ಬೆಳಗಾವಿ : ಬೆಳಗಾವಿಯ ಸಮಾಚಾರ ಸೇವಾ ಸಂಘ ಹಾಗೂ ಸಮಾಚಾರ ದಿನಪತ್ರಿಕೆ ಸೇವಾ ಬಳಗ ಗೋಕಾಕ ಇದರ ಸಹಯೋಗದಲ್ಲಿ ಸಾಮಾಜಿಕ, ಶಿಕ್ಷಣ. ಸಾಹಿತ್ಯ ಹಾಗೂ ವಿವಿಧ ಕಲೆಗಳನ್ನಾಧರಿಸಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಶಿಕ್ಷಕ ದಿನಾಚರಣೆಯ ನಿಮಿತ್ತ ದಿನಾಂಕ 08 ಸೆಪ್ಟೆಂಬರ್ 2024ರ ಭಾನುವಾರದಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವಾಸವಾಗಿರುವ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿ ಇವರ ವೈದ್ಯಕೀಯ ಹಾಗೂ ಸಾಹಿತ್ಯ ಸೇವೆಯನ್ನು ಗುರುತಿಸಿ ‘ಜೀವಮಾನದ ಸಾಧನೆಯ ರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕೊಳಚಪ್ಪೆ ಗೋವಿಂದ ಭಟ್ಟ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಈಶ್ವರ ಮಮದಾಪೂರ, ಸಂಯೋಜಕ ಬಸವರಾಜ ಉಪ್ಪಾರಟ್ಟಿ ಸಹಿತ ಹಲವಾರು ಗಣ್ಯರು ಭಾಗವಹಿಸಿದ್ದರು.
ಡಾ. ಸುರೇಶ ನೆಗಳಗುಳಿ ಇವರು ಬಂಟ್ವಾಳ ತಾಲೂಕಿನ ನೆಗಳಗುಳಿ ಮೂಲದವರಾಗಿದ್ದು, ಮೂವತ್ತೈದು ವರ್ಷಗಳಿಂದ ವೈದ್ಯಕೀಯ ಶಿಕ್ಷಕ, ಪ್ರಾಚಾರ್ಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತುಷಾರ ಮಾಸಪತ್ರಿಕೆಯಲ್ಲಿ ನೂರಾರು ಚಿತ್ರಕವನಗಳಿಗೆ ಬಹುಮಾನ ಪಡೆದ ಇವರು ಮುಕ್ತಕ, ಗಜಲ್ ಸಹಿತ ಹದಿನಾಲ್ಕು ಕೃತಿಗಳನ್ನು ಲೋಕಾರ್ಪಣೆ ಮಾಡಿ, 2022ರ ಬಂಟ್ವಾಳ ತಾಲೂಕಿನಲ್ಲಿ ನಡೆದ ಕ. ಸಾ. ಪ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನೂ ವಹಿಸಿರುತ್ತಾರೆ.