ಕುಂಬಳೆ : ತೆಂಕುತಿಟ್ಟು ಯಕ್ಷಗಾನದ ತವರೂರು ಕುಂಬಳೆಯ ಕಣಿಪುರ ಕ್ಷೇತ್ರದಲ್ಲಿ ದಿನಾಂಕ 29 ಸೆಪ್ಟೆಂಬರ್ 2024ರಂದು ಇಡೀ ದಿನ ವಿಶೇಷ ಭಜನಾ ಕಮ್ಮಟ ಜರುಗಲಿದೆ. ಕನ್ನಡದ ಖ್ಯಾತ ಗಾಯಕ ಶ್ರೀ ಶಂಕರ್ ಶ್ಯಾನುಭೋಗ್ ಸಾರಥ್ಯದಲ್ಲಿ ಜರಗುವ ಕಮ್ಮಟವನ್ನು ಕಾಸರಗೋಡಿನ ಜನಪ್ರಿಯ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿಯ ಸಹ ಸಂಸ್ಥೆಗಳಾದ ನಾರಿ ಚಿನ್ನಾರಿ ಮತ್ತು ಸ್ವರ ಚಿನ್ನಾರಿ ಆಯೋಜಿಸಿದೆ.
ಕನ್ನಡದ ಖ್ಯಾತ ಗಾಯಕ ಶ್ರೀ ಶಂಕರ್ ಶ್ಯಾನುಭೋಗ್ ನೇತೃತ್ವದಲ್ಲಿ ನಡೆಯುವ ಭಕ್ತಿರಸ ಕಾರ್ಯಾಗಾರವು ಭಜನೆ, ಭಾವಗೀತೆ ಕಲಿಕೆಗೆ ಸೀಮಿತವಾಗಿದ್ದು. ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜರುಗಲಿದೆ. ಕನ್ನಡನಾಡಿನ ದಾಸ ಪರಂಪರೆಯ ಗಾಯನ ಮತ್ತು ಭಾವಗೀತೆಗಳನ್ನು ವಿನೂತನ ಧಾಟಿಯಲ್ಲಿ ಕಲಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ. ಇದರಲ್ಲಿ ಪಾಲ್ಗೊಳ್ಳುವವರಿಗೆ ಹಾಡುವುದಕ್ಕಿಂತ ಭಿನ್ನವಾಗಿ ಹೊಸ ರಾಗ, ಶೈಲಿ ಕಲಿಯುವ ಅವಕಾಶ ಒದಗಲಿದೆ.
ಬೆಳಿಗ್ಗೆ ಉದ್ಘಾಟನೆಗೊಂಡು ಸಂಜೆ 4ರ ತನಕ ನಡೆಯುವ ‘ಭಕ್ತಿರಸ’ ಗಾಯನ ಕಲಿಕಾ ಕಮ್ಮಟದಲ್ಲಿ ಕುಂಬಳೆ ಸಮೀಪದ ಸುಮಾರು 500 ಭಜನಾರ್ಥಿಗಳು ಪಾಲ್ಗೊಳ್ಳುವುದನ್ನು ಕಣಿಪುರ ಕ್ಷೇತ್ರದಲ್ಲಿ ನಡೆದ ಭಜಕರ ಸಿದ್ದತಾ ಸಭೆಯಲ್ಲಿ ನಿರ್ಣಯಿಸಿ ಖಚಿತಪಡಿಸಲಾಯಿತು. ಸಮಾರಂಭದ ಸಮಾರೋಪ ಸಭೆಯಲ್ಲಿ ನಾಡಿನ ಅತ್ಯಂತ ಹಿರಿಯ ಭಜನಾರ್ಥಿಗಳನ್ನು ಅನ್ವೇಷಿಸಿ, ಗುರುತಿಸಿ ನಗದು ಸಹಿತ ಗೌರವ ಸನ್ಮಾನ ನೀಡಲು ನಿರ್ಣಯಿಸಲಾಯಿತು.
ರಂಗಚಿನ್ನಾರಿ (ರಿ) ಸಂಸ್ಥೆಯ ಸಂಚಾಲಕ, ರಂಗಕರ್ಮಿ ಕಾಸರಗೋಡು ಚಿನ್ನಾ ಆಶಯ ಮಂಡಿಸಿ ಭಕ್ತಿರಸ ಯೋಜನೆಯ ಪ್ರಸ್ತಾಪ ಮಾಡಿದರು. ಹರಿದಾಸ, ಕಲಾರತ್ನ ಶಂ.ನಾ. ಅಡಿಗ ಕುಂಬಳೆ ಅಧ್ಯಕ್ಷತೆ ವಹಿಸಿ ಇದನ್ನು ಕುಂಬಳೆಯ ನೆಲದ ಕಾರ್ಯಕ್ರಮವಾಗಿ ಯಶಸ್ವಿಗೊಳಿಸಬೇಕು ಮತ್ತು ಕುಂಬಳೆಯ ಪ್ರತಿಯೊಬ್ಬ ಧಾರ್ಮಿಕ ಬಂಧುವೂ ಪಾಲ್ಗೊಳ್ಳುವಂತಾಗಬೇಕೆಂದು ವಿನಂತಿಸಿದರು. ಸಿದ್ದತಾ ಸಭೆಯಲ್ಲಿ ಪ್ರಾದೇಶಿಕ ಸಂಘಟನಾ ಸಮಿತಿ ಅಧ್ಯಕ್ಷ ಸುಧಾಕರ ಕಾಮತ್ ಕುಂಬಳೆ, ಉಪಾಧ್ಯಕ್ಷ ಸತೀಶ್ ನಾಯ್ಕಾಪು, ಕಾರ್ಯದರ್ಶಿ ಮಧುಸೂಧನ ಕಾಮತ್ ಹಾಗೂ ಊರ ಪ್ರಮುಖರು ಕುಂಬಳೆ ಸಮೀಪದ ಭಜನಾ ತರಬೇತುದಾರರು, ಭಜನಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವ ಶಿಬಿರಾರ್ಥಿಗಳು ತಮ್ಮ ಹೆಸರನ್ನು ಆದಷ್ಟು ಬೇಗನೆ
ಶ್ರೀ ಸತೀಶ್ ನಾಯ್ಕಾಪು 9995712070
ಶ್ರೀಮತಿ ಪ್ರೇಮಾ ಶೆಟ್ಟಿ 9037284743
ಶ್ರೀ ಮಧುಸೂಧನ ಕಾಮತ್ 9447380970
ಇವರಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಶ್ರೀ ಕಾಸರಗೋಡು ಚಿನ್ನಾ ತಿಳಿಸಿರುತ್ತಾರೆ.