ಮಂಗಳೂರು : ಯಕ್ಷಗಾನದ ಖ್ಯಾತ ಸ್ತ್ರೀ ಪಾತ್ರಧಾರಿಗಳಾದ ಸಂಜಯ ಕುಮಾರ್ ಶೆಟ್ಟಿ ಇವರ ಯಕ್ಷಗಾನ ರಂಗಪ್ರವೇಶದ 50ನೇ ವರ್ಷದ ಸಂಭ್ರಮ ‘ಸಂಜಯ 50’ ಕಾರ್ಯಕ್ರಮವು ದಿನಾಂಕ 15 ಸೆಪ್ಟೆಂಬರ್ 2024ರಂದು ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರಾದ ವೇ. ಮೂ. ಶ್ರೀ ಲಕ್ಮೀನಾರಾಯಣ ಆಸ್ರಣ್ಣ ಮಾತನಾಡಿ “ಕಲೆಯ ಆರಾಧಕರು ಕಲಾವಿದರು. ಆ ಕಾರಣಕ್ಕಾಗಿ ಅದು ಅವರಿಗೆ ಒಲಿಯುತ್ತದೆ. ಆ ಮೂಲಕ ಕಲಾವಿದ ಪ್ರಕಾಶಕ್ಕೆ ಬಂದು ಬೆಳಗುತ್ತಾನೆ. ಗೋಣಿಬೀಡಿಂದ ಬಂದ ಸಂಜಯ ಕುಮಾರ್ ಯಕ್ಷಗಾನವನ್ನು ಪ್ರೀತಿಸುತ್ತಾ, ಕಟೀಲಮ್ಮನನ್ನು ಆರಾಧಿಸುತ್ತಾ ಯಕ್ಷ ಕಣ್ಮಣಿಯಾದರು. ಅವರ ಕಲಾಯಾನದ 50ರ ವರ್ಷಪೂರ್ತಿಯ ಕಾರ್ಯಕ್ರಮಗಳು ನೂರಾರು ನಡೆದು ಅವರಿಗೆ ಕಟೀಲ ಉಳ್ಳಾಲ್ದಿ ವರವಾಗಿ ಹರಸಲಿ” ಎಂದು ಹರಿಸಿದರು.
ಕ. ಸಾ. ಪ. ಇದರ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ “ಸಂಜಯ ಕುಮಾರ್ ಇವರಂತಹ ಕಲಾವಿದರು ಮಾತು ಕಡಿತ ಮಾಡಿ ಉತ್ತಮ ಸಾಧನೆ ಮಾಡಿ ಸಾಧಕರಾಗಿದ್ದಾರೆ. ಅವರಿಗೆ ಎಲ್ಲರ ಬೆಂಬಲವಿರಲಿ.” ಎಂದರು.
ಆದಾನಿ ಗ್ರೂಪಿ ಇದರ ಶ್ರೀ ಕಿಶೋರ್ ಆಳ್ವ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಯುಗಪುರುಷ ಕಿನ್ನಿಗೋಳಿ ಇದರ ಭುವನಾಭಿರಾಮ ಉಡುಪ, ನ್ಯಾಯವಾದಿ ಶ್ರೀ ಮೋಹನ್ ದಾಸ್ ರೈ ಹಾಗೂ ಭಾ. ಜ. ಪ. ಇದರ ಮಾಜಿ ಜಿಲ್ಲಾಧ್ಯಕ್ಷರಾದ ಎಂ. ಸಂದರ್ಶನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಮತ್ತು ತಂಡದಿಂದ ಯಕ್ಷಗಾನದ ಸಾಂಪ್ರದಾಯಿಕ ಪ್ರಾರ್ಥನೆ ಜರಗಿತು. ಯಕ್ಷಗರು ವರ್ಕಾಡಿ ರವಿ ಅಲೆವೂರಾಯ ನಿರೂಪಿಸಿದರು. ಶ್ರೀ ಅಕ್ಷಯ ಸುವರ್ಣ ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಕಲಾವಿದರಿಂದ ‘ದೇವೆರೆಗ್ ಅರ್ಪಣೆ’ ತುಳು ಯಕ್ಷಗಾನ ಪ್ರದರ್ಶನಗೊಂಡಿತು.