ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲೂಕು ಘಟಕದ ವತಿಯಿಂದ ದಿನಾಂಕ 3 ಸೆಪ್ಟೆಂಬರ್ 2024ರಂದು ಡಾ. ಎ.ವಿ. ಬಾಳಿಗ ಆಸ್ಪತ್ರೆ ಸಭಾಂಗಣದಲ್ಲಿ ‘ಮನೆಯೇ ಗ್ರಂಥಾಲಯ’ ಅಭಿಯಾನದ ಶತ ಸಂಭ್ರಮ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರಿಸಿದ ಖ್ಯಾತ ಸಾಹಿತಿ ಡಾ. ಬಿ. ಜನಾರ್ದನ ಭಟ್ ಇವರು ಮಾತನಾಡಿ “ಪುಸ್ತಕ ನೀಡುವ ಬೌದ್ಧಿಕ ಸತ್ಯದ ದರ್ಶನ ಯಾವುದೇ ಮಾಧ್ಯಮಗಳು ನೀಡಲು ಸಾಧ್ಯವಿಲ್ಲ. ಪುಸ್ತಕದಿಂದ ಬದುಕು ಬದಲಾಗಲು ಸಾಧ್ಯ. ಪುಸ್ತಕ ಓದುವ ಅಭ್ಯಾಸ ಇತ್ತೀಚಿಗಿನ ಶಿಕ್ಷಣ ಕ್ರಮದಿಂದ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕ.ಸಾ.ಪ.ದ ಈ ಕಾರ್ಯಕ್ರಮ ಶ್ಲಾಘನೀಯ. ವಿದೇಶದಲ್ಲಿ ಯಾವುದೇ ಪುಸ್ತಕವನ್ನು ಡಿಜಿಟಲ್ ಮಾಧ್ಯಮದ ಮೂಲಕ ಕ್ಷಣಾರ್ಧದಲ್ಲಿ ಪಡೆಯುವ ವ್ಯವಸ್ಥೆ ಇದೆ. ಇದು ಕನ್ನಡದಲ್ಲಿ ಕೂಡ ನಡೆಯಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ವಹಿಸಿ “ಮಾನಸಿಕ ಒತ್ತಡ ಕಡಿಮೆ ಮಾಡಲು ಪುಸ್ತಕ ಅತ್ಯುತ್ತಮ ಸಾಧನ” ಎಂದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ ಶೆಣೈಯವರು ನೂತನ ಗ್ರಂಥಾಲಯವನ್ನು ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಶಂಕರ್, ಮನೋರೋಗ ತಜ್ಞ ಡಾ. ವಿರೂಪಾಕ್ಷ ದೇವರಮನೆ, ಕ.ಸಾ.ಪ. ಉಡುಪಿ ಜಿಲ್ಲಾ ಸಹಕಾರ್ಯದರ್ಶಿ ಮೋಹನ್ ಉಡುಪ ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ‘ಮನೆಯೇ ಗ್ರಂಥಾಲಯ’ ಅಭಿಯಾನದ ಸಂಚಾಲಕರಾದ ರಾಘವೇಂದ್ರ ಪ್ರಭು ಕರ್ವಾಲು ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಕ.ಸಾ.ಪ. ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಸದಸ್ಯರಾದ ಭುವನ ಪ್ರಸಾದ್ ಹೆಗ್ಡೆ, ಡಾ. ನರೇಂದ್ರ ಕುಮಾರ್, ದೀಪ ಚಂದ್ರಶೇಖರ್, ಹಫೀಸ್ ರೆಹಮಾನ್, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ಉರಗತಜ್ಞ ಗುರುರಾಜ್ ಸನಿಲ್ ಮತ್ತಿತರರು ಉಪಸ್ಥಿತರಿದ್ದರು. ಕ.ಸಾ.ಪ. ಉಡುಪಿ ತಾಲೂಕು ಅಧ್ಯಕ್ಷರಾದ ರವಿರಾಜ್ ಎಚ್.ಪಿ. ಸ್ವಾಗತಿಸಿ, ಆಶಯ ಮಾತುಗಳನ್ನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ, ಸೌಮ್ಯ ಧನ್ಯವಾದ ಅರ್ಪಿಸಿದರು.