ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 09-09-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ನೃತ್ಯನಿಕೇತನದ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಕಳೆದ 35 ವರುಷಗಳಿಂದ ಉಡುಪಿಯ ಕೊಡವೂರಿನಲ್ಲಿ ನೃತ್ಯನಿಕೇತನ ಕೊಡವೂರು ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಉಡುಪಿಯ ಸುತ್ತಮುತ್ತಲಿನ 7 ಶಾಖೆಗಳ ಮುಖಾಂತರ ಅನೇಕ ನೃತ್ಯ ವಿದ್ಯಾರ್ಥಿಗಳ ನೃತ್ಯತೃಷೆಯನ್ನು ನೀಗಿಸುತ್ತಿದೆ. ಈ ಸಂಸ್ಥೆಯ ಗುರುಗಳಾಗಿ ಕಲಾದಂಪತಿಗಳಾದ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ಇವರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಷದ ಎಲ್ಲಾ ಋತುವಿನಲ್ಲಿ ಚಟುವಟಿಕೆಗಳಿಂದ ಇರುವ ಈ ಸಂಸ್ಥೆಯ ಕಲಾವಿದರು ಈಗಾಗಲೇ ದೇಶವಿದೇಶಗಳಲ್ಲಿ ಸುಮಾರು 3000ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಪ್ರಯೋಗಶೀಲ ನೃತ್ಯಗಳನ್ನು ನೃತ್ಯರೂಪಕಗಳನ್ನು ಕಲಾಭಿಮಾನಿಗಳಿಗೆ ನೀಡಿದ್ದಾರೆ. ಸಂಸ್ಥೆಯ ವತಿಯಿಂದ ಈಗಾಗಲೇ ರಾಜ್ಯದಾದ್ಯಂತದ ಉದಯೋನ್ಮುಖ ಯುವ ನೃತ್ಯಕಲಾವಿದರಿಗಾಗಿ ನೃತ್ಯಸೌರಭ, ನೃತ್ಯಕೌಸ್ತುಭ, ನೃತ್ಯಚಾವಡಿ, ನೃತ್ಯಕುಸುಮ, ನೃತ್ಯವಸಂತ ಮುಂತಾದ ಕಾರ್ಯಕ್ರಮದ ಮುಖಾಂತರ ವೇದಿಕೆ ನೀಡಿ ಪ್ರಸ್ತುತ ನೃತ್ಯಶಂಕರ ಎನ್ನುವ ವೇದಿಕೆಯ ಮುಖಾಂತರ ಮತ್ತೆ ಪ್ರತೀ ಸೋಮವಾರ ಕೊಡವೂರಿನಲ್ಲಿ ವೇದಿಕೆ ನೀಡುತ್ತಿದೆ. ನೃತ್ಯಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನೃತ್ಯವಾತ್ಸಲ್ಯದ ಮುಖಾಂತರ ಅನೇಕ ವೃದ್ಧಾಶ್ರಮ, ಅನಾಥಾಶ್ರಮ, ವಿಶೇಷ ಚೇತನರ ಶಾಲೆಗಳಿಗೆ ಉಚಿತವಾಗಿ ನೃತ್ಯಪ್ರದರ್ಶನ ನೀಡುವುದಲ್ಲದೇ ಸಮಾಜದಲ್ಲಿ ಆರೋಗ್ಯ ತೊಂದರೆ ಇರುವವರಿಗೆ, ನೊಂದವರಿಗೆ ಸಹಾಯಹಸ್ತವನ್ನೂ ನೀಡಿರುವ ಸಂಸ್ಥೆಯಾಗಿದೆ.