ವಿಜಯಪುರ : ಬಿಜಾಪುರದ ಕಂದಗಲ್ಲ ಹನಮಂತರಾಯ ರಂಗಮಂದಿರದಲ್ಲಿ ನೂರಾರು ಕಂಠಗಳಲ್ಲಿ ಹಲಗೆ ಬಡಿತದ ಸದ್ದು ಮೀರಿ ಹೋರಾಟದ ಹಾಡುಗಳು ರಿಂಗಣಿಸುತ್ತಿದ್ದವು. ಅಲ್ಲಿದ್ದ ಮೈಸೂರಿನ ಗೆಳೆಯ ಜನ್ನಿ ಇವರಿಗೆ ಪಕ್ಕನೆ ನೆನಪಾಗಿದ್ದು 1974ರ ದ.ಲೇ.ಕ. ಸಮಾವೇಶ (ದಲಿತ ಲೇಖಕರ ಕಲಾವಿದರ ಸಮಾವೇಶ) ನಾವೇ ಮರೆತ ನಮ್ಮದೇ ಚರಿತ್ರೆಯನ್ನು ಮರುಕಳಿಸಿದ ‘ಜನಕಲಾ ಸಾಂಸ್ಕೃತಿಕ ಮೇಳ’ ನಿಜಕ್ಕೂ ಇದೊಂದು ಐತಿಹಾಸಿಕ ಸಮಾವೇಶ. ಕಳೆದ ಐವತ್ತು ವರ್ಷಗಳಿಂದ ನಾನು ಅನೇಕ ಸಮಾವೇಶ/ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಈ ಮೇಳಕ್ಕೆ ಇರುವ ತಾಕತ್ತು ಬೇರೆ ಎಂದರು.
ಪ್ರಗತಿಪರ ಅಕ್ಷರ ಯಜಮಾನಿಕೆ ನಿರ್ಲಕ್ಷ್ಯ ಮಾಡಿದ ಸಮುದಾಯ ಪ್ರತಿನಿಧಿಗಳಾಗಿದ್ದ ಓದು ಬರದ ಐದು ಹಿರಿಯ ಮಹಿಳೆಯರಲ್ಲಿ ಕೆಲವರ ಕೈಗಳು ನಡುಗುತ್ತಿದ್ದರೂ ಅವರ ದನಿಗಳಲ್ಲಿ ನಡುಕವಿರಲಿಲ್ಲ. ಎಂಥ ದನಿ, ತಮ್ಮ ಎದೆಗಳಲ್ಲಿ ಹುದುಗಿರುವ ಅಂಬೇಡ್ಕರ್ ರನ್ನು ಹಾಡಾಗಿಸುತ್ತಿದ್ದರು. ಅವರೆಷ್ಟು ಪ್ರತಿಭಾವಂತರೆಂದರೆ ಹೋರಾಟದ ಹಾಡು ಹಾಡುತ್ತಲೇ ಐವತ್ತು ವರ್ಷ ಕಳೆದವರು ಎಂದರು ಗೆಳೆಯ ಜನ್ನಿ. ಈ ನಾಡಿಗೆ ಇವರ ದನಿಗಳನ್ನು ಪರಿಚಯಿಸುವ ಕೆಲಸ ಇನ್ನಾದರೂ ಆಗಬೇಕು. ಅವರನ್ನು ಪರಿಚಯಿಸಿ ಈ ‘ಜನಕಲಾ ಸಾಂಸ್ಕೃತಿಕ ಮೇಳ’ ಉತ್ತಮ ಕೆಲಸ ಮಾಡಿದೆ ಎಂದು ಭಾವುಕರಾದರು. ಸಮಾವೇಶ ಉದ್ಘಾಟಿಸಿ ಬಿಜಾಪುರ ಜಿಲ್ಲೆಯ ಹಳ್ಳಿಗಾಡಿನ ಐವರು ಸೇರಿ ಸಾಮೂಹಿಕವಾಗಿ ಭೀಮನ ಹಾಡು ಹಾಡಿದರು. ದಿಕ್ಸೂಚಿ ಭಾಷಣ ಮುಗಿದ ಮೇಲೆ ಒಬ್ಬೊಬ್ಬರು ಹಾಡಿದ ಅದೇ ಅಂಬೇಡ್ಕರ್ ರ ಹಾಡುಗಳನ್ನು ರಂಗಮಂದಿರದಲ್ಲಿ ಇದ್ದವರೆಲ್ಲ ನಿಬ್ಬೆರಗಾಗಿ ಕೇಳುತ್ತಿದ್ದರು.
ವಿರಾಮದಲ್ಲಿ ತಮಗಾದ ಸೋಜಿಗವನ್ನು ತಮ್ಮತಮ್ಮಲ್ಲಿಯೇ ವ್ಯಕ್ತಮಾಡಿಕೊಳ್ಳುತ್ತಿದ್ದರು. ಐವರಲ್ಲಿಯೂ ಈ ಮೇಳ ಜನ್ಮ ಸಾರ್ಥಕವಾದ ಭಾವವನ್ನು ಸಂಘಟಕರಲ್ಲೊಬ್ಬರಾದ ಅನಿಲ ಹೊಸಮನಿಯವರಲ್ಲಿ ವ್ಯಕ್ತಪಡಿಸಿದರು ಕೂಡ. ಈ ಕಾರ್ಯಕ್ರಮ ನೋಡಲೆಂದು ಬಂದಿದ್ದ ಗೆಳೆಯ ಡಾ. ವೈ.ಬಿ. ಹಿಮ್ಮಡಿ ಪ್ರತಿಕ್ರಿಯಿಸಿದ್ದು ಹೀಗೆ : “ಪ್ರಗತಿಪರ ಸಂಘಟನಾ ಕಾರ್ಯಕ್ರಮಗಳಲ್ಲಿ ಏನೋ ಮಿಸ್ಸಿಂಗ್ ಅನ್ನಿಸುತ್ತಿತ್ತು. ಈ ಜನಕಲಾ ಸಾಂಸ್ಕೃತಿಕ ಮೇಳ ಅದನ್ನು ತುಂಬಿಕೊಟ್ಟಿದೆ. ಇದನ್ನು ಎಲ್ಲೆಡೆ ವಿಸ್ತರಿಸಬೇಕು” ಎಂದರು. ದಾವಣಗೆರೆಯ ಎ.ಬಿ. ರಾಮಚಂದ್ರಪ್ಪ ತಮ್ಮಲ್ಲಿ ಈ ಕಾರ್ಯಕ್ರಮ ಮಾಡುವುದಾಗಿ ಹೇಳಿದರು.
ಭಾಗವಹಿಸಿದ ಎಲ್ಲಾ ತಂಡಗಳು ಜಿದ್ದಿಗೆ ಬಿದ್ದವರ ಹಾಗೆ ಅದ್ಭುತವಾಗಿ ಹಾಡಿದರು. ಮೇ ಕಲಾಮೇಳ, ಬೆವರ ಬೇರು ಕಲಾತಂಡ, ದಲಿತ ಕಲಾಮಂಡಳಿ, ನಿರ್ದಿಗಂತ ತಂಡ, ಧರಣಿ ಸಾಂಸ್ಕೃತಿಕ ಕಲಾಬಳಗ, ಹರ್ಲಾಪುರ ಕಲಾತಂಡ, ಸರಸ್ವತಿಯವರ ವಚನ ಗಾಯನ, ಕ್ರಾಂತಿಕಾರಿ ಸಾಂಸ್ಕೃತಿಕ ಸಂಘಟನೆಯ ಕಲಾತಂಡಗಳ ಎಲ್ಲಾ ಹಾಡು ಸ್ವರ ಈ ಕಾರ್ಯಕ್ರಮ ಮುಗಿದ ಮೇಲೂ ಅದೆಷ್ಟು ದಿನಗಳ ಕಾಲ ನಮ್ಮ ಕಿವಿಗಳಲ್ಲಿ ರಿಂಗಣಿಸುತ್ತವೆ ಎಂದು ಈಗಲೇ ಹೇಳಲಾಗದು. ಯಾಕೆಂದರೆ ನಮ್ಮಲ್ಲಿದ್ದ ಜಡತ್ವವನ್ನು ಹೊಡೆದೊಡೆಸಿವೆ ಎಂದು ಅನೇಕರು ಮುಕ್ತವಾಗಿ ಹೇಳಿಕೊಂಡರು.
ಅದೇ ಹೋರಾಟದ ಹಾಡುಗಳನ್ನು ಹತ್ತಾರು ತಂಡಗಳಿಂದ ಕೇಳುತ್ತಿದ್ದರೂ ಎಷ್ಟೊಂದು ವೈವಿಧ್ಯಮಯ ! ಎಂಥ ವಿಸ್ಮಯ ಎಂದು ಅನೇಕರು ತಮ್ಮಲ್ಲಿಯೇ ಚರ್ಚಿಸಿಕೊಳ್ಳುವುದು ನಮ್ಮ ಕಿವಿಗಳಿಗೆ ಬೀಳುತ್ತಲೇ ಇತ್ತು. ಈ ಹಾಡುಗಳು ಹತ್ತಾರು ಜನಗಳಲ್ಲಿ ಅಶಾಭಾವನೆ ಮೂಡಿಸುವ ಕೆಲಸ ಮಾಡಿವೆ. ಇಷ್ಟು ಫಲಶೃತಿ ಸಧ್ಯಕ್ಕಂತೂ ಸಿಕ್ಕಿದೆ. ಇದನ್ನೇ ಅನೇಕ ಕಡೆ ಸಂಘಟಿಸುವ ವಿಚಾರವನ್ನು ಹಲವು ಗೆಳೆಯರು ವ್ಯಕ್ತಪಡಿಸಿದ್ದಾರೆ. ಈ ಉತ್ಸಾಹ ಅವರಲ್ಲಿ ಎಷ್ಟು ದಿನ ಉಳಿದು ಕಾರ್ಯಗತವಾಗುತ್ತೋ ಕಾದು ನೋಡಬೇಕು.
ಸಂಜೆ ರಾಯಚೂರ ಸಮುದಾಯ ತಂಡ ವಿಕ್ರಮ ವಿಸಾಜಿ ರಚಿಸಿದ ನಾಟಕ ‘ರಕ್ತ ವಿಲಾಪ’ವನ್ನು ಅದ್ಭುತವಾಗಿ ಅಭಿನಯಿಸಿತು. ಇದೊಂದು ಅತ್ಯುತ್ತಮ ರಂಗಪ್ರಯೋಗ. ಬಿಜಾಪುರದಲ್ಲಿದ್ದ ಕಲ್ಬುರ್ಗಿ ಸರ್ ಸಂಬಂಧಿಕರು, ಅವರ ಶಿಷ್ಯರು ನಾಟಕ ನೋಡಲು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಅವರೆಲ್ಲ ನಾಟಕ ನೋಡಿ ಭಾವುಕರಾಗಿದ್ದರು. ನಾಟಕ ಪರಿಣಾಮಕಾರಿಯಾಗಿತ್ತು. ಹಲವರು ತಮ್ಮ ಊರುಗಳಲ್ಲಿ ಅಭ್ಯಾಸಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿ ಮುಂದೆ ಬಂದಿದ್ದೇ ಇದಕ್ಕೆ ಸಾಕ್ಷಿ.
ನನ್ನ ಬದುಕಿನಲ್ಲಿ 2024 ಅಕ್ಟೋಬರ್ 6 ಅತ್ಯಂತ ಸ್ಮರಣೀಯ ದಿನವಾಯಿತು. ಈ ಜನಕಲಾ ಸಾಂಸ್ಕೃತಿಕ ಮೇಳವನ್ನು ಏನೂ ಕೊರತೆಯಾಗದ ಹಾಗೆ ಸಂಘಟಿಸಿದ ಬಿಜಾಪುರ ಜಿಲ್ಲೆಯ ‘ಮೇ ಸಾಹಿತ್ಯ ಮೇಳ ಬಳಗ’ದ ಎಲ್ಲಾ ಸಂಗಾತಿಗಳಿಗೆ ಮತ್ತು ನಮ್ಮ ಜತೆ ಕೈಜೋಡಿಸಿದ ಇತರ ಎಲ್ಲ ಸಂಘಟನೆಯ ಗೆಳೆಯರಿಗೆ ನಮ್ಮ ಅನಂತ ಶರಣು.