ಮುಂಬೈ : ಮುಲುಂಡ್ ಪಶ್ಚಿಮದ ಆರ್ಟ್ ಆಫ್ ಲಿವಿಂಗ್ ಸಭಾಂಗಣದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ 23ನೇ ವರ್ಷದ ಸರಣಿ ತಾಳಮದ್ದಳೆಯ ಸಮಾರೋಪ ಸಮಾರಂಭವು 01 ಸೆಪ್ಟೆಂಬರ್ 2024ರಂದು ಜರಗಿತು. ಕಾರ್ಯಕ್ರಮದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ತಂಡದ ಎಲ್ಲಾ ಕಲಾವಿದರನ್ನು ಮುಲುಂಡ್ ಬಂಟ್ಸ್ ವತಿಯಿಂದ ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಲುಂಡ್ ಬಂಟ್ಸ್ ಇದರ ಅಧ್ಯಕ್ಷರಾದ ಸಿ.ಎ. ಕರುಣಾಕರ ಶೆಟ್ಟಿ ಮಾತನಾಡಿ “ಕರಾವಳಿಯ ಶ್ರೀಮಂತ ಕಲೆ ಯಕ್ಷಗಾನವಿಂದು ಮಹಾನಗರ ಮುಂಬೈಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಇದಕ್ಕೆ ಪ್ರತಿವರ್ಷವೂ ತವರೂರಿಂದ ಬಂದು ಬಯಲಾಟ ಮತ್ತು ತಾಳಮದ್ದಳೆಗಳ ಮೂಲಕ ನಮ್ಮನ್ನು ರಂಜಿಸುವ ಹೆಸರಾಂತ ಯಕ್ಷಗಾನ ಕಲಾವಿದರೇ ಮುಖ್ಯ ಕಾರಣವಾಗಿದ್ದಾರೆ. ಆದರೆ ಅವರನ್ನು ಕರೆತಂದು ಮುಂಬೈಯಲ್ಲಿ ಯಕ್ಷಗಾನ ಹವಾ ಮೂಡಿಸಿದ ಬಲುದೊಡ್ಡ ಕೀರ್ತಿ ಅಜೆಕಾರು ಬಾಲಕೃಷ್ಣ ಶೆಟ್ಟರಂತಹ ಕಲಾಸಂಘಟಕರಿಗೆ ಸಲ್ಲುತ್ತದೆ” ಎಂದು ಹೇಳಿದರು.
ತವರೂರ ಹಿರಿಯ ಅರ್ಥಧಾರಿ ಮತ್ತು ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ “ಕಳೆದ ಎರಡು ದಶಕಗಳಿಂದ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ವರ್ಷಂಪ್ರತಿ ಎರಡು ತಂಡಗಳಾಗಿ ಮುಂಬೈ ನಗರದ ಉದ್ದಗಲಕ್ಕೆ ಜರಗುವ ತಾಳಮದ್ದಳೆ ಕಾರ್ಯಕ್ರಮಗಳು ಹಾಗೂ ವಿವಿಧ ಮೇಳಗಳ ಪ್ರಸಿದ್ಧ ವೃತ್ತಿ ಕಲಾವಿದರನ್ನು ಸಂಯೋಜಿಸಿ ನೀಡಲಾಗುವ ಯಕ್ಷಗಾನ ಬಯಲಾಟಗಳಿಗೆ ಮುಂಬೈಯ ಜನತೆ ಅವಿಸ್ಮರಣೀಯವಾದ ಸಹಕಾರವನ್ನು ನೀಡುತ್ತಿರುವುದು ತಾಯ್ನಾಡಿನ ಕಲಾವಿದರಿಗೆ ಧನ್ಯತೆಯನ್ನು ತಂದುಕೊಟ್ಟಿದೆ. ಅದರಲ್ಲೂ ಮುಲುಂಡ್ ಬಂಟ್ಸ್ ಆರಂಭದಿಂದಲೂ ಪ್ರತಿ ವರ್ಷ ಶಿಸ್ತುಬದ್ಧವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ” ಎಂದರು. ಮುಂಬೈ ಮಹಾನಗರದ ಎಲ್ಲಾ ಸಂಘಟಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಅಜೆಕಾರು ಕಲಾಭಿಮಾನಿ ಬಳಗ ಮತ್ತು ಕಲಾವಿದರ ಪರವಾಗಿ ಅವರು ಕೃತಜ್ಞತೆ ಸಲ್ಲಿಸಿದರು.
ಮುಲುಂಡ್ ಬಂಟ್ಸ್ ಅಧ್ಯಕ್ಷರಾದ ಸಿ.ಎ. ಕರುಣಾಕರ ಶೆಟ್ಟಿ ಮತ್ತು ಪದಾಧಿಕಾರಿಗಳಿಗೆ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಪುಷ್ಪಗುಚ್ಛ ನೀಡಿ ಗೌರವಿಸಿದರು. ವಿಶ್ವಸ್ಥರಾದ ಎಸ್.ಬಿ. ಶೆಟ್ಟಿ, ಉಪಾಧ್ಯಕ್ಷ ಕೃಷ್ಣ ಪ್ರಸಾದ ಶೆಟ್ಟಿ, ಕೋಶಾಧಿಕಾರಿ ಸಿ.ಎ. ಗಣೇಶ ಶೆಟ್ಟಿ, ಜೊತೆ ಕೋಶಾಧಿಕಾರಿ ಉದಯ ಶೆಟ್ಟಿ ಯಚ್., ಜೊತೆ ಕಾರ್ಯದರ್ಶಿಗಳಾದ ಸುರೇಶ ಶೆಟ್ಟಿ ಕಡಂದಲೆ ಮತ್ತು ಶೇಖರ ಶೆಟ್ಟಿ ಕಡಂದಲೆ, ಮಹಿಳಾ ವಿಭಾಗದ ಅಧ್ಯಕ್ಷೆ ಆರತಿ ವೈ. ಶೆಟ್ಟಿ, ಉಪಾಧ್ಯಕ್ಷೆ ಶಶಿಪ್ರಭಾ ಕೆ. ಶೆಟ್ಟಿ, ಕೋಶಾಧಿಕಾರಿ ಪ್ರತಿಭಾ ಶೆಟ್ಟಿ, ಜೊತೆ ಕಾರ್ಯದರ್ಶಿ ಪೂರ್ಣಿಮ ಶೆಟ್ಟಿ ಅಲ್ಲದೆ ಸಮಿತಿಯ ಹರ್ಷವರ್ಧನ ಶೆಟ್ಟಿ, ಯೋಗೇಶ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
ಸಭೆಯ ಬಳಿಕ ಸರಣಿಯ ಕೊನೆಯ ತಾಳಮದ್ದಳೆ ‘ಭೀಷ್ಮ-ಪರಶುರಾಮ’ (ಕನ್ನಡ) ‘ತುಳುನಾಡ ಬಲೀಂದ್ರೆ’ (ತುಳು)’ ಜರಗಿತು. ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ, ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು ಭಾಗವಹಿಸಿದ್ದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ಬಲಿ), ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ಪರಶುರಾಮ), ದಿನೇಶ್ ಶೆಟ್ಟಿ ಕಾವಳಕಟ್ಟೆ (ಭೀಷ್ಮ), ಸದಾಶಿವ ಆಳ್ವ ತಲಪಾಡಿ (ವಾಮನ), ಗುರುತೇಜ ಶೆಟ್ಟಿ ಒಡಿಯೂರು (ಶುಕ್ರಾಚಾರ್ಯ) ಅರ್ಥಧಾರಿಗಳಾಗಿದ್ದರು.