ಮಂಗಳೂರು : ಜನತಾ ಬಜಾರಿನಲ್ಲಿ ತುಳುಕೂಟದ ನೂತನ ಕಟ್ಟಡ ಕೂಟ ಚಾವಡಿಯ ಉದ್ಘಾಟನಾ ಸಮಾರಂಭವು ದಿನಾಂಕ 18 ಆಗಸ್ಟ್ 2024ರಂದು ಜರಗಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಾನಗರ ಪಾಲಿಕೆಯ ನಾಮ ನಿರ್ದೇಶಿತ ಸದಸ್ಯ ಹೇಮಂತ್ ಗರೋಡಿಯವರು ಮಾತನಾಡಿ “ತುಳು ಭಾಷಾ ಬೆಳವಣಿಗೆಗೆ ನಾವು ಅಗತ್ಯ ಪ್ರಯತ್ನ ಪಡಬೇಕಾಗಿದೆ. ಅಂತೆಯೇ ಅದನ್ನು ಮುಂದಿನ ಪೀಳಿಗೆಗೆ ತಲುಪಿಸಲು ನಾವು ಮಕ್ಕಳಲ್ಲಿ ತುಳುಕಲಿಕಾ ಸ್ಪೂರ್ತಿಯನ್ನೂ ವೃದ್ಧಿಸಬೇಕಾಗಿದೆ. ಹಾಗಾಗಿ ತುಳುಕೂಟದ ಈ ನೂತನ ಕಟ್ಟಡ ಕೂಟ ಚಾವಡಿ ನಿರಂತರ ಕಲಿಕಾ ಕೇಂದ್ರವಾಗಲಿ” ಎಂದು ಹೇಳಿದರು.
ಲೇಖಕಿ – ವಾಗ್ಮಿ, ನಿವೃತ್ತ ಶಿಕ್ಷಕಿ ಕೆ.ಎ. ರೋಹಿಣಿಯವರು “ಮಹಿಳೆಯರು ಕೂಡಾ ತುಳು ಸಾಂಸ್ಕೃತಿಯ ಬಗ್ಗೆ ಎಳೆಯರಿಗೆ ತಿಳಿ ಹೇಳುತ್ತಾ, ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರೆ ತುಳು ಕೂಟದ ಉದ್ದೇಶ ಸಾರ್ಥಕವಾಗುತ್ತದೆ.” ಎಂದು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ತುಳು ಕೂಟದ ಅಧ್ಯಕ್ಷರಾದ ಮರೋಳಿ ಬಿ. ದಾಮೋದರ ನಿಸರ್ಗ ಇವರು ವಹಿಸಿದ್ದರು. ಚಂದ್ರಶೇಖರ ಸುವರ್ಣ, ನಾರಾಯಣ ಬಿ.ಡಿ., ಹೇಮಾ ನಿಸರ್ಗ, ಪಿ. ಗೋಪಾಲಕೃಷ್ಣ, ಸುಜಾತಾ ಸುವರ್ಣ, ಭಾಸ್ಕರ ಕುಲಾಲ್ ಬರ್ಕೆ, ರಮೇಶ್ ಕುಲಾಲ್ ಬಾಯಾರ್, ವಿಶ್ವನಾಥ ಪೂಜಾರಿ ಸೋಣಳಿಕೆ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸಭೆ ನಿರ್ವಹಿಸಿ, ವಂದನಾರ್ಪಣೆಗೈದರು.