ದೆಹಲಿ : ಕಲಾಭಿ (ರಿ.) ತಂಡದಿಂದ ಕೆನರಾ ಕಲ್ಚರಲ್ ಅಕಾಡೆಮಿಯ ಸಹಯೋಗದೊಂದಿಗೆ ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಕೆನರಾ ಸಿ.ಬಿ.ಎಸ್.ಇ. ಶಾಲೆಯ ಶ್ರೀ ಭುವನೇಂದ್ರ ಸಭಾಂಗಣದಲ್ಲಿ ಶ್ರವಣ್ ಹೆಗ್ಗೋಡು ಇವರ ನಿರ್ದೇಶನ ಹಾಗೂ ಪರಿಕಲ್ಪನೆಯಲ್ಲಿ ಮೂಡಿಬಂದ ‘ಪುರ್ಸನ ಪುಗ್ಗೆ’ ಅನ್ನುವ ಜಪಾನ್ ಮೂಲದ ಬುನ್ರಾಕು ಬೊಂಬೆಯಾಟವು ಪ್ರದರ್ಶನಗೊಂಡಿತು. ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಈ ಪ್ರದರ್ಶನವು ಉತ್ತಮ ಪ್ರಶಂಸೆಯನ್ನು ಪಡೆದುಕೊಂಡಿದ್ದು, ದಿನಾಂಕ 28 ಸೆಪ್ಟೆಂಬರ್ 2024ರಂದು ತಂಡವು ಈ ‘ಪುರ್ಸನ ಪುಗ್ಗೆ’ ಬೊಂಬೆಯಾಟವನ್ನು ದೆಹಲಿಯ ಶಾದಿಪುರ್ ನಾಟಕ ಉತ್ಸವದಲ್ಲಿ ಪ್ರದರ್ಶಿಸಲಿದೆ. ರಾಷ್ಟ್ರೀಯ ಮಟ್ಟದ ಈ ಉತ್ಸವದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಎರಡು ತಂಡಗಳಲ್ಲಿ ಕಲಾಭಿ ತಂಡವೂ ಒಂದಾಗಿದೆ ಎನ್ನುವುದು ಹೆಮ್ಮೆಯ ವಿಷಯವಾಗಿದ್ದು, ಈ ತಂಡಕ್ಕೆ ಹಾಗೂ ತಂಡದ ಎಲ್ಲಾ ಕಲಾವಿದರಿಗೂ ಜನತೆಯ ಪ್ರೋತ್ಸಾಹವಿರಬೇಕು ಎನ್ನುವುದು ಕಲಾಭಿ (ರಿ.) ಇದರ ಕಳಕಳಿಯಾಗಿದೆ.
ಬುನ್ರಾಕು ಗೊಂಬೆಯಾಟ : ಜಪಾನಿನ ಬುನ್ರಾಕು ಮಾದರಿಯಲ್ಲಿ ನಿರ್ಜೀವ ಗೊಂಬೆಗಳಿಗೆ ರಂಗದ ಮೇಲೆ ಜೀವ-ಭಾವ ತುಂಬುವುದನ್ನು ಕರಗತ ಮಾಡಿಕೊಂಡಿರುವ ಇವರು, ಈ ನವೀನ ಮಾದರಿಯ ಪ್ರಯೋಗವನ್ನು ದಕ್ಷಿಣ ಭಾರತದ ರಂಗಭೂಮಿಗೆ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಅಳವಡಿಸಿದ್ದಾರೆ. “ರೆಕ್ಸ್ ಅವರ್ಸ್”, “ಸರ್ಕಲ್ ಆಫ್ ಲೈಫ್”, “ಪ್ಲಾಸ್ಟಿಸಿಟಿ”, “ಹಕ್ಕಿ ಕಥೆ”, “ಬೈರ”, “ಎ ಬಾಯ್ ಎಂಡ್ ದ ಬಲೂನ್” ಮುಂತಾದವುಗಳು ಶ್ರವಣ್ ನಿದೇರ್ಶನದ ಪ್ರಮುಖ ನಾಟಕಗಳು, ನಾಟಕಗಳಿಗನುಸಾರ ಮತ್ತು ಅದರ ಕಥಾವಸ್ತುವಿಗನುಸಾರ ಬೊಂಬೆಗಳನ್ನು ಮತ್ತು ರಂಗಸಜ್ಜಿಕೆ ಪರಿಕರಗಳನ್ನು ವಿನ್ಯಾಸಗೊಳಿಸಿ ಸ್ವತಃ ತಯಾರು ಮಾಡಿ ಪ್ರಯೋಗಿಸುವುದು ಇವರ ನಾಟಕದ ವಿಶೇಷತೆಯಾಗಿದೆ.
ನಾಟಕಕಾರ : ಫ್ರೆಂಚ್ ಬರಹಗಾರ ಮತ್ತು ಮಕ್ಕಳ ಚಲನಚಿತ್ರ ನಿರ್ದೇಶಕ ಆಲ್ಬರ್ಟ್ ಲೆಮೊರಿಸ್ಸೆನ ಸಣ್ಣಕಥೆಯೊಂದನ್ನು ಆಧರಿಸಿ ಪ್ರಸ್ತುತ ಪ್ರಯೋಗವನ್ನು ಕಟ್ಟಿಕೊಳ್ಳಲಾಗಿದೆ. ತನ್ನ ಸಹಪಾಠಿಗಳ ಉಪಟಳದಿಂದ ಬೇಸತ್ತು ಸರಳ ಸ್ನೇಹಕ್ಕೆ ಹಾತೊರೆಯುತ್ತಿರುವ ಅರೇಳು ವರ್ಷಗಳ ಬಾಲಕ ಪುರ್ಸನಿಗೆ ಅನಿರೀಕ್ಷಿತವಾಗಿ ವಿಶೇಷವಾದ ಪುಗ್ಗೆಯೊಂದು ದೊರಕುತ್ತದೆ. ಪುಗ್ಗೆ ಮತ್ತು ಪುರ್ಸನ ನಡುವೆ ಅನಿರ್ವಚನೀಯ ಸಂಬಂಧವೊಂದು ಏರ್ಪಡುತ್ತದೆ. ಬೇರೆ ಯಾರ ಕೈಗೂ ಸಿಗದೇ ಪುರ್ಸನೊಂದಿಗೆ ಮಾತ್ರ ಎಲ್ಲೆಡೆ ತಿರುಗಾಡುವ ಪುಗ್ಗೆಯನ್ನು ಕಂಡು ಅಸೂಯೆಯಿಂದ ಕೆಲ ಪೊಲೀ ಹುಡುಗರು ಪುರ್ಸ ಹಾಗೂ ಪುಗ್ಗೆಯ ಬೆನ್ನು ಹತ್ತುತ್ತಾರೆ. ಪುಗ್ಗೆಯನ್ನು ಒಡೆದು ಹಾಕಲು ಹವಣಿಸುತ್ತಾರೆ. ಆದರೆ ಇಡೀ ಪಟ್ಟಣದ ಎಲ್ಲಾ ಪುಗ್ಗೆಗಳು ಒಟ್ಟಾಗಿ ಬಂದು ಪುರ್ಸನನ್ನು ಸಂತೈಸುವ ವಿಶಿಷ್ಟ ದೃಶ್ಯದೊಂದಿಗೆ ತೆರೆ ಬೀಳುತ್ತದೆ.
ಕಲಾಭಿ ಥಿಯೇಟರ್ : ಇದು ಕಲಾಭಿಮಾನಿಗಳ ಕಲಾಭಿವ್ಯಕ್ತಿ, ಕಲೆಯ ಅಪ್ರಕಟಿತ ಸಮ್ಮೋಹಕ ಸೌಂದರ್ಯವನ್ನು ಹಂಚುವುದು ನಮ್ಮ ಧ್ಯೇಯ. ನಮ್ಮ ಈ ಕಲ್ಪನೆಗಳ ತುಡಿತಕ್ಕೆ ನಿಮ್ಮ ಅಸ್ವಾದನೆಗಳ ಮಿಡಿತವೇ ನಮಗೆ ಆಶೀರ್ವಾದ. ಈ ಹಾದಿಯಲ್ಲಿ ನಾವಿಡುವ ಪ್ರತಿಹೆಜ್ಜೆಯೂ ನಮಗೆ ಕಲಿಕೆ. ಇದು ನಮ್ಮ ಚಿಕ್ಕ ಕುಟುಂಬ, ದೊಡ್ಡ ಕನಸು ಮತ್ತು ಅರ್ಥಪೂರ್ಣ ಪಾಠಶಾಲೆ.
ನಿರ್ದೇಶಕರು : ಶ್ರವಣ ಹೆಗ್ಗೋಡು ಭಾರತೀಯ ರಂಗಭೂಮಿಯಲ್ಲಿ ತನ್ನದೇ ಆದ ವಿನೂತನ ರಂಗಶೈಲಿಯ ಮೂಲಕ ಗುರುತಿಸಿಕೊಂಡ ಸೃಜನಶೀಲ ನಿರ್ದೇಶಕ. ನಿನಾಸಮ್ ಪದವಿ ಪಡೆದ ನಂತರ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಬೆಂಗಳೂರು ಇಲ್ಲಿ ರಂಗವಿನ್ಯಾಸದ ಮೇಲೆ ವಿಶೇಷ ಅಧ್ಯಯನ ಮಾಡಿರುತ್ತಾರೆ. ಇವರು ನಿದೇಶಿಸಿದ ಪಪ್ಪೆಟ್ ನಾಟಕಗಳು ಟರ್ಕಿ, ಚೀನಾ, ಜಮರ್ನಿ, ಅಸ್ಟ್ರಿಯಾ ದೇಶಗಳ ಪ್ರತಿಷ್ಠಿತ ಪಪ್ಪೆಟ್ ರಂಗ ಉತ್ಸವಗಳಲ್ಲಿ ಪ್ರದರ್ಶನಗೊಂಡು ಜನಮೆಚ್ಚುಗೆ ಗಳಿಸಿವೆ.