ಮಂಗಳೂರು : ಕರಾವಳಿ ಲೇಖಕಿಯರ ವಾಚಕಿಯರ ಸಂಘದ ವತಿಯಿಂದ ಡಾ. ಕೆ.ವಿ. ಜಲಜಾಕ್ಷಿ ಸಂಸ್ಮರಣ ಕಾರ್ಯಕ್ರಮವು ಉರ್ವಸ್ಟೋರ್ ನ ಸಾಹಿತ್ಯ ಸದನದಲ್ಲಿ ದಿನಾಂಕ 24 ಆಗಸ್ಟ್ 2024ರಂದು ನಡೆಯಿತು.
ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮನುಷ್ಯ ಜನ್ಮದ ಕ್ಷಣಿಕತೆ ಹಾಗೂ ನಶ್ವರತೆಗಳನ್ನು ತಿಳಿಸುತ್ತಾ ಇಂತಹ ಸಂಸ್ಮರಣ ಕಾರ್ಯಕ್ರಮಗಳು ದೇಹ ಅಳಿದರೂ ಖ್ಯಾತಿ ಅಮರವೆಂಬಂತೆ ಮಾನವರಿಗೆ ಮರುಜನ್ಮ ನೀಡುತ್ತವೆ ಎಂದು ಹೇಳಿದರು.
ಡಾ. ಕೆ.ವಿ. ಜಲಜಾಕ್ಷಿಯವರ ಪತಿ ಹಾಗೂ ಕಾರ್ಯಕ್ರಮದ ಪ್ರಮುಖ ರೂವಾರಿ ಡಾ. ವಿ.ಜಿ. ಭಟ್ ಇವರು ಪ್ರಾಸ್ತಾವಿಕ ಭಾಷಣ ಮಾಡಿ ಜಲಜಾಕ್ಷಿಯವರ ಬಹುಮುಖ ಪ್ರತಿಭೆಯ ಜೀವನವನ್ನು ಕೊಂಡಾಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ಸೋಮಣ್ಣರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಡಾ. ಜಲಜಾಕ್ಷಿಯವರ ಸಾಹಿತ್ಯ ಸೇವೆ ಹಾಗೂ ವೃತ್ತಿ ನಿಷ್ಠೆಯನ್ನು ಶ್ಲಾಘಿಸಿದರು. “ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಅತೀ ಅಗತ್ಯ. ಡಾ. ಜಲಜಾಕ್ಷಿಯವರು ಕೆಲವು ವರ್ಷಗಳ ಹಿಂದೆಯೇ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದರು.” ಎಂದು ಹೇಳಿದರು.
ಸುರತ್ಕಲ್ ನ ಪ್ರಗತಿಪರ ಉದ್ಯಮಿ ಶ್ರೀಮತಿ ಸುಪ್ರಭಾ ರಾವ್ ಇವರು ಸಂಸ್ಮರಣ ಭಾಷಣ ಮಾಡಿದರು. ಈ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕಥಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಡಾ. ಜ್ಯೋತಿ ಚೇಳ್ಯಾಯ್ರ, ಶ್ರೀಮತಿ ದೇವಿಕಾ ನಾಗೇಶ್, ಶ್ರೀ ಮುಸ್ತಾಫಾರವರು ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು. ಲೇಖಕಿ ಶ್ರೀಮತಿ ದೇವಿಕಾ ನಾಗೇಶ್ ರವರು ತೀರ್ಪುಗಾರರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಜಲಜಾಕ್ಷಿಯವರ ಸಂಬಂಧಿಕರಾದ ಶ್ರೀ ಜಗನ್ನಾಥ್ ರವರು ಮಾತನಾಡಿ “ಜಲಜಾಕ್ಷಿಯವರ ಜೀವನಾದರ್ಶಗಳೇ ಅವರನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ.” ಎಂದರು.
ಕಥಾ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಮ್. ಸ್ನಾತಕೋತ್ತರ ಕಾಲೇಜಿನ ವಿದ್ಯಾರ್ಥಿ ಸಂಜಯ್ ಪ್ರಥಮ ಬಹುಮಾನ, ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಜ್ಯೋತಿ ಲಕ್ಷ್ಮೀ ದ್ವಿತೀಯ ಬಹುಮಾನ ಹಾಗೂ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾನಿಲಯ ಎಳ್ಳೂರು ಇಲ್ಲಿಯ ಪ್ರಥಮ ಬಿ.ಎಡ್. ವಿದ್ಯಾರ್ಥಿನಿ ಅನುಷಾ ತೃತೀಯ ಬಹುಮಾನವನ್ನು ಪಡೆದರು. ಮಂಗಳೂರಿನ ಮ್ಯಾಪ್ಸ್ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ತನಿಷ್ಕಾ ವಿಶೇಷ ಬಹುಮಾನ ಹಾಗೂ ಇನ್ನಿತರ ಏಳು ಮಂದಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ಕೃಷ್ಣವೇಣಿಯವರು ಆಶಯಗೀತೆ ಹಾಡಿದರು. ಸಂಘದ ಉಪಾಧ್ಯಕ್ಷೆ ಡಾ. ಅರುಣಾ ನಾಗರಾಜ್ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಶ್ರೀಮತಿ ಯಶೋದಾ ಮೋಹನ್ ಕಾರ್ಯಕ್ರಮವನ್ನು ನಿರೂಪಿಸಿ, ಕೋಶಾಧ್ಯಕ್ಷೆ ಶ್ರೀಮತಿ ಮೋಲಿ ಮಿರಾಂದಾ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಡಾ. ವಿ.ಜಿ. ಭಟ್ ಇವರ ಅನೇಕ ಬಂಧುಗಳು ಉಪಸ್ಥಿತರಿದ್ದರು.