ಉಡುಪಿ : ಹಿರಿಯ ಲೇಖಕಿ ಡಾ. ಮಹೇಶ್ವರಿ ಯು. ಕಾಸರಗೋಡು ಅವರನ್ನು ಆಯ್ಕೆ ಸಮಿತಿಯು 2024ನೇ ಸಾಲಿನ ‘ಕೇಶವ ಪ್ರಶಸ್ತಿ’ಗೆ ಆಯ್ಕೆ ಮಾಡಿರುವುದಾಗಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ. ಈ ಪ್ರಶಸ್ತಿಯನ್ನು 31 ಆಗಸ್ಟ್ 2024ರಂದು ಬೆಳಿಗ್ಗೆ 10-30 ಗಂಟೆಗೆ ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಇಪ್ಪತ್ತೈದು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ.
ಡಾ. ಮಹೇಶ್ವರಿ ಯು. ಇವರು ಗಂಗಾಧರ ಭಟ್ ಮತ್ತು ಸರಸ್ವತಿ ಅಮ್ಮ ದಂಪತಿಗಳ ಸುಪುತ್ರಿ. ಕಾಸರಗೋಡು ತಾಲೂಕಿನ ಬೇಳ ಗ್ರಾಮದ ಉಳ್ಳೋಡಿ ಇವರ ಹುಟ್ಟೂರು. ಇವರು ಎಂ.ಎ. ಕನ್ನಡ, ಎಂ.ಎ. ಇಂಗ್ಲಿಷ್, ಪಿಎಚ್.ಡಿ ಪದವಿಯನ್ನು ಹೊಂದಿದ್ದು, ಕಾಸರಗೋಡು ಸರಕಾರಿ ಕಾಲೇಜಿನಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ 2014ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಕಣ್ಣೂರು ವಿ.ವಿ.ಯ ಭಾರತೀಯ ಭಾಷಾ ಅಧ್ಯಯನಾಂಗದಲ್ಲಿ ಸಂಯೋಜಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಎಂ.ಫಿಲ್., ಪಿಎಚ್.ಡಿ ಮಾರ್ಗದರ್ಶಕರಾಗಿ ಅನುಭವ ಹೊಂದಿರುವ ಇವರ ‘ಮುಗಿಲ ಹಕ್ಕಿ’ (ಕವನ ಸಂಕಲನ) ‘ಇದು ಮಾನುಷಿಯ ಓದು’, ‘ಮಧುರವೇ ಕಾರಣ’, ‘ಅಟ್ಟುಂಬೊಳದ ಪಟ್ಟಾಂಗ, ‘ಶಬ್ದಸೂರೆ’ ಪ್ರಮುಖ ಕೃತಿಗಳು. ಇವರಿಗೆ ‘ವಾರಂಬಳ್ಳಿ ಪ್ರಶಸ್ತಿ’, ‘ಸಂಕ್ರಮಣ ಕಾವ್ಯ ಪ್ರಶಸ್ತಿ’, ‘ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ’ ಮೊದಲಾದ ಪ್ರಶಸ್ತಿಗಳು ಸಂದಿವೆ. ಅಲ್ಲದೆ ಯು.ಜಿ.ಸಿ. ಪ್ರಾಯೋಜಿತ ಕಿರು ಸಂಶೋಧನಾ ಯೋಜನೆಯನ್ನು ಮುಗಿಸಿದ್ದು, ಇವರ ‘ಗದ್ಯಪದ್ಯ ಬರಹಗಳು’ ಕೇರಳದ ಕನ್ನಡ ಮಾಧ್ಯಮ ತರಗತಿಗೆ ಹಾಗೂ ಮಂಗಳೂರು ವಿ.ವಿ.ಯ ಪದವಿ ತರಗತಿಗಳಿಗೆ ಪಠ್ಯವಾಗಿದೆ.