ಮಡಿಕೇರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಚೇರಂಬಾಣೆಯ ಬೇಂಗ್ ನಾಡು ಕೊಡವ ಸಮಾಜ ಸಹಕಾರದಲ್ಲಿ ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ 157ನೇ ಜನ್ಮದಿನದ ಪ್ರಯುಕ್ತ ‘ಕೊಡವ ಸಾಹಿತ್ಯ ನಾಳ್’ ಕಾರ್ಯಕ್ರಮ ದಿನಾಂಕ 27 ಸೆಪ್ಟೆಂಬರ್ 2024ರಂದು ಮಡಿಕೇರಿಯ ಚೇರಂಬಾಣೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಪ್ಪಚ್ಚ ಕವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ವೀರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ “ಕೊಡವ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಬೆಳವಣಿಗೆಯಲ್ಲಿ ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ ಶ್ರಮ ಮಹತ್ತರವಾಗಿದೆ. ಕೊಡವ ಸಾಹಿತ್ಯ ಬೆಳವಣಿಗೆಯಲ್ಲಿ ಇಂದಿನ ಮಕ್ಕಳು ಮನಸ್ಸು ಮಾಡಬೇಕಿದೆ. ಅಪ್ಪಚ್ಚ ಕವಿಯ ಆಶೋತ್ತರಗಳನ್ನು ಉಳಿಸಿ ಬೆಳೆಸುವಲ್ಲಿ ಕೊಡವ ಭಾಷಿಕರೆಲ್ಲರೂ ಒಂದುಗೂಡಬೇಕಿದೆ. ಕೊಡವ ಭಾಷಿಕರೆಲ್ಲರೂ ಒಟ್ಟುಗೂಡಿದಾಗ ಕೊಡವ ಸಂಸ್ಕೃತಿ, ಆಚಾರ, ವಿಚಾರಗಳು, ಸಾಹಿತ್ಯ ಉಳಿಸಿ ಬೆಳೆಸಲು ಸಾಧ್ಯ. ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಉಳಿದರೆ ಮಾತ್ರ ಕೊಡವ ಭಾಷಿಕ ಜನಾಂಗ ಉಳಿಯಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.” ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯೆ ಸುಜಾ ಕುಶಾಲಪ್ಪ ಮಾತನಾಡಿ “ಕೊಡವ ಸಂಸ್ಕೃತಿ, ಸಾಹಿತ್ಯ, ಕಲೆಗಳು ಇಡೀ ದೇಶದಲ್ಲಿಯೇ ಮಾದರಿಯಾಗಿದೆ. ಕೊಡಗಿನ ಪರಿಸರಕ್ಕೆ ಪೂರಕವಾಗಿರುವಂತೆ ಕೊಡವ ಸಂಸ್ಕೃತಿ ಮತ್ತು ಕಲೆಯನ್ನು ಎಲ್ಲೆಡೆಯೂ ಪಸರಿಸುವಂತಾಗಬೇಕು.” ಎಂದು ಪ್ರತಿಪಾದಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ “ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಗೆ ಜಿಲ್ಲೆಯ ಎಲ್ಲೆಡೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.” ಎಂದರು.
ಪ್ರಮುಖರಾದ ಪಟ್ಟಮಾಡ ಮಿಲನ್ ಮುತ್ತಣ್ಣ, ಬಾಚರಣಿಯಂಡ ದಿನೇಶ್, ಗಣಪತಿ, ನಾಪಂಡ ಗಣೇಶ್, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಪುತ್ತರೀರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನಾ ಭೋಜಣ್ಣ, ಕೊಂಡಿಜಮ್ಮನ ಎಂ. ಬಾಲಕೃಷ್ಣ, ಪೊನ್ನಿರ ಯು. ಗಗನ್, ಕುಡಿಯರ ಎಂ. ಕಾವೇರಪ್ಪ, ನಾಯಂದಿರ ಆರ್.ಶಿವಾಜಿ, ಚೆಪ್ಪುಡಿರ ಎಸ್. ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ಅಜ್ಜಿಕುಟ್ಟಿರ ಸಿ. ಗಿರೀಶ್ ಇತರರು ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ಬಳಿಕ ‘ವ್ಯಾಲಿಡ್ಯೂ’ ತಂಡದವರಿಂದ ಬೊಳಕಾಟ್, ಕತ್ತಿಯಾಟ್, ಚೌರಿಯಾಟ್ ಹಾಗೂ ರಾಜರಾಜೇಶ್ವರಿ ಶಾಲಾ ಮಕ್ಕಳಿಂದ ಕೋಲಾಟ್ ಪ್ರದರ್ಶನ ನಡೆಯಿತು. ತೇಲಪಂಡ ಲಕ್ಷ್ಮೀ ಮತ್ತು ಕುಚ್ಚಟಿರ ಕುಮಾರಿ ಪ್ರಾರ್ಥಿಸಿ, ನಳಿನಿ ಮತ್ತು ಪ್ರಮೀಳಾ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಚೇರಂಬಾಣೆ ಪಟ್ಟಣದ ಮುಖ್ಯ ರಸ್ತೆಯಿಂದ ಕೊಡವ ಸಮಾಜದ ಸಭಾಂಗಣದವರೆಗೆ ಕೊಡವ ಸಾಂಸ್ಕೃತಿಕ ಕಲರವ ಕಂಡುಬಂದಿತು.