03 ಫೆಬ್ರವರಿ 2023, ಉಡುಪಿ: ಸಮಾಜದ ಅಂಕುಡೊಂಕು ತಿದ್ದುವ ರಂಗಮಾಧ್ಯಮ: ಅಶೋಕ್ ಕೊಡವೂರು. ರಂಗಮಾಧ್ಯಮ ಅತ್ಯಂತ ಪರಿಣಾಮಕಾರಿಯಾದುದು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ರಂಗಮಾಧ್ಯಮ ಮೂಲಕ ಆಗುತ್ತದೆ ಎಂದು ಉಡುಪಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಜಿ. ಕೊಡವೂರು ಹೇಳಿದರು. ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ-11 ಇದರ ಗುರುವಾರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುಮನಸಾ ಹುಟ್ಟುವಾಗ ಇಷ್ಟು ಎತ್ತರಕ್ಕೆ ಬೆಳೆಯುತ್ತದೆ ಅಂದುಕೊಂಡಿಲ್ಲ. ಇದು ಬರೀ ಕಲಾತಂಡವಲ್ಲ. ಎಲ್ಲ ರಂಗದಲ್ಲಿಯೂ ಬದ್ಧತೆಯಿಂದ ಕೆಲಸ ಮಾಡುವ ಅತ್ಯಂತ ಶಿಸ್ತುಬದ್ಧ ತಂಡ ಇದು ಎಂದು ಶ್ಲಾಘಿಸಿದರು. ಒಮ್ಮೆ ನೋಡಿದ ಸಿನಿಮಾವನ್ನು ಮತ್ತೆ ಮತ್ತೆ ನೋಡಲಾಗುವುದಿಲ್ಲ. ಯಾಕೆಂದರೆ ಅದೇ ದೃಶ್ಯಗಳಿರುತ್ತವೆ. ಆದರೆ ನಾಟಕ ಪ್ರತಿಬಾರಿಯೂ ಹೊಸತನದಿಂದ ಹೊಸಬಗೆಯ ನಟನೆಯಿಂದ ಕೂಡಿರುತ್ತದೆ ಎಂದು ವಿಶ್ಲೇಷಿಸಿದರು.
ಪಾಂಬೂರು ಪರಿಚಯ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಕಾಶ್ ನೊರೊನ್ಹಾ ಮಾತನಾಡಿ, ರಂಗಚಟುವಟಿಕೆ ಅಂದರೆ ಚಟವಲ್ಲ, ಹವ್ಯಾಸವಲ್ಲ. ಅದು ಸಾಮಾಜಿಕ ಬದ್ಧತೆ ಇರುವ ಕಾರ್ಯ ಎಂದು ಹೇಳಿದರು. ಚಟದಿಂದ ಸುಖ ಸಿಗಬಹುದು. ಆದರೆ ಆರೋಗ್ಯ ಹಾಳಾಗುತ್ತದೆ. ಸಮಯ ಕಳೆಯಲು, ಜನರಿಗೆ ಮನರಂಜನೆ ನೀಡಲು ರಂಗಭೂಮಿ ಇರುವುದಲ್ಲ. ರಂಗಭೂಮಿ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಕೆಲಸಗಳಾಗಬೇಕು. ಅಂಥ ಕೆಲಸವನ್ನು ಸುಮನಸಾ ಕೊಡವೂರು ಮಾಡುತ್ತಾ ಬಂದಿದೆ. ಜನರ ಅತಃಪ್ರಜ್ಞೆಯನ್ನು ಬಡಿದೆಬ್ಬಿಸುವ ನಾಟಕಗಳನ್ನು ಇಲ್ಲಿ ಪ್ರದರ್ಶಿಸುತ್ತಾ ಬಂದಿದೆ ಎಂದರು.
ನೂತನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಗಣೇಶ್ ಶೇರಿಗಾರ್ ಮಾತನಾಡಿ, ಸತತ ಏಳುದಿನಗಳ ಕಾಲ ನಾಟಕ ಆಯೋಜಿಸುವುದು ಬಹಳ ಕಷ್ಟದ ಕೆಲಸ. ಆದರೆ ಸುಮನಸಾ ಚೊಕ್ಕವಾಗಿ ಮಾಡುತ್ತಾ ಬಂದಿದೆ ಎಂದು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ನವೀನ್ ಅಮೀನ್ ಮಾತನಾಡಿ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸುಮನಸಾವು ಪರಿಪಕ್ಷ, ಪರಿಪೂರ್ಣ ಸಂಸ್ಥೆ ಇದು. ಈ ಸಂಘಟನೆಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂದು ಹಾರೈಸಿದರು. ರಂಗನಿರ್ದೇಶಕ ವಿದ್ದು ಉಚ್ಚಿಲ್ ಅವರನ್ನು ರಂಗಸನ್ಮಾನ ನೀಡಿ ಗೌರವಿಸಲಾಯಿತು. ಕಲ್ಯಾಣಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್ ನಾಯ್ಕ್, ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಜೊತೆ ಕಾರ್ಯದರ್ಶಿ ಗಣೇಶ್ ಸಗ್ರಿ, ಜಗದೀಶ್ ಚನ್ನಂಗಡಿ ಉಪಸ್ಥಿತರಿದ್ದರು. ದಿವಾಕರ ಕಟೀಲ್ ಸ್ವಾಗತಿಸಿದರು. ಪ್ರಥಮ್ ಪಾಲನ್ ವಂದಿಸಿದರು. ಎಂ.ಎಸ್. ಭಟ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರು ರುದ್ರ ಥೇಟರ್ ಕಲಾವಿದರಿಂದ ಶೂದ್ರ ಶಿವ ನಾಟಕ ಪ್ರದರ್ಶನಗೊಂಡಿತು.
ಮಾರ್ಚ್ 02, ಗುರುವಾರ – ಶೂದ್ರ ಶಿವ – ಕನ್ನಡ ನಾಟಕ
ತಂಡ: ರುದ್ರ ಥೇಟರ್, ಮಂಗಳೂರು (ಬ್ರಹ್ಮಶ್ರೀ ನಾರಾಯಣ ಗುರು ತತ್ವ ಸಿದ್ದಾಂತದ ಪರಿಕಲ್ಪನೆ) ಪರಿಕಲ್ಪನೆ-ನಿರ್ದೇಶನ: ವಿದ್ದು ಉಚ್ಚಿಲ್