಭಕರ್ಣ’, ‘ರಾವಣವಧೆ’, ‘ವೀರಮಣಿ’ ಮತ್ತು ಕೀರ್ತಿಶೇಷ ಶೆಟ್ಟಿಗಾರರ ಶಿಷ್ಯ ವೃಂದ ಮತ್ತು ಅಭಿಮಾನಿ ಕಲಾವಿದರ ಕೂಡುವಿಕೆಯಿಂದ ‘ರಾಮಾಂಜನೇಯ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.