ಮಂಗಳೂರು : ಕಲ್ಕೂರ ಪ್ರತಿಷ್ಠಾನ ಹಾಗೂ ಕಾರಂತ ಹುಟ್ಟುಹಬ್ಬ ಆಚರಣಾ ಸಮಿತಿ 2024ನೇ ಸಾಲಿನ ‘ಕಾರಂತ ಪ್ರಶಸ್ತಿ’ಗೆ ಬಹುಶ್ರುತ ವಿದ್ವಾಂಸ ಎಂ. ಪ್ರಭಾಕರ ಜೋಶಿ ಅವರನ್ನು ಆಯ್ಕೆ ಮಾಡಿದೆ. ಅಕ್ಟೋಬರ್ 10ರಂದು ಮಂಗಳೂರಿನಲ್ಲಿ ಜರಗಲಿರುವ ಡಾ. ಕೋಟ ಶಿವರಾಮ ಕಾರಂತರ ಜನ್ಮ ದಿನೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.
ಎಂ. ಪ್ರಭಾಕರ ಜೋಶಿ:
ಯಕ್ಷಗಾನ ಕ್ಷೇತ್ರದಲ್ಲಿ ಬಹುಮುಖ್ಯ ಸಾಧನೆಗೈದಿರುವ ಡಾ. ಪ್ರಭಾಕರ ಜೋಷಿ ಅವರು ಕರ್ನಾಟಕದ ಬಹುಶ್ರುತ ವಿದ್ವಾಂಸರು. ಕಲಾವಿದ, ಸಂಶೋಧಕ, ಯಕ್ಷಗಾನ ಕೋಶದ ನಿರ್ಮಾಪಕ, ವಿಮರ್ಶಕ, ಸಂಪನ್ಮೂಲ ವ್ಯಕ್ತಿಯಾಗಿ ಅವರದ್ದು ಅಚ್ಚಳಿಯದ ಛಾಪು. 1946ರಲ್ಲಿ ಕಾರ್ಕಳ ತಾಲ್ಲೂಕಿನ ಮಾಳದಲ್ಲಿ ಜನಿಸಿದ ಪ್ರಭಾಕರಜೋಷಿ ಅವರದ್ದು ಸಾಹಿತ್ಯಿಕ-ಕಲಾಕುಟುಂಬ. ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯ-ಸಂಸ್ಕೃತಿ ಪ್ರೀತಿ. ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ, ಹಿಂದಿ ಸಾಹಿತ್ಯ ರತ್ನ ಮತ್ತು ಯಕ್ಷಗಾನದಲ್ಲಿ ಪಿ. ಎಚ್. ಡಿ. ಪದವಿ ಪಡೆದಿರುವ ಇವರು ಮೂರು ದಶಕಗಳ ಕಾಲ ವಾಣಿಜ್ಯ ಪ್ರಾಧ್ಯಾಪಕರಾಗಿ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ, ಸಂಸ್ಕೃತ, ಮರಾಠಿ, ತುಳು, ಕೊಂಕಣಿ ಸೇರಿದಂತೆ ಬಹುಭಾಷಾ ಜ್ಞಾನಿಯಾಗಿರುವ ಇವರು ಬಹುಮುಖ್ಯವಾಗಿ ಯಕ್ಷಗಾನ ತಾಳಮದ್ದಳೆ ರಂಗದ ಸಮರ್ಥ ಅರ್ಥಧಾರಿ. ಭಾಷೆ-ಭಾವ–ವಿಚಾರಯುಕ್ತ ಅರ್ಥಗಾರಿಕೆಗೆ ಹೆಸರುವಾಸಿ. ಹತ್ತಕ್ಕೂ ಹೆಚ್ಚು ಕೃತಿಗಳ ಲೇಖಕ ಹಾಗೂ ಯಕ್ಷಗಾನ ಪ್ರಸಂಗಗಳ ವಿಮರ್ಶೆಯಲ್ಲಿ ಪ್ರಖರ ಹಿಡಿತ ಇವರದ್ದು. ಸಂಶೋಧಕ, ಸಂಘಟಕ, ಸಂಪನ್ಮೂಲ ವ್ಯಕ್ತಿಯಾಗಿಯೂ ನಿರಂತರ ಸೇವೆ ಸಲ್ಲಿಸಿರುವ ಇವರು ಯಕ್ಷಗಾನ ಪಾರಿಭಾಷಿಕ ಕೋಶದ ನಿರ್ಮಾತೃ. ಉತ್ತಮ ಉಪನ್ಯಾಸಕಾರ ಹಾಗೂ ಸಮನ್ವಯಕಾರರೂ ಆಗಿರುವ ಡಾ. ಪ್ರಭಾಕರ ಜೋಷಿಯವರು ನಾಲ್ಕು ದಶಕಗಳಿಂದಲೂ ದಕ್ಕಿದ ಹತ್ತಾರು ಪ್ರಶಸ್ತಿಗಳಿಗೂ ಮೀರಿದ ಮೇರು ಪ್ರತಿಭೆ.