ಮಂಗಳೂರು : ಯಕ್ಷಗಾನದ ಭೀಷ್ಮ ಎಂದೇ ಖ್ಯಾತರಾದ ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್ ಅವರ ಹೆಸರಿನಲ್ಲಿ ಎರಡು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಟ್ರಸ್ಟ್ ವತಿಯಿಂದ ನೀಡಲಾಗುವ ‘ಶೇಣಿ ಪ್ರಶಸ್ತಿ’ಗೆ ಯಕ್ಷಗಾನ ಹಿರಿಯ ಕಲಾವಿದ ಹಾಗೂ ಸ್ತ್ರೀ ವೇಷಧಾರಿಯಾದ ಪಾತಾಳ ವೆಂಕಟರಮಣ ಭಟ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು 15 ಆಗಸ್ಟ್ 2024ರಂದು ಸಂಜೆ 4.20ಕ್ಕೆ ನಗರದ ಉರ್ವಸ್ಟೋರ್ ಇಲ್ಲಿರುವ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಪ್ರಶಸ್ತಿಯು 30 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಕ. ಸಾ. ಪ. ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉರ್ವಸ್ಟೋರ್ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್ ದೀಪ ಪ್ರಜ್ವಲನ ಮಾಡಲಿರುವರು. ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಮಧುಸೂಧನ ಅಯರ್, ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಯ ಕಾರ್ಯದರ್ಶಿ ಶ್ರೀಧರ ಮಣಿಯಾಣಿ ಅತಿಥಿಗಳಾಗಿ ಭಾಗವಹಿಸುವರು. ಹಿರಿಯ ಅರ್ಥಧಾರಿ ಜಿ. ಕೆ. ಭಟ್ ಸೇರಾಜೆ ಅವರು ಶೇಣಿ ಸಂಸ್ಮರಣೆ ಮತ್ತು ಪಾತಾಳ ಅಭಿನಂದನೆ ಮಾಡಲಿರುವರು.
ಅಂದು ಮಧ್ಯಾಹ್ನ ಘಂಟೆ 2.30ರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಹಿಮ್ಮೇಳದಲ್ಲಿ ದಯಾನಂದ ಕೋಡಿಕಲ್, ವಿಶ್ವೇಶ್ ಶೆಟ್ಟಿ ಬೋಳೂರು, ಶಿವಪ್ರಸಾದ್ ಪ್ರಭು, ಅರ್ಥಧಾರಿಗಳಾಗಿ ಕೆ. ಮಹಾಬಲ ಶೆಟ್ಟಿ, ಜಿ. ಕೆ. ಭಟ್ ಸೇರಾಜೆ, ಸರ್ಪಂಗಳ ಈಶ್ವರ ಭಟ್ ಹಾಗೂ ಗಣರಾಜ ಕುಂಬ್ಳೆ ಭಾಗವಹಿಸಲಿರುವರು.