ಹಂಗಾರಕಟ್ಟೆ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಗುಂಡ್ಮಿ ಸಹಯೋಗದೊಂದಿಗೆ ಆಯೋಜಿಸಿದ ಯಕ್ಷಗಾನ ಬಣ್ಣಗಾರಿಕೆ ಮತ್ತು ವೇಷಗಾರಿಕೆ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ದಿನಾಂಕ 14 ಸೆಪ್ಟೆಂಬರ್ 2024ರಂದು ಸಾಲಿಗ್ರಾಮದಲ್ಲಿರುವ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ “ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹಮ್ಮಿಕೊಳ್ಳುತ್ತಿರುವ ಪೂರಕ ಕಾರ್ಯಕ್ರಮಗಳು ಪ್ರಶಂಸನೀಯ.” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಮಕ್ಕಳಿಗೆ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಮೂಡಿಸಿ ಭವಿಷ್ಯದ ಕಲಾವಿದರು ಹಾಗೂ ಕಲಾಪ್ರೇಮಿಗಳನ್ನು ರೂಪುಗೊಳಿಸಬೇಕು ಎನ್ನುವುದು ಅಕಾಡಮಿಯ ಆಶಯ. ಈ ನಿಟ್ಟಿನಲ್ಲಿ ಯಕ್ಷಗಾನದ ವೇಷಭೂಷಣಗಳು ಹಾಗೂ ಬಣ್ಣಗಾರಿಕೆ ಬಗ್ಗೆ ಮಕ್ಕಳಿಗೆ ಮತ್ತು ಕಲಾಸಕ್ತರಿಗೆ ಅರಿವು ಮೂಡಿಸಲು ಇಂಥ ಕಾಯಾಗಾರ ಆಯೋಜಿಸಲಾಗುತ್ತಿದೆ.” ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ ಎನ್. ಅಭ್ಯಾಗತರಾಗಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಗಣೇಶ್ ಚೇರ್ಕಾಡಿ, ಗಣೇಶ್ ಜನ್ನಾಡಿ, ಮಿಥುನ್ ಬ್ರಹ್ಮಾವರ, ವೈಕುಂಠ ಹೇರ್ಳೆ, ಅಶೋಕ್ ಆಚಾರ್, ಕೂರಾಡಿ ರಾಮ ಬಾಯರಿ, ಶ್ರೀಕಾಂತ ವಡ್ಡರ್ಸೆ, ಸೀತಾರಾಮ ಸೋಮಯಾಜಿ ಹಾಗೂ ವಿಭವನ್ ಗುಂಡ್ಮಿ ಸಹಕರಿಸಿದರು. ಯಕ್ಷಗಾನ ಕೇಂದ್ರದ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್ ಸ್ವಾಗತಿಸಿದರು.