ಕಿನ್ನಿಗೋಳಿ: ಹಿರಿಯ ಪತ್ರಕರ್ತ, ಜಾನಪದ ಸಂಶೋಧಕ ಕೆ. ಎಲ್. ಕುಂಡಂತಾಯ ಇವರು ‘ಅನಂತ ಪ್ರಕಾಶ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ.
ನಾಗಾರಾಧನೆ, ದೈವಾರಾಧನೆ, ಸಿರಿ ಆರಾಧನೆ ಅಲ್ಲದೆ ನೂರಾರು ದೇಗುಲಗಳ ಬಗ್ಗೆ ಸಂಶೋಧನ ವಿಶೇಷ ಬರಹಗಳನ್ನು ಪ್ರಕಟಿಸಿದ್ದಾರೆ. ವಿರಾಟ್ ದರ್ಶನ, ಶ್ರೀ ದುರ್ಗಾದರ್ಶನ, ಕಟೀಲು ಶ್ರೀ ದುರ್ಗಾ ದರ್ಶನ, ಅಣಿ ಅರದಲ, ಭಾರ್ಗವರಾಮ, ಮೊದಲಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಯಕ್ಷಗಾನ ಹಾಗೂ ಜಾನಪದ ಕ್ಷೇತ್ರದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಇವರು ಸುಮಾರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಪುರಸ್ಕಾರವು ಕುಂಡಂತಾಯರ ಸಾಹಿತ್ಯ ಸಾಧನೆಗಳ ಕುರಿತಾದ ಪರಿಚಯ ಕೃತಿ ಹಾಗೂ ರೂಪಾಯಿ 10,000 ನಗದನ್ನು ಒಳಗೊಂಡಿದೆ. 1 ಸೆಪ್ಟೆಂಬರ್ 2024ರ ರವಿವಾರ ಕಿನ್ನಿಗೋಳಿಯ ನೇಕಾರ ಸೌಧದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅನಂತ ಪ್ರಕಾಶನ ಸಂಸ್ಥೆಯ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ತಿಳಿಸಿದ್ದಾರೆ.