ಪೈವಳಿಕೆ : ಕವಿಗಳ ಸೃಜನಶೀಲತೆಗೆ ಪ್ರೋತ್ಸಾಹ ನೀಡಲು ಮತ್ತು ಹೊಸ ತಲೆಮಾರಿನ ಬರಹಗಾರರನ್ನು ಉತ್ತೇಜಿಸಲು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕವು ಆರಂಭಿಸಿದ ವಿನೂತನ ಕಾರ್ಯಕ್ರಮ ‘ಕವಿತಾ ಕೌತುಕ’ ಸರಣಿ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 29 ಸೆಪ್ಟೆಂಬರ್ 2024ರಂದು ಪೊಸಡಿ ಗುಂಪೆಯ ನಿಸರ್ಗಧಾಮದಲ್ಲಿ ನಡೆಯಿತು.
ನಿಸರ್ಗಧಾಮದ ಮಾಧವ ಇವರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಕೆ.ಎ.ಎಂ. ಅನ್ಸಾರಿ, ಥೋಮಸ್ ಡಿ’ಸೋಜಾ, ವನಜಾಕ್ಷಿ ಪಿ. ಚೆಂಬ್ರಕಾನ, ಸೌಮ್ಯಾ ಪ್ರವೀಣ್, ಹರ್ಷಿತಾ ಎಸ್. ಶಾಂತಿಮೂಲೆ, ವಿದ್ಯಾಶ್ರೀ ಜೆ. ಕವನವಾಚನ ಮಾಡಿದರು.
ಜೋನ್ ಡಿ’ಸೋಜಾ, ರವಿಲೋಚನ ಸಿ.ಎಚ್., ರಾಮಚಂದ್ರಭಟ್ ಪಿ., ಇಂದಿರಾ ರವಿ ಬೆಂಗಳೂರು, ಶ್ರೀಧರ ಕುಂಜತ್ತೂರು, ಮಾಲತಿ ಕಣ್ಣನ್, ರವೀಂದ್ರನಾಥ ಪಾವಲ್ಕೋಡಿ, ಚಂದ್ರಾವತಿ ದಾಮೋದರ, ಶ್ರೀರಾಮ ಭಟ್ ಭಾಗವಹಿಸಿದ ಕವಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಪ್ರೊ. ಪಿ.ಎನ್. ಮೂಡಿತ್ತಾಯ ಸಮಾರೋಪ ಭಾಷಣ ಮಾಡಿದರು. ಬೆಂಗಳೂರು ಶಂಪಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಪ್ರಮೀಳಾ ಮಾಧವ ಸ್ವಾಗತಿಸಿ, ಕ.ಸಾ.ಪ. ಸಂಘಟನ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ನಿರೂಪಿಸಿ, ವಂದಿಸಿದರು.